ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ದಿಢೀರ್ ಸಾವು ಅವರ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಮೇ 12 ರ ಬೆಳಗ್ಗಿನ ಜಾವ ಸುಮಾರು 1.30ಕ್ಕೆ ಬಿಪಿ ಲೋ ಆಗಿ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾದರು. ಮನೆಗೆ ಆಧಾರವಾಗಿದ್ದ ಮಗ ರಾಕೇಶ್ನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವಿದೆ.
ನಟ ರಾಕೇಶ್ ಪೂಜಾರಿ ಅವರ ಸಾವು ಅನೇಕರಿಗೆ ಆಘಾತ ಉಂಟು ಮಾಡಿದೆ. ಕೇವಲ ಅವರ ಜೊತೆ ಝೀ ಕನ್ನಡದಲ್ಲಿ ಕೆಲಸ ಮಾಡಿವರಿಗೆ ಮಾತ್ರವಲ್ಲದೆ ಬೇರೆ ಚಾನೆಲ್ನ ಹಾಸ್ಯ ಕಲಾವಿದರಿಗೆ ಕೂಡ ರಾಕೇಶ್ ನಿಧನ ಶಾಕ್ ನೀಡಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಸಾಖಷ್ಟು ಖ್ಯಾತಿ ಪಡೆದ ಹುಲಿ ಕಾರ್ತಿಕ್ ಕೂಡ ರಾಕೇಶ್ ಅವರನ್ನು ನೆನೆದು ಕಣ್ಣೀಟ್ಟಿದ್ದಾರೆ. ಈ ಕುರಿತು ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕಾರ್ತಿಕ್, ರಾಕೇಶ್ ಪೂಜಾರಿ ಹೋದ ಮೂರ್ನಾಲ್ಕು ದಿನಕ್ಕೆ, ನನಗೆ ಹಿಂದಿನ ದಿನ ಮೇಕಪ್ ಮಾಡಿದ್ದ ವ್ಯಕ್ತಿ ತೀರಿಕೊಂಡರು. ಇಬ್ಬರು ತೀರಿಕೊಂಡ ನಂತರ ಒಂದು ವಾರದಿಂದ ನಿದ್ದೆ ಇಲ್ಲ. ಡಿಪ್ರೆಶನ್‌ಗೆ ಹೋಗಿ ಬಿಟ್ಟಿದ್ದೆ. ಏನೇನೋ ಯೋಚನೆ ಬರೋದಕ್ಕೆ ಶುರುವಾಯಿತು ಎಂದು ಹೇಳಿದ್ದಾರೆ.
ನಾನು ಮತ್ತು ರಾಕೇಶ್ ಮೊದಲು ಬೇರೆ ಬೇರೆ ಚಾನೆಲ್ ನಲ್ಲಿ ಇದ್ದೆವು. ಆದರೆ ಈವೆಂಟ್ಸ್‌ನಲ್ಲಿ ಒಟ್ಟಿಗೆ ಸಿಗುತ್ತಿದ್ದೆವು. ನಾವೆಲ್ಲಾ ಬೇರೆ ಚಾನೆಲ್ ಅಂತ ನಮಗೆ ಅನಿಸುತ್ತಿರಲೇ ಇಲ್ಲ. ನನ್ನ ಮನೆಯಲ್ಲಾಗಲಿ ರಾಕೇಶ್ ಮನೆಯಲ್ಲಾಗಲಿ ಅಥವಾ ಇನ್ನೊಬ್ಬರ ಮನೆಯಲ್ಲಾಗಲಿ, ನಾವು ಇಲ್ಲಿಗೆ ಬರುತ್ತೇವೆ ಅಂತ ಕನಸು ಕಂಡಿರಲಿಲ್ಲ. ಇಲ್ಲಿಗೆ ಬಂದು ಕಲಾವಿದರಾಗಿದ್ದೇವೆ. ಇಲ್ಲಿಗೆ ಬಂದಮೇಲೆ ನಾವು ಏನೂ ಕನಸು ಕಟ್ಟಿಕೊಂಡಿಲ್ಲ. ಬರೀ ಕೆಲಸದ ಬಗ್ಗೆ ಅಷ್ಟೇ ನಾವು ಕನಸು ಕಂಡಿರುವುದು ಎಂದು ಹೇಳಿದ್ದಾರೆ.
ನಮ್ಮ ಕುಟುಂಬಸ್ಥರು ನಮ್ಮ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡು ಬಿಟ್ಟಿದ್ದಾರೆ. ನನ್ನ ಅಣ್ಣ ಸ್ಟಾರ್ ಆಗ್ತಾನೆ ಅಥವಾ ನನ್ನ ಮಗ ಸ್ಟಾರ್ ಆಗ್ತಾನೆ. ಈ ಬಡತನ ಇಲ್ಲಿಗೆ ಮುಗೀತು, ಇನ್ನೇನಿದ್ದರು ನಮ್ಮದು ಒಳ್ಳೆಯ ಲೈಫು. ಅಂತೆಲ್ಲಾ ಕನಸು ಕಟ್ಟಿಕೊಂಡು ಇರ್ತಾರೆ. ಹೀಗಿರುವಾಗ ಹೀಗೆಲ್ಲಾ ಆಗಿಬಿಟ್ಟರೆ.. ಕಲಾವಿದನ ಮನೆ ಅಷ್ಟೇ ಅಲ್ಲ ಯಾರ ಮನೆಯಲ್ಲೂ ಹೀಗೆ ಆಗಬಾರದು. ಇಲ್ಲಿ ಏನೂ ಇಲ್ಲ, ಇರುವ ತನಕ ಚೆನ್ನಾಗಿ ಮಾತನಾಡೋಣ. ನಾನು ಜೀವನದಲ್ಲಿ ಇರುವವರೆಗೂ ಇದೇ ಪಾಠವನ್ನು ನಾನು ಅನುಸರಿಸುತ್ತೇನೆ ಎಂದು ಹುಲಿ ಕಾರ್ತಿಕ್ ಹೇಳಿದ್ದಾರೆ.