ನಟಿ ಅಮೂಲ್ಯ ಕಮ್‌ಬ್ಯಾಕ್ ಸಿನಿಮಾಕ್ಕೆ ಹೀರೋ ಸಿಕ್ಕೇಬಿಟ್ರು! ʻಪೀಕಬೂʼ ಚಿತ್ರಕ್ಕೆ ಹೀರೋ ಆದ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ ನಟ ಶ್ರೀರಾಮ್
Peekaboo Kannada Movie: ನಟಿ ಅಮೂಲ್ಯ ಅವರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿದ್ದು, ಅವರ ಹೊಸ ಚಿತ್ರದ ನಾಯಕನಾಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಸಿನಿಮಾದ ಹೀರೋ ರಿವಿಲ್ ಟೀಸರ್ ಬಿಡುಗಡೆಯಾಗಿದ್ದು, ಶ್ರೀರಾಮ್ ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
-
ʻಗೋಲ್ಡನ್ ಕ್ವೀನ್ʼ ಅಮೂಲ್ಯ ಅವರು ಪುನಃ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ ಪೀಕಬೂ ಸಿನಿಮಾ ಮೂಲಕ ವಾಪಾಸ್ ಆಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಅಮೂಲ್ಯ ಲುಕ್ ಟೀಸರ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದರು. ಈ ಸಿನಿಮಾ ಘೋಷಣೆಯಾದರೂ ಹೀರೋ ಯಾರು ಎಂಬುದು ಗೊತ್ತಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ.
ನಟಿ ಅಮೂಲ್ಯಗೆ ಜೋಡಿಯಾಗಿ ಶ್ರೀರಸ್ತು ಶುಭಮಸ್ತು ಸೀರಿಯಲ್ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಖ್ಯಾತಿಗಳಿಸಿರುವ ಶ್ರೀರಾಮ್ ಇದೀಗ ಪೀಕಬೂ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. 2008ರಲ್ಲಿ ʻರಿಷಭಪ್ರಿಯʼ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾದರು. ಆನಂತರ ಇರುವುದೆಲ್ಲವ ಬಿಟ್ಟು ಸಿನಿಮಾ ಮೂಲಕ ನಾಯಕನಾಗಿ ದೊಡ್ಡ ಪರದೆ ಮೇಲೆ ಮಿಂಚಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಗಜಾನನ ಅಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದರು.
ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ: ಅಮೂಲ್ಯ-ಜಗದೀಶ್ ಚಂದ್ರ
ಎರಡು ಲುಕ್‌ಗಳಲ್ಲಿ ಮಿಂಚಿ ಶ್ರೀರಾಮ್
ಇದೀಗ ಅಮೂಲ್ಯ ಜೊತೆ ಶ್ರೀರಾಮ್ ಪೀಕಬೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪೀಕಬೂ ಸಿನಿಮಾದ ಹೀರೋ ರಿವಿಲ್ ಟೀಸರ್ ರಿಲೀಸ್ ಆಗಿದ್ದು ಟೀಸರ್ ಇಂಟ್ರೆಸ್ಟಿಂಗ್ ಆಗಿದೆ. ಈ ಟೀಸರ್‌ನಲ್ಲಿ ಶ್ರೀರಾಮ್ ಎರಡು ಲುಕ್‌ಗಳಲ್ಲಿ ಮಿಂಚಿದ್ದಾರೆ. ಅಮೂಲ್ಯ ಹಾಗೂ ಶ್ರೀರಾಮ್ ಅವರದ್ದು ಹೊಸ ಕಾಂಬಿನೇಷನ್ ಆಗಿದ್ದು, ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.
Amulya Peekaboo Movie: ಗೋಲ್ಡನ್ ಕ್ವೀನ್ ಅಮೂಲ್ಯ ಅಭಿನಯದ 'ಪೀಕಬೂ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!
ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದವಾಗಿದೆ.
ಒಂದೊಳ್ಳೆ ಮೆಸೇಜ್ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿ ಇರಲಿದೆಯಂತೆ. ಸದ್ಯ ಪೀಕಬೂ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದೆ. ಚಿತ್ರಕ್ಕೆ ಸುರೇಶ್ ಬಾಬು ಸಿನಿಮಾಟೋಗ್ರಾಫರ್ ಆಗಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾದ ನಂತರ ಮತ್ತೆ ಅಮೂಲ್ಯ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ನಿರ್ದೇಶಕ ಮಂಜು ಸ್ವರಾಜ್. ಶ್ರೀ ಕೆಂಚಾಂಬಾ ಫಿಲಂಸ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ಅವರು ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಇಂದಿನ ಪೋಷಕರಿಗೆ ಪೀಕಬೂ ಬಹಳ ಚಿರಪರಿಚಿತ ಶಬ್ದ. ಇದೊಂದು ರೀತಿಯಲ್ಲಿ ಯೂನಿವರ್ಸಲ್ ಚಿಲ್ಡ್ರನ್ ಕೋಡ್ ವರ್ಡ್ ಆಗಿದ್ದು, ಪುಟಾಣಿ ಮಕ್ಕಳಿಗೆ ಪೀಕಬೂ ಎಂದು ಹೇಳಿ ಏನನ್ನಾದರೂ ತೆರೆದು ತೋರಿಸಿದರೆ ಖುಷಿಯಾಗುತ್ತದೆ. ತೊದಲು ನುಡಿಯುವ ಹಾಲುಗಲ್ಲದ ಮಕ್ಕಳು ಈ ಶಬ್ದ ಕೇಳಿದೊಡನೆ ಕೇಕೆ ಹಾಕಿ ನಗುತ್ತಾರೆ. ಈ ಪದಕ್ಕೆ ಯಾವುದೇ ಮೂಲ ಭಾಷೆ ಇಲ್ಲ. ಒಂದು ರೀತಿಯ ಘಿಬ್ಲಿಶ್ ಪದವಾಗಿರುವ ಇದು ಒಂದು ಅರ್ಥದಲ್ಲಿ ಅಚ್ಚರಿ ಎಂದಾಗುತ್ತದೆ. ಕನ್ನಡದಲ್ಲಿ ‘ಛೀ ಕಳ್ಳ’, ‘ಗುಮ್ಮ ಗುಮ್ಮ’ದಂಥ ಶಬ್ದಗಳನ್ನು ಬಳಸುವಂತೆ ‘ಪೀಕಬೂ’ ಪದವನ್ನು ಈಗ ಹೆಚ್ಚಾಗಿ ಬಳಸುತ್ತಾರಂತೆ.