ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಬಾರಿಯ ಬಿಗ್ ಬಾಸ್ 19ಗೆ (Bigg Boss 19) ಭಾನುವಾರ ಅದ್ಧೂರಿ ಚಾಲನೆ ದೊರಕಿದೆ. ಪ್ರತಿ ವರ್ಷದಂತೆ, ಈ ವರ್ಷವೂ ಸಲ್ಮಾನ್ ಖಾನ್ ಅವರ ಕಾರ್ಯಕ್ರಮ ಬಿಗ್ ಬಾಸ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಈಗಾಗಲೇ ಮನೆಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರತಿ ಬಾರಿಯಂತೆ ಈ ಬಾರಿ ಕೂಡ ಮನೆಯನ್ನು ವಿಭಿನ್ನ ಥೀಮ್ ಮೇಲೆ ಸಾಕಷ್ಟು ಶ್ರಮ ಮತ್ತು ಚಿಂತನೆಯೊಂದಿಗೆ ನಿರ್ಮಿಸಲಾಗಿದೆ, ಆದರೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹಿಂದಿನ ಬಾರಿಯ ಭವ್ಯತೆ ಮತ್ತು ಗ್ಲಾಮರ್ ಇಲ್ಲ. ಈ ಬಾರಿ ಅದನ್ನು ಸರಳವಾಗಿ ಇರಿಸಲಾಗಿದೆ. ಈ ಬಾರಿಯ ಬಿಗ್ ಬಾಸ್ ಥೀಮ್ ರಾಜಕೀಯ. ಹೀಗಾಗಿ ಡೆಮಾಕ್ರಸಿ ಥೀಮ್ ತಕ್ಕಂತೆ ಈ ಬಾರಿಯ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಮನೆಯೊಳಗೆ ಇರುವ ಪ್ರತಿಯೊಂದು ಕಲ್ಲು ಕೂಡ ಇದೇ ಥೀಮ್ ಅನ್ನು ನೆನಪಿಸುತ್ತದೆ.
ಫಿಲ್ಮ್ ಸಿಟಿಯಲ್ಲಿರುವ ಈ ಮನೆ ಸುಮಾರು 100 ಕ್ಯಾಮೆರಾಗಳನ್ನು ಹೊಂದಿದ್ದು, ಹೊರಗಿನ ಹುಲ್ಲುಹಾಸು, ಈಜುಕೊಳ ಮತ್ತು ಜಿಮ್ ಪ್ರದೇಶವನ್ನು ವಿಶಾಲವಾಗಿ ನಿರ್ಮಿಸಲಾಗಿದೆ. ಬಿಗ್ ಬಾಸ್ 19ರ ಮನೆಯೊಳಗೆ ಒಂದು ಸ್ಪೀಕರ್ ಕೋಣೆ ಇರುತ್ತೆ. ಹಾಗೇ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು 'ವಿ' ಆಕಾರದ ಕೊಠಡಿಯೊಳಗೆ ಕುಳಿತುಕೊಳ್ಳುತ್ತಾರೆ.
ಇನ್ನು ಈ ಸೀಸನ್‌ನಲ್ಲಿ ಮತದಾನ ಮಾಡುವುದಕ್ಕೆ ವಿಶೇಷ ಕೊಠಡಿ ನಿರ್ಮಿಸಲಾಗಿದೆ. ಹಾಗೇ ಸ್ಪರ್ಧಿಗಳು ಚರ್ಚೆ ಮಾಡುವುದಕ್ಕೂ ವಿಶೇಷವಾದ ಕೊಠಡಿಗಳನ್ನು ನೋಡಬಹುದಾಗಿದೆ. ಮತ್ತೊಂದು ವಿಶೇಷ ಎಂದರೆ, ಮನೆಯೊಳಗೆ ಕಾಲಿಟ್ಟ ತಕ್ಷಣ ಹಾಗೂ ಅಡುಗೆ ಮನೆಯೊಳಗೆ ಪಕ್ಷಿಗಳು ಮತ್ತು ಪ್ರಾಣಿಗಳ ಚಿತ್ರಗಳು ಸಾಕಷ್ಟಿವೆ. ಕೃತಕ ಮರಗಳನ್ನು ಸೃಷ್ಟಿಸಿ ಸುಂದರವಾದ ಉದ್ಯಾನವನವನ್ನು ಕೂಡ ಸೃಷ್ಠಿಸಲಾಗಿದೆ. ಬಿಗ್ ಬಾಸ್ ಸೀಸನ್ 19 ಮನೆಯನ್ನು ಈ ಬಾರಿ ಕೂಡ ಕಲಾ ನಿರ್ದೇಶಕ ಓಮಂಗ್ ಕುಮಾರ್ ಮತ್ತು ವಿನ್ಯಾಸಕಿ ವನಿತಾ ಗರುಡ್ ನಿರ್ಮಿಸಿದ್ದಾರೆ.