ʻಸೀತಾರಾಮʼ ಸೀರಿಯಲ್ ಖ್ಯಾತಿಯ ರೀತಿ ಸಿಂಗ್ ಅಭಿನಯದ ʻನನ್ನ ಮಗಳೇ ಸೂಪರ್ ಸ್ಟಾರ್ʼ ಸಿನಿಮಾ ಟೀಸರ್ ರಿಲೀಸ್
‘ಸೀತಾರಾಮ’ ಧಾರಾವಾಹಿ ಖ್ಯಾತಿಯ ಬಾಲನಟಿ ರೀತು ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಡಾ. ಜಯಮಾಲಾ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆಯುರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.
-
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಸೀತಾರಾಮ’ ಖ್ಯಾತಿಯ ಬಾಲನಟಿ ರೀತು ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಮಾಜಕ್ಕೆ ಉತ್ತಮ ಸಂದೇಶ ಹೊತ್ತ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರದ ಟೀಸರ್ ಹಾಗೂ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.
ಹನಿ ಫಿಲಂಸ್ ಲಾಂಛನದಲ್ಲಿ ಎನ್.ಎ. ಶಿವಕುಮಾರ್ (ಕುಮಾರ್ ನೊಣವಿನಕೆರೆ) ನಿರ್ಮಿಸಿರುವ ಈ ಚಿತ್ರಕ್ಕೆ ಆಯುರ್ ಆಕ್ಷನ್ ಕಟ್ ಹೇಳಿದ್ದಾರೆ. ‘ಭಜರಂಗಿ 2’ ಖ್ಯಾತಿಯ ನಟ ಚೆಲುವರಾಜ್ ಹಾಗೂ ಸಂಭ್ರಮಶ್ರೀ ಈ ಚಿತ್ರದ ಮೂಲಕ ನಾಯಕ-ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಟೀಸರ್, ಹಾಡುಗಳು ರಿಲೀಸ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಹಾಗೂ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ನನ್ನ ಮಗಳೇ ಸೂಪರ್ ಸ್ಟಾರ್ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಿದರು. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸುಂದರರಾಜ್, ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಮತ್ತು ಪರಿಸರ ಪ್ರೇಮಿ ರೇವತಿ ಕಾಮತ್ ಹಾಡುಗಳನ್ನು ಲೋಕಾರ್ಪಣೆಗೊಳಿಸಿದರು.
ಮಕ್ಕಳ ಮೇಲೆ ಪೋಷಕರು ತಮ್ಮ ಆಸೆಗಳನ್ನು ಹೇರಬೇಡಿ
ಮೂಲತಃ ಸಂಕಲನಕಾರರಾಗಿದ್ದು, ಇದೀಗ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿರುವ ಆಯುರ್, "ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕು, ತಾವಂದುಕೊಂಡಂತೆ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ, ಮಕ್ಕಳಿಗೂ ಅವರದೇ ಆದ ಕನಸುಗಳಿರುತ್ತವೆ. ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಿದಾಗ ಆ ಮುಗ್ಧ ಮನಸ್ಸುಗಳು ಎಂತಹ ತೊಂದರೆ ಅನುಭವಿಸುತ್ತವೆ ಎಂಬುದೇ ಈ ಚಿತ್ರದ ಮುಖ್ಯ ಕಥಾಹಂದರ. ಚಿತ್ರದ ಮೂರೂ ಹಾಡುಗಳನ್ನು ಬಿ.ಆರ್. ಲಕ್ಷ್ಮಣರಾವ್ ಅವರೇ ಬರೆದಿದ್ದು, ಕೆವಿನ್ ಅದ್ಭುತ ಸಂಗೀತ ನೀಡಿದ್ದಾರೆ" ಎಂದು ಹೇಳಿದ್ದಾರೆ.
ವಿಲನ್‌ನಿಂದ ಹೀರೋ ಆದ ಚೆಲುವರಾಜ್
"15 ವರ್ಷಗಳ ಹಿಂದೆ ನಾನು ‘ಮಹಾಭಾರತ’ ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರ ಮಾಡುವಾಗ ಇದೇ ನಿರ್ಮಾಪಕ ಕುಮಾರ್ ಅವರು ನನಗೆ ಮೇಕಪ್ ಮಾಡಿದ್ದರು. ಇಲ್ಲಿಯವರೆಗೆ ವಿಲನ್ ಪಾತ್ರಗಳಲ್ಲೇ ಗುರುತಿಸಿಕೊಂಡಿದ್ದ ನನಗೆ ಈ ಚಿತ್ರದ ಮೂಲಕ ನಾಯಕನಾಗಿ, ಕಮರ್ಷಿಯಲ್ ಶೈಲಿಗಿಂತ ಭಿನ್ನವಾದ ವಿಭಿನ್ನ ಪಾತ್ರ ಮಾಡುವ ಅವಕಾಶ ಸಿಕ್ಕಿದೆ" ಎಂದು ನಟ ಚೆಲುವರಾಜ್ ಹರ್ಷ ವ್ಯಕ್ತಪಡಿಸಿದರು. ನಟಿ ಸಂಭ್ರಮಶ್ರೀ ಮಾತನಾಡಿ, ತಾವು ಚಿತ್ರದಲ್ಲಿ ಬೇಬಿ ರೀತು ಸಿಂಗ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಕುಟುಂಬವೂ ನೋಡಬೇಕಾದ ಚಿತ್ರವಿದು ಎಂದರು.
ಶೀಘ್ರದಲ್ಲೇ ಈ ಸಿನಿಮಾ ರಿಲೀಸ್
ನಿರ್ಮಾಪಕ ಎನ್. ಎ. ಶಿವಕುಮಾರ್ ಮಾತನಾಡಿ, "ಇದು ನಮ್ಮ ಹನಿ ಫಿಲಂ ಮೇಕರ್ಸ್ ಸಂಸ್ಥೆಯ ಮೂರನೇ ಚಿತ್ರ. ಈಗಾಗಲೇ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡಿದ್ದು, ಮುಂದಿನ ತಿಂಗಳು ಚಿತ್ರವನ್ನು ಬೆಳ್ಳಿಪರದೆಗೆ ತರಲು ಭರಪೂರ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಮಾಹಿತಿ ನೀಡಿದರು. ಛಾಯಾಗ್ರಾಹಕರಾಗಿ ರಾಘವೇಂದ್ರ ರೆಡ್ಡಿ, ಸಚಿನ್, ಸಂಕಲನಕಾರರಾಗಿ ರಾಘವ ಅರ್ಜುನ್ ಡೋಣಿ ಹಾಗೂ ಪ್ರಸಾದನ ಕಲಾವಿದರಾಗಿ ರಾಮಕೃಷ್ಣ ಕೆಲಸ ಮಾಡಿದ್ದಾರೆ.