ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

3 ದಿನ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿದ ಶ್ವಾನ! ಇದೊಂದು ಅದ್ಭುತವೋ, ಮಾನಸಿಕ ಕಾಯಿಲೆಯೋ? ತಲೆ ಕೆರೆದುಕೊಂಡ ನೆಟ್ಟಿಗರು

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ದೇವಾಲಯದೊಳಗೆ ಬೀದಿ ನಾಯಿಯೊಂದು ಮೂರು ದಿನಗಳ ಕಾಲ ದೇವರ ಮೂರ್ತಿಗಳ ಸುತ್ತ ಪ್ರದಕ್ಷಿಣೆ ಹಾಕಿದ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಹನುಮಂತನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ಶ್ವಾನ

ಆಂಜನೇಯ ಸ್ವಾಮಿಗೆ ಪ್ರದಕ್ಷಿಣೆ ಹಾಕಿದ ನಾಯಿ -

Profile
Sushmitha Jain Jan 15, 2026 7:41 PM

ಲಖನೌ, ಜ. 15: ಉತ್ತರ ಪ್ರದೇಶ (Uttar Pradesh)ದ ಬಿಜ್ನೋರ್(Bijnor) ಜಿಲ್ಲೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ದೇವಾಲಯದೊಳಗೆ ಬೀದಿ ನಾಯಿಯೊಂದು ದೇವರ ಮೂರ್ತಿಗಳ ಸುತ್ತ ನಿರಂತರವಾಗಿ ಮೂರು ದಿನಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಈ ಅಪರೂಪದ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡ ಸಾವಿರಾರು ಜನರು, ಭಿನ್ನ-ವಿಭಿನ್ನ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಈ ಅಪರೂಪದ ದೃಶ್ಯ ನಾಗಿನಾ ಪ್ರದೇಶದ ನಂದಪುರ ಗ್ರಾಮದ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಕಂಡುಬಂದಿದೆ. ಸ್ಥಳೀಯರ ಹೇಳಿಕೆಯಂತೆ, ಸೋಮವಾರ (ಜನವರಿ 12) ಬೆಳಗ್ಗೆಯೇ ದೇವಾಲಯಕ್ಕೆ ಬಂದ ನಾಯಿ, ಹನುಮಾನ್ ದೇವರ ಮೂರ್ತಿಯ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕಲು ಆರಂಭಿಸಿತು. 3ನೇ ದಿನ ಅದೇ ನಾಯಿ ದುರ್ಗಾ ಮಾತಾ ಮೂರ್ತಿಯ ಸುತ್ತಲೂ ಅದೇ ರೀತಿಯ ಧಾರ್ಮಿಕ ವಿಧಿಯಂತೆ ಕಾಣುವ ಪ್ರದಕ್ಷಿಣೆ ಹಾಕುವುದನ್ನು ಮುಂದುವರಿಸಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ ನಾಯಿ ಆಹಾರ ಅಥವಾ ನೀರನ್ನು ಸೇವಿಸದೆ ಹಲವು ಗಂಟೆಗಳ ಕಾಲ ವೃತ್ತದಲ್ಲಿ ಸಾಗುತ್ತಲೇ ಇತ್ತು. ದಣಿದಾಗ ಸ್ವಲ್ಪ ಕುಂಟುತ್ತ, ಒಂದು ಕಾಲನ್ನು ಎತ್ತಿಕೊಂಡ ಸ್ಥಿತಿಯಲ್ಲೇ ಚಲಿಸುತ್ತಿರುವುದು ಸಹ ವಿಡಿಯೊದಲ್ಲಿ ಕಂಡುಬಂದಿದೆ.

ವಿಡಿಯೊ ಇಲ್ಲಿದೆ:

ಅಪರೂದ ದೃಶ್ಯ ನೋಡಲು ಹರಿದುಬಂದ ಜನ

ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸಾವಿರಾರು ಜನ ಆ ದೇವಾಲಯ ಬಳಿ ಸೇರತೊಡಗಿದ್ದಾರೆ. ಕೆಲವರು ಇದನ್ನು ದೈವೀ ಶಕ್ತಿಯ ಸಂಕೇತ ಎಂದರೆ, ಇನ್ನೂ ಕೆಲವರು ಇದನ್ನು ಅಪರೂಪದ ಆಧ್ಯಾತ್ಮಿಕ ಘಟನೆ ಎಂದು ವ್ಯಾಖ್ಯಾನಿಸಿದ್ದಾರೆ. ಹೆಚ್ಚುತ್ತಿರುವ ಜನಸಂದಣಿಯ ನಡುವೆಯೂ, ನಾಯಿ ಯಾವುದೇ ಭಯ ಅಥವಾ ಆಕ್ರಮಣಕಾರಿ ವರ್ತನೆಯನ್ನು ತೋರಿಸಿಲ್ಲ.

ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ಫುಲ್ ವೈರಲ್

ಪಶು ವೈದ್ಯಕೀಯ ಪರಿಶೀಲನೆ: ತಕ್ಷಣದ ಅಪಾಯವಿಲ್ಲ

ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ಪಶು ವೈದ್ಯಕೀಯ ತಂಡ ನಾಯಿಯನ್ನು ಪರಿಶೀಲಿಸಿದೆ. ಅಧಿಕಾರಿಗಳ ಪ್ರಕಾರ, ನಾಯಿಗೆ ಯಾವುದೇ ಗಾಯಗಳು ಅಥವಾ ಜೀವಕ್ಕೆ ಅಪಾಯವಾಗುವಂತಹ ಸ್ಥಿತಿಗಳು ಕಂಡುಬಂದಿಲ್ಲ. ಆದ್ದರಿಂದ ನಾಯಿಯನ್ನು ಮೇಲ್ವಿಚಾರಣೆಯಲ್ಲೇ ಇರಿಸಲಾಗಿದೆ ಎಂದಿದ್ದಾರೆ. ಬುಧವಾರ (ಜನವರಿ 14) ನಾಯಿ ಸ್ವಲ್ಪ ಸಮಯ ದೇವಾಲಯದ ಆವರಣದಿಂದ ಹೊರಗೆ ಹೋಗಿದ್ದರೂ, ಕೆಲವೇ ನಿಮಿಷಗಳಲ್ಲಿ ಮರಳಿ ಬಂದು ಮತ್ತೆ ಪ್ರದಕ್ಷಿಣೆ ಆರಂಭಿಸಿದೆ.

ವೈದ್ಯಕೀಯ ಕಾರಣಗಳ ಸಾಧ್ಯತೆ

ಈ ಘಟನೆಯನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವವರಿದ್ದರೂ, ಪಶುವೈದ್ಯರು ಇದಕ್ಕೆ ವೈದ್ಯಕೀಯ ಕಾರಣಗಳಿರಬಹುದು ಎಂದು ಹೇಳಿದ್ದಾರೆ. ನಾಯಿಗಳಲ್ಲಿ ಇಂತಹ ಪುನರಾವರ್ತಿತ ವೃತ್ತಾಕಾರದ ಚಲನೆಗಳು "ಕ್ಯಾನೈನ್ ಕಾಗ್ನಿಟಿವ್ ಡಿಸ್ಫಂಕ್ಷನ್ (CCD), ವೆಸ್ಟಿಬ್ಯುಲರ್ ರೋಗ, ಕೇಂದ್ರಿತ ಅಪಸ್ಮಾರ (ಫೋಕಲ್ ಸೀಜರ್ಸ್) ಅಥವಾ ಕಂಪಲ್ಸಿವ್ ಡಿಸಾರ್ಡರ್"ಗಳಿಗೆ ಸಂಬಂಧಿಸಿರಬಹುದು.

ಇದಲ್ಲದೆ ಮೆದುಳಿನ ಉರಿತ (ಎನ್ಸೆಫಲೈಟಿಸ್), ಒಳಕಿವಿ ಸೋಂಕುಗಳು ಅಥವಾ ವಿಷಕಾರಿ ಪದಾರ್ಥಗಳ ಸಂಪರ್ಕವೂ ಸಮತೋಲನ ಮತ್ತು ದಿಕ್ಕು ತಿಳುವಳಿಕೆಯನ್ನು ಹದಗೆಡಿಸಬಹುದು. ದೀರ್ಘಕಾಲ ಆಹಾರ ಮತ್ತು ನೀರಿಲ್ಲದೆ ಇರುವುದರಿಂದ ಲಕ್ಷಣಗಳು ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಇಂತಹ ಸ್ಥಿತಿಗಳು ಗೊಂದಲ, ಪುನರಾವರ್ತಿತ ಚಲನೆಗಳು ಮತ್ತು ದಣಿವುಂಟು ಮಾಡುತ್ತವೆ ಎಂದು ವೈದ್ಯರು ಹೇಳಿದ್ದಾರೆ.