Rajesh Krishnan: ಸ್ಯಾಂಡಲ್‌ವುಡ್ ಗಾಯಕ ರಾಜೇಶ್ ಕೃಷ್ಣನ್‌ಗೆ ಅಮೆರಿಕದಿಂದ ಗೌರವ
Rajesh Krishnan Musical Day: ಮೆಲೋಡಿ ಕಿಂಗ್, ಸ್ಯಾಂಡಲ್‌ವುಡ್ ಗಾಯಕ ರಾಜೇಶ್ ಕೃಷ್ಣನ್ ಅವರ ಪ್ರತಿಭೆ ಅಮೆರಿಕಕ್ಕೂ ಹರಡಿದೆ. ರಾಜೇಶ್ ಕೃಷ್ಣನ್ ಇದೀಗ ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರದಿಂದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. 2025ರ ಏ. 25 ಅನ್ನು ʼರಾಜೇಶ್ ಕೃಷ್ಣನ್ ಸಂಗೀತ ದಿನʼ ಎಂದು ಘೋಷಿಸಲಾಗಿದೆ.


ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ, ರಾಜ್ಯ ಚಲಚಚಿತ್ರ ಪ್ರಶಸ್ತಿ ಪುರಸ್ಕೃತ, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ (Rajesh Krishnan) ಅವರಿಗೆ ಜಾಗತಿಕ ಗೌರವ ಲಭಿಸಿದೆ. ತಮ್ಮ ಮಧುರ ಕಂಠದಿಂದ ಸಿನಿ ರಸಿಕರ ಗಮನ ಸೆಳೆದ ರಾಜೇಶ್ ಕೃಷ್ಣನ್ ಇದೀಗ ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರದಿಂದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. 2025ರ ಏ. 25 ಅನ್ನು ʼರಾಜೇಶ್ ಕೃಷ್ಣನ್ ಸಂಗೀತ ದಿನʼ (Rajesh Krishnan Musical Day) ಎಂದು ಘೋಷಿಸಲಾಗಿದೆ. ಈ ಸಂತಸದ ವಿಚಾರವನ್ನು ರಾಜೇಶ್ ಕೃಷ್ಣನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್, ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಏ. 25ರಂದು ಅಮೆರಿಕದ ಬ್ರೂಕ್‌ಫೀಲ್ಡ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭಾಗಿಯಾಗಿದ್ದ ರಾಜೇಶ್ ಕೃಷ್ಣನ್ ತಮ್ಮ ಹಾಡುಗಳ ಮೂಲಕ ಜನರ ಮನರಂಜಿಸಿದ್ದರು. ಈ ವೇಳೆ ಅವರಿಗೆ ಬ್ರೂಕ್‌ಫೀಲ್ಡ್ ಮೇಯರ್ ಸ್ಟೀವನ್ ವಿ. ಪಾಂಟೊ ಅತ್ಯುನ್ನತ್ತ ಗೌರವ ʼರಾಜೇಶ್ ಕೃಷ್ಣನ್ ಸಂಗೀತ ದಿನʼ ಪ್ರದಾನ ಮಾಡಿದರು.
ರಾಜೇಶ್ ಕೃಷ್ಣನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ʼʼರಾಜೇಶ್ ಕೃಷ್ಣನ್ ಅವರು ಪ್ರತಿಭಾವಂತ ಹಿನ್ನಲೆ ಗಾಯಕ. ಅವರು ಭಾರತೀಯ ಚಿತ್ರರಂಗಕ್ಕೆ ಅದರಲ್ಲಿಯೂ ವಿಶೇಷವಾಗಿ ಕನ್ನಡ ಸಿನಿ ಸಂಗೀತಕ್ಕೆ ಸ್ಮರಣೀಯ ಕೊಡುಗೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನ 7,000ಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರು ಭಾರತ ಮತ್ತು ಅಮೆರಿಕದ ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿಯೂ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಸುಮಾರು 35 ವರ್ಷಗಳಿಂದ ರಾಜೇಶ್ ಕೃಷ್ಣ್ ಅವರ ಸುಮಧುರ ಧ್ವನಿ ಭಾರತೀಯ ಚಿತ್ರರಂಗದ ಸಂಗೀತ, ಭಕ್ತಿ ಗೀತೆ, ಆಲ್ಬಂ ಹಾಡುಗಳಲ್ಲಿ ಮೂಡಿ ಬರುತ್ತಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅತ್ಯುತ್ತಮ ಗಾಯಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಅವರು ಪಡೆದಿದ್ದಾರೆʼʼ ಎಂದು ಪ್ರಶಸ್ತಿ ಪತ್ರದಲ್ಲಿ ವಿವರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Kuladalli keelyavudo Movie: ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ
1991ರಲ್ಲಿ ತೆರೆಕಂಡ ಕನ್ನಡದ ʼಗೌರಿ ಗಣೇಶʼ ಚಿತ್ರದ ʼಮಾತಿನಲ್ಲೇʼ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಜೇಶ್ ಕೃಷ್ಣನ್ ಬಳಿಕೆ ಹಿಂದಿರುಗಿ ನೋಡಲೇ ಇಲ್ಲ. ಕನ್ನಡ ಜತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳ ಹಾಡಿಗೂ ಧ್ವನಿಯಾಗಿದ್ದಾರೆ. ಕರ್ನಾಟಕ, ಆಂಧ್ರ ಪ್ರದೇಶದ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲದೆ, ಫಿಲ್ಮ್‌ಫೇರ್ ಅವಾರ್ಡ್, ಸುವರ್ಣ ಫಿಲ್ಮ್ ಅವಾರ್ಡ್, ಉದಯ ಫಿಲ್ಮ್ ಅವಾರ್ಡ್, ಸೈಮಾ ಅವಾರ್ಡ್ ಮುಂತಾದ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಮೆಲೋಡಿ ಹಾಡುಗಳಿಗೆ ಜನಪ್ರಿಯರಾಗಿರುವ ಅವರು ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಯೋಗರಾಜ್ ಭಟ್-ಗಣೇಶ್-ದಿಗಂತ್ ಕಾಂಬಿನೇಷನ್‌ನ ʼಗಾಳಿಪಟʼ ಚಿತ್ರದಲ್ಲಿನ ರಾಜೇಶ್ ಕೃಷ್ಣನ್ ಪಾತ್ರ ಇಂದಿಗೂ ಜನಪ್ರಿಯ.
ಮಾತ್ರವಲ್ಲ ಹಲವು ಚಿತ್ರಗಳಲ್ಲಿನ ಪಾತ್ರಕ್ಕೆ ಧ್ವನಿಯನ್ನೂ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿಯೂ ಗಮನ ಸೆಳೆದಿದ್ದಾರೆ.