ಶಿವಣ್ಣ - ಆರ್. ಚಂದ್ರು ಕಾಂಬಿನೇಷನ್‌ನ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!
Original Monster Movie: ಶಿವರಾಜ್‌ಕುಮಾರ್ ನಟನೆಯ ‘ಒರಿಜಿನಲ್ ಮಾನ್‌ಸ್ಟರ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ʻಮೈಲಾರಿʼ ನಂತರ ನಿರ್ದೇಶಕ ಆರ್. ಚಂದ್ರು ಹಾಗೂ ಶಿವರಾಜ್‌ಕುಮಾರ್ ಜೊತೆಯಾಗಿರುವ ಈ ಚಿತ್ರವು ಕನ್ನಡ ಮತ್ತು ಹಿಂದಿಯಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ. ಬೆಂಗಳೂರಿನ ಬೃಹತ್ ಸೆಟ್‌ಗಳಲ್ಲಿ ನಡೆದ ಚಿತ್ರೀಕರಣದಲ್ಲಿ ನಟ ಸುನೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
-
ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಆರ್. ಚಂದ್ರು ಅವರ ಬಹುನಿರೀಕ್ಷಿತ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಒರಿಜಿನಲ್ ಮಾನ್‌ಸ್ಟರ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಬ್ಜ’ ಚಿತ್ರದ ನಂತರ, ಸರಿಸುಮಾರು ಎರಡೂವರೆ ವರ್ಷಗಳ ಬಿಡುವಿನ ಬಳಿಕ ಆರ್. ಚಂದ್ರು ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಆರಂಭದಿಂದಲೂ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.
ಎರಡನೇ ಹಂತದ ಶೂಟಿಂಗ್‌ಗೆ ರೆಡಿ
ಪ್ರತಿಷ್ಠಿತ ‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್’ ಅರ್ಪಿಸುವ ಹಾಗೂ ‘ಆರ್ ಸಿ ಸ್ಟುಡಿಯೋಸ್’ ಲಾಂಛನದಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಲಾಂಚ್ ಮುಂಬೈನಲ್ಲಿ ಹಾಗೂ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಬೆಂಗಳೂರಿನಲ್ಲಿ ಹಾಕಲಾಗಿದ್ದ ಬೃಹತ್ ಸೆಟ್‌ಗಳಲ್ಲಿ ಯೋಜನೆಯ ಪ್ರಕಾರವೇ ಮೊದಲ ಹಂತದ ಚಿತ್ರೀಕರಣವನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸಲಾಗಿದ್ದು, ಸದ್ಯದಲ್ಲೇ ಎರಡನೇ ಹಂತದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
‘ನನ್ನ ಈ ಸಿನಿಮಾ ಪಯಣಕ್ಕೆ ನೀವೇ ಬುನಾದಿ...’; ಸಿಂಗೀತಂ ಶ್ರೀನಿವಾಸರಾವ್ ನಿಧನಕ್ಕೆ ನಟ ಶಿವರಾಜ್‌ಕುಮಾರ್ ಸಂತಾಪ
ದ್ವಿಭಾಷೆಯಲ್ಲಿ ಸಿನಿಮಾ ನಿರ್ಮಾಣ
ಮೊದಲ ಹಂತದ ಚಿತ್ರೀಕರಣದಲ್ಲಿ ನಟ ಶಿವರಾಜಕುಮಾರ್ ಜೊತೆಗೆ ತೆಲುಗಿನ ಖ್ಯಾತ ನಟ ಸುನೀಲ್ ಸೇರಿದಂತೆ ಹಲವು ಪ್ರಮುಖ ತಾರೆಯರು ಭಾಗಿಯಾಗಿದ್ದರು. ಈ ಹಿಂದೆ ಆರ್. ಚಂದ್ರು ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಬ್ಲಾಕ್‌ಬಸ್ಟರ್ ‘ಮೈಲಾರಿ’ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಆ ಬಳಿಕ ‘ಕಬ್ಜ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಪೂರ್ಣಪ್ರಮಾಣದ ಚಿತ್ರವಾಗಿ ‘ಒರಿಜಿನಲ್ ಮಾನ್‌ಸ್ಟರ್’ ಮೂಡಿಬರುತ್ತಿರುವುದು ಸಹಜವಾಗಿಯೇ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರ ಕನ್ನಡ - ಹಿಂದಿ ಭಾಷೆಯಲ್ಲಿ ಶೂಟಿಂಗ್ ಆಗುತ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ
ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು, ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಜನಪ್ರಿಯ ಕಲಾವಿದರು ಬಣ್ಣಹಚ್ಚಲಿದ್ದು, ಚಿತ್ರದ ಪಾತ್ರವರ್ಗ ಹಾಗೂ ಮುಂದಿನ ಹಂತದ ಚಿತ್ರೀಕರಣದ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ನಿರ್ದೇಶಕ ಆರ್. ಚಂದ್ರು ತಿಳಿಸಿದ್ದಾರೆ.