ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ (Vinay Gowda) ಹಾಗೂ ಸೀಸನ್ 11ರ ರಜತ್ ಕಿಶನ್ ಇಬ್ಬರೂ ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಗೊತ್ತೇ ಇದೆ. ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದನ್ನು ರಜತ್ ಕಿಶನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.
ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೂರು ದಿನಗಳ ಜೈಲುವಾಸ ಅನುಭವಿಸಿದ್ದ ಇಬ್ಬರಿಗೂ ಈ ಪ್ರಕರಣದಲ್ಲಿ ರಿಲೀಫ್ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಅವರು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಈ ಪ್ರಕರಣದಲ್ಲಿ ತನಗೆ ಸಹಾಯ ಮಾಡಿದ ಕಿಚ್ಚ ಸುದೀಪ್ ಅವರನ್ನು ವಿನಯ್ ನೆನೆದಿದ್ದಾರೆ.
‘‘ಈ ಪ್ರಕರಣದ ವೇಳೆ, ಸುದೀಪ್ ಸರ್ ನಮ್ಮ ಫ್ಯಾಮಿಲಿ ಜೊತೆ ನಿಂತರು. ಈ ಕೇಸ್ ಬಗ್ಗೆ ಮನೆಯಲ್ಲಿ ಏನು ಗೊತ್ತಿರಲಿಲ್ಲ. ನನಗೆ ಜೈಲು ಅಂದಾಗ ಮನೆಯಲ್ಲಿ ಶಾಕ್ ಆಗಿದ್ದರು. ಆ ಟೈಮ್‌ನಲ್ಲಿ ಸುದೀಪ್ ಸರ್ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಕಾನೂನು ಪ್ರಕಾರ ಏನು ಮಾಡಬೇಕು ಅದರಂತೆ ಸುದೀಪ್ ನಿಂತು ನಮಗೆ ಬೆಂಬಲಿಸಿದ್ದಾರೆ. ಆ ದಿನ ನಮ್ಮ ಕುಟುಂಬದ ಜೊತೆ ನಿಂತು ಸಹಾಯ ಮಾಡಿದ್ದಾರೆ. ಕೊನೆ ಉಸಿರು ಇರೋವರೆಗೂ ಅವರ ಋಣ ನಾನು ಮರೆಯೋದಿಲ್ಲ. ಈ ನಿಯತ್ತು ಕೊನೆವರೆಗೂ ಇರುತ್ತದೆ’’ ಎಂದು ಹೇಳಿದ್ದಾರೆ.
Trivikram: ಧನರಾಜ್ ಹುಟ್ಟುಹಬ್ಬಕ್ಕೆ ಕೈಯಲ್ಲೇ ಪತ್ರ ಬರೆದು ಸ್ಪೆಷಲ್ ವಿಶ್ ಮಾಡಿದ ತ್ರಿವಿಕ್ರಮ್
‘‘ಸುದೀಪ್ ಸರ್ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರು ನಟಿಸುತ್ತಿರೋ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದಾರೆ’’ ಎಂದು ವಿನಯ್ ಮಾಹಿತಿ ಹಂಚಿಕೊಂಡಿದ್ದಾರೆ. ‘‘ನಾನಿಲ್ಲಿ ಯಾರನ್ನು ದೂಷಿಸುವುದಿಲ್ಲ. ಅದು ನನ್ನ ತಪ್ಪು, ನಾನು ಯೋಚನೆ ಮಾಡಬೇಕಿತ್ತು. ನನ್ನ ಜೀವನದಲ್ಲಿ ಪೊಲೀಸ್ ಸ್ಟೇಷನ್ ಅನ್ನೇ ನೋಡದೇ ಇದ್ದವನು ಡೈರೆಕ್ಟ್ ಜೈಲಿಗೆ ಹೋಗುವ ಹಾಗಾಯ್ತು. ಇನ್ಮೇಲೆ ರೀಲ್ಸ್ ಮಾಡ್ತೀನಿ ಆದ್ರೆ ರಜತ್ ನಿನ್ನ ಜೊತೆ ಯಾವುದೇ ರೀಲ್ಸ್ ಮಾಡುವುದಿಲ್ಲ ನನ್ನನ್ನು ಬಿಟ್ಟುಬಿಡು ಎಂದು ವಿನಯ್ ಗೌಡ ಹಾಸ್ಯಮಯವಾಗಿ ಹೇಳಿದ್ದಾರೆ.