Sriimurali: 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಹೀರೋ ದೀಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ ಶ್ರೀಮುರಳಿ
Bank Of Bhagyalakshmi Movie Trailer: ದೀಕ್ಷಿತ್ ಶೆಟ್ಟಿ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟನೆಯ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಚಿತ್ರದ ಟ್ರೇಲರ್ ಅನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ನವೆಂಬರ್ 21ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು 'ರಂಗಿ ತರಂಗ' ಖ್ಯಾತಿಯ ಎಚ್ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.
-
ಸ್ಯಾಂಡಲ್‌ವುಡ್‌ನಲ್ಲಿ ʻದಿಯಾʼ ಸಿನಿಮಾದ ಮೂಲಕ ಫೇಮಸ್ ಆದ ನಟ ದೀಕ್ಷಿತ್ ಶೆಟ್ಟಿ, ಈಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ದಸರಾ, ದಿ ಗರ್ಲ್‌ಫ್ರೆಂಡ್ ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೂ ಅವರು ಪರಿಚಿತರು. ಈ ಮಧ್ಯೆ ʻಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ಎಂಬ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದು, ಈ ಚಿತ್ರವು ನವೆಂಬರ್ 21ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರಕ್ಕೆ ನಟ ಶ್ರೀಮುರಳಿ ಸಾಥ್ ನೀಡಿದ್ದಾರೆ.
ಟ್ರೇಲರ್ ರಿಲೀಸ್ ಮಾಡಿದ ಶ್ರೀಮುರಳಿ
ʻಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀʼ ಸಿನಿಮಾದ ಟ್ರೇಲರ್ ಅನ್ನು ನಟ ಶ್ರೀಮುರಳಿ ರಿಲೀಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಹೀರೋ ದೀಕ್ಷಿತ್ ಶೆಟ್ಟಿ ಮತ್ತು ಹೀರೋಯಿನ್ ಬೃಂದಾ ಆಚಾರ್ಯ ಅವರಿಗೂ ಶುಭವಾಗಲಿ ಎಂದು ಹೇಳಿದ್ದಾರೆ. ಈ ಚಿತ್ರವನ್ನು ʻರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಇದರ ನಿರ್ದೇಶಕರು.
Mahalaya Movie: ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ನಟ ಶ್ರೀಮುರಳಿ ಚಾಲನೆ
ದೀಕ್ಷಿತ್ ಶೆಟ್ಟಿ ಏನಂದ್ರು?
"ನಾನು ಈ ಹಿಂದೆ ನಟಿಸಿದ್ದ "ದಿಯಾ" ಹಾಗೂ "ಬ್ಲಿಂಕ್" ಸಿನಿಮಾಗಳಿಗೆ ಎಲ್ಲರೂ ಉತ್ತಮವಾದ ಪ್ರೋತ್ಸಾಹ ನೀಡಿದ್ದಾರೆ. ನನಗೆ ಬೇರೆ ಬೇರೆ ಜಾನರ್‌ಗಳ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ. ಅದರಂತೆ ಹಿಂದಿನ ಚಿತ್ರಗಳ ಜಾನರ್ ಬೇರೆ. ಈಗ ಮಾಡಿರುವ ಸಿನಿಮಾದ ಜಾನರ್ ಬೇರೆ. ನಮ್ಮ ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನವೆಂಬರ್ 21 ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಚಿತ್ರವನ್ನು ಗೆಲ್ಲಿಸಬೇಕು" ಎಂದು ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.
ನಾಯಕಿ ಬೃಂದಾ ಆಚಾರ್ಯ ಹೇಳಿದ್ದೇನು?
"ಎಲ್ಲರೂ ನಿನಗೆ ಯಾರು ಪೈಪೋಟಿ ಅಂತ ನನ್ನನ್ನು ಕೇಳುತ್ತಿದ್ದರು. ನನಗೆ ನಾನೇ ಪೈಪೋಟಿ ಅಂತ ಹೇಳುತ್ತಿದ್ದೆ. ಇಗ ಅದು ನಿಜವಾಗಿದೆ. ನವೆಂಬರ್ 21ರಂದು ನನ್ನ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಎರಡರಲ್ಲೂ ವಿಭಿನ್ನ ಪಾತ್ರಗಳು. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದಲ್ಲಿ ಅಭಿನಯಿಸಿದ್ದು ಬಹಳ ಸಂತೋಷವಾಗಿದೆ" ಎನ್ನುತ್ತಾರೆ ಬೃಂದಾ ಆಚಾರ್ಯ.
ಮೊದಲ ಬಾರಿಗೆ ನಿರ್ದೇಶಕನಾದ ಅಭಿಷೇಕ್
ಸ್ನೇಹಿತರ ಜೊತೆ ಸೇರಿ ಪಿನಾಕ ಎಂಬ ವಿ.ಎಫ್.ಎಕ್ಸ್ ಸ್ಟುಡಿಯೋ ನಡೆಸುತ್ತಿರುವ ಅಭಿಷೇಕ್, "ಇದು ನನ್ನ ಮೊದಲ ಚಿತ್ರ. ಕೊರೊನಾ ಸಮಯದಲ್ಲಿ ಕಿರುಚಿತ್ರ ಮಾಡಬೇಕೆಂದು ಈ ಕಥೆ ಬರೆದೆ. ಆನಂತರ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಅನಿಸಿತು. ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರು ಕಥೆ ಮೆಚ್ಚಿಕೊಂಡರು. ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ ಒಪ್ಪಿಕೊಂಡ ಮೇಲೆ ಚಿತ್ರಕ್ಕೆ ಚಾಲನೆ ದೊರೆಯಿತು. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ಈ ಚಿತ್ರ ಅಂದುಕೊಂಡ ಹಾಗೆ ಬಂದಿರುವುದಕ್ಕೆ ಚಿತ್ರತಂಡದ ಸಹಕಾರವೇ ಪ್ರಮುಖ ಕಾರಣ" ಎಂದು ಹೇಳುತ್ತಾರೆ ಅಭಿಷೇಕ್.
ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ, ವಿನುತ್ ಹಾಗೂ ನಟಿ ಉಷಾ ಭಂಡಾರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.