ಸುಂದರವಾಗಿರೋ ಹುಡುಗೀರು ಮೋಸ ಮಾಡುತ್ತಾರೆ, ಅವರು ನಂಬಿಕೆಗೆ ಅರ್ಹರಲ್ಲ ಅನ್ನೋದನ್ನ ತುಂಬ ಗಟ್ಟಿಯಾಗಿ ನಂಬಿದವನು ದತ್ತ. ತನಗೆ ಮುಳುವಾಗಿದ್ದ ಸೌಂದರ್ಯವನ್ನ ಮರೆಮಾಚೋಕೆ ಕಪ್ಪು ಬಣ್ಣ ಹಚ್ಚಿಕೊಂಡವಳು ದೃಷ್ಟಿ (Drishti bottu). ವಿಧಿ ಇವರಿಬ್ಬರನ್ನ ಒಂದುಗೂಡಿಸಿದ್ದು, ದೃಷ್ಟಿ-ದತ್ತನ ಜೀವ ಕಾಪಾಡಿದ್ದು, ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸಲಿಗೆ ಮೂಡಿದ್ದು ಇಲ್ಲಿಯವರೆಗಿನ ಕತೆ. ಆದರೀಗ ದೃಷ್ಟಿಯ ನಿಜರೂಪ ದರ್ಶನ ಆಗುವ ಸಮಯ ಬಂದಿದೆ. ಅದು ಕೂಡ ದತ್ತನ ಎದುರೇ. ಈ ಮೂಲಕ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಬಹುದೊಡ್ಡ ಟ್ವಿಸ್ಟ್ ಕೊಡಲಾಗಿದೆ.
ತಮ್ಮನ ವಿರುದ್ಧ ಒಳಗಿಂದೊಳಗೇ ದ್ವೇಷ ಸಾಧಿಸುವ ಶರಾವತಿಗೆ, ದತ್ತನ ಜೀವನಕ್ಕೆ ದೃಷ್ಟಿ ಬಂದಿದ್ದು ನುಂಗಲಾರದ ತುತ್ತಾಯಿತು. ಶರಾವತಿಯ ಎಲ್ಲ ಕುತಂತ್ರಗಳಿಗೂ ಬ್ರೇಕ್ ಹಾಕಿ, ಅತ್ತಿಗೆಗೇ ಸೆಡ್ಡು ಹೊಡೆದು ನಿಂತು, ದತ್ತನನ್ನ ಕಾಪಾಡೋ ಗೋಡೆಯಾಗಿರುವ ದೃಷ್ಟಿಗೆ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾಗುತ್ತಲೇ ಇದ್ದರೈ ಎಲ್ಲವನ್ನೂ ದಾಟಿ, ಇನ್ನೇನು ದತ್ತನ ಜೊತೆ ಸಂತೋಷದಿಂದ ಸಂಸಾರ ಶುರು ಮಾಡುತ್ತಾಳೆ, ಪ್ರೀತಿಯಿಂದ ಬಾಳ್ವೆ ಮಾಡುತ್ತಾರೆ ಎನ್ನುವ ಹೊತ್ತಲ್ಲಿ, ಕತೆಯಲ್ಲಿ ಅತೀ ದೊಡ್ಡ ಟ್ವಿಸ್ಟ್ ಎದುರಾಗಿದೆ.
ದೃಷ್ಟಿ ಅಕ್ಕ ಸೀಮಾಳನ್ನ ದಾಳವಾಗಿ ಬಳಸಿಕೊಳ್ತಿರೋ ಶರಾವತಿಗೆ, ದೃಷ್ಟಿ ಎಲ್ಲರಿಂದ ಮುಚ್ಚಿಟ್ಟಿರೋ ಗುಟ್ಟು ಗೊತ್ತಾಗಿದೆ. ಸೀಮಾಳಿಗೆ ತನ್ನ ತಂಗಿಯ ಜೀವನ ಕೆಡಿಸುವ ದುರುದ್ದೇಶ ಇಲ್ಲದೇ ಹೋದರೂ, ಅವಳು ಬಾಯಿ ಬಿಡಲೇಬೇಕಾದ ಸಂದಿಗ್ಧ ಎದುರಾಗುತ್ತದೆ. ಮತ್ತೊಂದೆಡೆ ಶರಾವತಿಯ ಬಲಗೈ ಥರಹ ಇರುವ ಕರೀಂ, ದತ್ತನನ್ನ ಕೊನೆಗಾಣಿಸುವುದಕ್ಕೆ ದುಬಾಯಿಯಿಂದ ಬಳ್ಳಾರಿಗೆ ಬಂದಿದ್ದಾನೆ. ದತ್ತನ ಸುತ್ತ ಒಂದು ಚಕ್ರವ್ಯೂಹ ರಚಿಸಿದ್ದಾನೆ. ಸೀಮಾಳನ್ನ ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿಗೆ ತಳ್ಳಿ, ದತ್ತನನ್ನ ಇನ್ನೆಲ್ಲಿಗೋ ಕಳಿಸಿ, ದೃಷ್ಟಿಯನ್ನ ಕಿಡ್ನಾಪ್ ಮಾಡಿದ್ದಾನೆ. ಇದೀಗ ದತ್ತ ಕಷ್ಟಪಟ್ಟು ದೃಷ್ಟಿಯನ್ನ ಹುಡುಕುತ್ತಿದ್ದಾನೆ. ಅಲ್ಲಿ ದೃಷ್ಟಿಯ ಕಾಪಿಟ್ಟುಕೊಂಡಿದ್ದ ಸತ್ಯ ಆಚೆ ಬರಲಿದೆ.
ದತ್ತಾಭಾಯ್‌ಗೆ ಮೊದಲನೇಯದಾಗಿ, ಸುಂದರವಾಗಿರೋ ಹುಡುಗಿಯರ ಮೇಲೆ ನಂಬಿಕೆ ಇಲ್ಲ. ಎರಡನೇಯದಾಗಿ, ನಂಬಿಕೆ ದ್ರೋಹ ಮಾಡಿದವರನ್ನ ಯಾವತ್ತಿಗೂ ಕ್ಷಮಿಸಲ್ಲ. ದೃಷ್ಟಿಯೇ ತನ್ನ ಪ್ರಪಂಚ, ದೃಷ್ಟಿಯೇ ತನ್ನ ಜೀವ ಅಂದುಕೊಂಡಿರುವ ದತ್ತನಿಗೆ, ಅವಳು ಮುಚ್ಚಿಟ್ಟಿರೋ ಈ ಸತ್ಯ ಗೊತ್ತಾದರೆ ಹೇಗೆ ಸಹಿಸಿಕೊಳ್ತಾನೆ? ದೃಷ್ಟಿಯ ಅಸ್ತಿತ್ವವೇ ಅವನಿಗೆ ಸುಳ್ಳು ಎನಿಸಬಹುದೇ? ಅವಳ ಮೇಲೆ ಈಗತಾನೇ ಚಿಗುರಿರುವ ಪ್ರೀತಿ ಸಂಪೂರ್ಣವಾಗಿ ನೆಲಕ್ಕಚ್ಚಬಹುದೇ? ಅಥವಾ, ಅವಳನ್ನ ಅರ್ಥ ಮಾಡಿಕೊಂಡು, ಅವಳ ಪರಿಸ್ಥಿತಿಯನ್ನ ತಿಳಿದುಕೊಂಡು, ಕಾರಣಗಳನ್ನ ಹುಡುಕಿ, ದೃಷ್ಟಿಯನ್ನ ಇರುವ ಹಾಗೇ ಒಪ್ಪಬಹುದೇ? ಎಂಬುದು ಕುತೂಹಲ.
ಇತ್ತ ಸೆಲ್ಫ್ ಡಿಫೆನ್ಸ್‌ಗೋಸ್ಕರ, ದುರುಳರ ಕೆಂಗಣ್ಣಿನಿಂದ ಪಾರಾಗಲು ತನ್ನ ಅಸಲೀ ಬಣ್ಣವನ್ನ ಮರೆಮಾಚೆದ್ದ ದೃಷ್ಟಿಗೆ ದೊಡ್ಡ ಸಂಕಷ್ಟ ಬಂದೊದಗಿದೆ. ಯಾವ್ಯಾವುದೋ ಪರಿಸ್ಥಿತಿಗೆ ಸಿಲುಕಿ, ಹೇಳಬೇಕೆಂದರೂ ಹೇಳಿಕೊಳ್ಳಲಾಗದ ಸ್ಥಿತಿ ಅವಳಿಗಿತ್ತು. ಇನ್ನೇನು ಎಲ್ಲವನ್ನೂ ಹೇಳಿಕೊಳ್ಳಬೇಕೆಂದು ಅಂದುಕೊಂಡಿರುವ ಹೊತ್ತಲ್ಲಿ, ದೃಷ್ಟಿ ಕಿಡ್ನಾಪ್ ಆಗಿದ್ದಾಳೆ. ಮರಳಿ ದತ್ತಾಭಾಯ್‌ನ ಸೇರುವ ಹೊತ್ತಿಗೆ, ದೃಷ್ಟಿಯ ಚರ್ಮಕ್ಕೆ ಬಳಿದುಕೊಳ್ತಿದ್ದ ಕಪ್ಪು ಬಣ್ಣ ಸುರಿಯುವ ಮಳೆಯಲ್ಲಿ ಕಳೆದುಹೋಗಲಿದೆ.
ವರ್ಷಾನುಗಟ್ಟಲೆಯಿಂದ ಮುಸುಕಿನ ಹಿಂದಿದ್ದ ಅವಳಿಗೆ ಈಗ ಅಚಾನಕ್ಕಾಗಿ ಎಲ್ಲರ ಮುಂದೆ ಅವಳ ರಹಸ್ಯ ಬಯಲಾಗುವಾಗ ಅವಳ ಮನಸ್ಥಿತಿ ಏನಿರಬಹುದು? ಇನ್ನು ಅವಳಿಗೆ ಎದುರು ಆಗುವ ಸಮಸ್ಯೆಗಳು, ಅದನ್ನ ಅವಳು ಎದುರಿಸುವ ಬಗೆ, ದತ್ತನ ಸಿಟ್ಟು, ಕೋಪ, ಮೌನ ಎಲ್ಲವೂ ಅವಳನ್ನ ಯಾವ ರೀತಿ ಕುಗ್ಗಿಸಬಹುದು? ಶರಾವತಿ ಅಂದುಕೊಂಡಂತೆಯೇ ಎಲ್ಲವನ್ನೂ ಸಾಧಿಸಿಬಿಡುತ್ತಾಳಾ ಎಂಬುದು ರೋಚಕತೆ ಸೃಷ್ಟಿಸಿದೆ. ದೃಷ್ಟಿಬೊಟ್ಟು ಧಾರಾವಾಹಿ ಪ್ರತೀದಿನ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
Bhagya Lakshmi Serial: ಆದೀಯ ರಹಸ್ಯ ತಿಳಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ ಕನ್ನಿಕಾ