BBK 11 Final: ಬಿಗ್ ಬಾಸ್ ಟೈಟಲ್ ಗೆಲ್ಲುವ ಮೋಕ್ಷಿತಾ ಕನಸು ಭಗ್ನ; 4ನೇ ಸ್ಥಾನಕ್ಕೆ ತೃಪ್ತಿ
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹಂತಕ್ಕೆ ಬಂದಿದ್ದ ಮೋಕ್ಷಿತಾ ಪೈ ಇದೀಗ ಔಟ್ ಆಗಿದ್ದಾರೆ.
ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಕೊನೆಯ ಹಂತಕ್ಕೆ ತಲುಪಿದೆ. ಫೈನಲ್‌ಗೆ ತಲುಪಿದ, ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಮೋಕ್ಷಿತಾ ಪೈ ಇದೀಗ ಹೊರ ಬಂದಿದ್ದು, 4ನೇ ಸ್ಥಾನ ಪಡೆದಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಫಿನಾಲೆ ಹಂತಕ್ಕೆ ತಲುಪಿದ್ದರು. ಈ ಪೈಕಿ ಮೊದಲ ಸ್ಪರ್ಧಿಯಾಗಿ ಉಗ್ರಂ ಮಂಜು ಹೊರ ನಡೆದಿದ್ದರು (BBK 11 Final). ಇದೀಗ ಮೋಕ್ಷಿತಾ ಪೈ ಸರದಿ.
ʼಪಾರುʼ ಧಾರಾವಾಹಿ ಮೂಲಕ ಜನಪ್ರಿಯರಾದ ಮೋಕ್ಷಿತಾ ಪೈ ಮೊದಲಿನಿಂದಲೂ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಅವರು ಈ ಬಾರಿ ಕಪ್ ಗೆಲ್ಲುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ದೊಡ್ಮನೆಯಿಂದ ಅವರು ಈಚೆ ಬಂದಿದ್ದಾರೆ. 3ನೇ ರನ್ನರ್ ಅಪ್ ಆದ ಮೋಕ್ಷಿತಾ ಪೈಗೆ 7 ಲಕ್ಷ ರೂ. ಬಹುಮಾನ ಲಭಿಸಿದೆ. ಜತೆಗೆ 115 ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಪ್ರತ್ಯೇಕ ಸಂಭಾವನೆಯೂ ಸಿಗಲಿದೆ.
ಯಾರು ಈ ಮೋಕ್ಷಿತಾ ಪೈ?
ಮಂಗಳೂರು ಮೂಲದ ಮೋಕ್ಷಿತಾ ಪೈ ಅವರು ʼಪಾರುʼ ಧಾರಾವಾಹಿ ಮೂಲಕ ಮನೆ ಮನ ತಲುಪಿದ್ದಾರೆ. 2018ರಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು. ಜತೆಗೆ ತಮಿಳು ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ತಮಿಳಿನ ʼಮೀನಾಕ್ಷಿ ಮೊನ್ನುಂಗʼ ಕೂಡ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.
ಈ ಬಾರಿ ಮಹಿಳೆಯರ ಪೈಕಿ ಮೋಕ್ಷಿತಾ ಪೈ ಅಥವಾ ಭವ್ಯಾ ಗೌಡ ಇವರಿಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಇದೀಗ ಬುಡಮೇಲಾಗಿದೆ. ಅತಿಕಡಿಮೆ ಮತಗಳನ್ನು ಪಡೆದು ಭವ್ಯಾ ಗೌಡ ಅವರು 5ನೇ ರನ್ನರ್ ಅಫ್ ಆಗಿ ಶನಿವಾರ ಹೊರಬಂದಿದ್ದರು. ಇದೀಗ ಮೋಕ್ಷಿತಾ ಕೂಡ ಹೊರಬಂದಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಮನೆಗೆ ಬಂದ್ರು ಮೋಕ್ಷಿತಾ ಫ್ಯಾಮಿಲಿ: ವಿಶೇಷಚೇತನ ತಮ್ಮನನ್ನು ಕಂಡು ಮೋಕ್ಷಿ ಕಣ್ಣೀರು
ಕಳೆದ 10 ಬಿಗ್ ಬಾಸ್ ಸೀಸನ್‌ಗಳಲ್ಲಿ ಕೇವಲ ಒಬ್ಬ ಮಹಿಳಾ ಸ್ಪರ್ಧಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದರು. ಖ್ಯಾತ ನಟಿ ಶ್ರುತಿ ಅವರನ್ನು ಹೊರತುಪಡಿಸಿ ಯಾವುದೇ ಮಹಿಳಾ ಸ್ಪರ್ಧಿ ವಿನ್ನರ್ ಆಗಿರಲಿಲ್ಲ. ಈ ಬಾರಿ ಮೋಕ್ಷಿತಾ ಅಥವಾ ಭವ್ಯಾ ಗೆಲ್ಲುತ್ತಾರೆ ಅಂತಾನೇ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿಯೂ ಬಿಗ್ ಬಾಸ್ ಟ್ರೋಫಿ ಮಹಿಳೆಯರಿಗೆ ಸಿಕ್ಕಿಲ್ಲ.
ಮೋಕ್ಷಿತಾ ಪೈ 1995ರ ಅಕ್ಟೋಬರ್ 22ರಂದು ಜನಿಸಿದರು. ತಂದೆ ನಾಗೇಶ್ ಪೈ ಹಾಗೂ ತಾಯಿ ಗೋದಾವರಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ. ಇವರಿಗೆ ಆಟಿಸಂನಿಂದ ಬಳಲುತ್ತಿರುವ ಸಹೋದರನಿದ್ದು, ಅವರನ್ನು ಮಗುವಿನಂತೆ ಆರೈಕೆ ಮಾಡುತ್ತಾರೆ.
ನಟನೆಗೆ ಪಾದರ್ಪಣೆ ಮಾಡುವ ಮುನ್ನ ಮೋಕ್ಷಿತಾ ಪೈ 1ನೇ ತರಗತಿಯಿಂದ ಪಿಯುಸಿವರೆಗಿನ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಿದ್ದರು. ಮೋಕ್ಷಿತಾ ಪೈ ಧಾರಾವಾಹಿ ಆಯ್ಕೆಯಾಗಿದ್ದು ಫೇಸ್‌ಬುಕ್ ಮೂಲಕ ಎನ್ನುವುದು ವಿಶೇಷ.