ನಟ ರಾಜೇಶ್ ಧ್ರುವ (Rajesh Dhruva) ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು, ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ. ಸದ್ಯ ಈ ಧಾರಾವಾಹಿ ಕೊನೆಗೊಂಡು ವರ್ಷಗಳು ಕಳೆದಿವೆ. ಹೀಗಿರುವಾಗ ಇವರು ಮತ್ತೆ ಈಗ ಸುದ್ದಿಯಲ್ಲಿರಲು ಕಾರಣ ಭಾಗ್ಯ ಲಕ್ಷ್ಮೀ ಧಾರಾವಾಹಿ. ಈ ಧಾರಾವಾಹಿಯಲ್ಲಿ ಕಿಶನ್ ಎಂಬ ಬಹುಮುಖ್ಯ ಪಾತ್ರದಲ್ಲಿ ರಾಜೇಶ್ ಧ್ರುವ ನಟಿಸುತ್ತಿದ್ದಾರೆ. ಕಳೆದ ಒಂದು ತಿಂಗಳುಗಳಿಂದ ಈ ಧಾರಾವಾಹಿಯಲ್ಲಿ ಇವರದ್ದೇ ಹವಾ ಎನ್ನಬಹುದು.
ಭಾಗ್ಯ ಲಕ್ಷ್ಮೀ ಧಾರಾವಾಹಿಯ ಕಥೆ ಎಲ್ಲೆಲ್ಲೋ ಸಾಗುತ್ತಿದೆ ಎಂಬ ಹೊತ್ತಿಗೆ ಎಂಟ್ರಿ ಕೊಟ್ಟಿದ್ದು ಕಿಶನ್ ಪಾತ್ರ. ಇವರ ಪಾತ್ರ ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದೆ. ರಾಜೇಶ್ ಧ್ರುವ ಈ ಪಾತ್ರದ ಮೂಲಕ ಕನ್ನಡ ಜನತೆಗೆ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ಸದ್ಯ ರಾಜೇಶ್ ಅವರು ವಿಶ್ವವಾಣಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಕಿರುತೆರೆ ಲೋಕದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬೇರೆ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ರಿಮೇಕ್ ಆಗುತ್ತಿರುವುದು ಹೆಚ್ಚಾಗಿದೆ. ಇದರ ಕುರಿತು ಮಾತನಾಡಿದ ರಾಜೇಶ್ ಧ್ರುವ, ‘‘ರಿಮೇಕ್ ಅಂತ ಬಂದಾಗ ಒಂದು ಬಾರ್ಡರ್ ಇರುತ್ತದೆ. ರೈಟರ್ ಅಥವಾ ಆಕ್ಟರ್ ಅದನ್ನು ಮೀರಿ ಹೋಗೋಕೆ ಆಗೋದಿಲ್ಲ. ನಾನು 3-4 ರಿಮೇಕ್ ಸೀರಿಯಲ್‌ಗಳನ್ನು ಮಾಡಿದ್ದೇನೆ. ತುಂಬಾ ಕೆಟ್ಟ ಅನುಭವ. ನಾನು ಒಂದು ಸೀರಿಯಲ್ ಅನ್ನು ಮಾಡುತ್ತಿದ್ದೆ. ಹೇಗೆ ಅಂದ್ರೆ, ತಮಿಳಿನಲ್ಲಿರುವ ಸಣ್ಣ ಡೈಲಾಗ್ ಕೂಡ ಚೇಂಜ್ ಮಾಡದೇ ಇಲ್ಲಿ ಅನುಕರಣೆ ಮಾಡುತ್ತಿದ್ದರು. ಸ್ವಮೇಕ್ ಅಂತ ಬಂದಾಗ ಫ್ರೀಡಂ ಇರುತ್ತದೆ, ಹಾಗೆಯೇ ಜನ ಕೂಡ ಸ್ವೀಕರಿಸುತ್ತಾರೆ’’ ಎಂದು ಹೇಳಿದ್ದಾರೆ.
‘‘ಕೆಲ ಪ್ರೊಡಕ್ಷನ್ ಹೌಸ್‌ನಲ್ಲಿ ಈಗ ಪೇಮೆಂಟ್ ಕೂಡ ತುಂಬಾ ಕಷ್ಟ ಆಗಿದೆ. ಕಮಿಟ್ ಆಗಬೇಕಾದರೆ ಅವರ ಅಗ್ರಿಮೆಂಟ್‌ಗಳನ್ನು ನಾವು ಸೈನ್ ಮಾಡಿಕೊಂಡು ಹೋಗಬೇಕು. ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ನಿಮ್ಮ ಪೇಮೆಂಟ್ ಬರುತ್ತದೆ. ಜನವರಿಯಲ್ಲಿ ನಾವು ಶೂಟಿಂಗ್ ಮಾಡಿದ್ರೆ ಆ ಪೇಮೆಂಟ್ ಮಾರ್ಚ್ ಕೊನೆಯಲ್ಲಿ ಬರುತ್ತೆ. ನಾಯಕ ನಟರಾಗಿದ್ದವರು ಮಾತ್ರ ಸೀರಿಯಲ್‌ನಿಂದ ದುಡ್ಡು ಮಾಡೋಕೆ ಸಾಧ್ಯ ಅನ್ನೋದು ನನ್ನ ಅಭಿಪ್ರಾಯ’’ ಎಂದರು ರಾಜೇಶ್ ಧ್ರುವ.
Bhoomi Shetty: ನಾನೇಕೆ ಹೆಣ್ಣಾಗಿ ಹುಟ್ಟಿದೆ: ಶಕ್ತಿ ದೇವತೆ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ