ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಒಂದೂವರೆ ವರ್ಷಗಳ ಕಾಲ ಪ್ರೀತಿಯಲ್ಲಿದ್ದೆ..ʼ; ಇದು ಸಿಎಂ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಲವ್‌ ಬ್ರೇಕಪ್‌ ಸ್ಟೋರಿ!

ಸಿಎಂ ವಿಜಯ್ ಪುತ್ರ ಜೇಸನ್‌ ಸಂಜಯ್‌ ಅವರು ತಮ್ಮ ಲವ್‌ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಒಂದೂವರೆ ವರ್ಷ ಪ್ರೀತಿಸಿ, ಇಬ್ಬರ ಸಮ್ಮತಿಯೊಂದಿಗೆ ಬೇರ್ಪಟ್ಟ ಕಥೆಯನ್ನು ತಿಳಿಸಿದ್ದಾರೆ. ಲವ್‌ ಬ್ರೇಕಪ್‌ ನಂತರ ಹೇಗೆ ಅದರಿಂದ ಹೊರಬಂದೆ ಎಂಬುದನ್ನು ಕೂಡ ಜೇಸನ್‌ ಸಂಜಯ್‌ ಅವರು ಹಂಚಿಕೊಂಡಿದ್ದಾರೆ.

ʻಒಂದೂವರೆ ವರ್ಷ ಪ್ರೀತಿಸಿ ದೂರಾದೆವುʼ; ಸಿಎಂ ವಿಜಯ್‌ ಪುತ್ರನ ಲವ್‌ ಸ್ಟೋರಿ

-

Avinash GR
Avinash GR Oct 6, 2026 8:34 PM

ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್, ‘ಸಿಗ್ಮಾ’ ಚಿತ್ರದ ಮೂಲಕ ಯಶಸ್ವಿಯಾಗಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಬೆನ್ನಲ್ಲೇ, ಇತ್ತೀಚಿನ ಸಂದರ್ಶನವೊಂದರಲ್ಲಿ ಜೇಸನ್ ತಮ್ಮ ಕಾಲೇಜು ದಿನಗಳ ಲವ್‌ ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮಾತನಾಡಿಕೊಂಡೇ ದೂರವಾದೆವು

ವಿಶೇಷ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಬದುಕಿನ ಮಾಹಿತಿಗಳನ್ನು ಹಂಚಿಕೊಂಡ ಜೇಸನ್ ಸಂಜಯ್, "ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿಯಾಗಿತ್ತು. ಅದು ಕಾಲೇಜು ದಿನಗಳಲ್ಲಿ ನಡೆದ ಘಟನೆ. ನಾವಿಬ್ಬರೂ ಸುಮಾರು ಒಂದೂವರೆ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ ಆ ಸಂಬಂಧ ಮುಂದುವರಿಯಲಿಲ್ಲ. ಇಬ್ಬರ ಒಪ್ಪಿಗೆಯಿಂದಲೇ, ಪರಸ್ಪರ ಮಾತನಾಡಿ ತುಂಬಾ ಕೂಲ್‌ ಆಗಿಯೇ ಬೇರೆಯಾಗಲು ನಿರ್ಧರಿಸಿದೆವು" ಎಂದು ತಿಳಿಸಿದ್ದಾರೆ.

ಯುವನ್‌ ಸಾಂಗ್‌ ಕೇಳುತ್ತಿದ್ದೆ

"ಬ್ರೇಕಪ್ ನಂತರದ ನೋವಿನಿಂದ ಹೇಗೆ ಹೊರಬಂದಿರಿ" ಎಂಬ ಪ್ರಶ್ನೆಗೆ ಉತ್ತರಿಸಿದ ಜೇಸನ್‌ ಸಂಜಯ್‌ ಅವರು, "ಆ ಸಮಯದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ಎಲ್ಲಾ ಲವ್ ಸಾಂಗ್‌ಗಳನ್ನು ನಿರಂತರವಾಗಿ ಕೇಳುತ್ತಿದ್ದೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಂದಲೂ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಗಳನ್ನು ಹಾಕುವುದು ಅಥವಾ ಮತ್ತೆ ಮಾತುಕತೆಗೆ ಅವಕಾಶ ಕೊಡುವುದರಿಂದ ನೋವಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದು ನನಗೆ ತಿಳಿದಿತ್ತು. ಹಾಗಾಗಿ ನಾವಿಬ್ಬರೂ ಸಂಪರ್ಕ ಕಡಿದುಕೊಂಡೆವು. ನಾನು ಮಾಡಬಾರದು ಎಂದು ನಿರ್ಧರಿಸಿದ ವಿಷಯಗಳಿಂದ ದೂರವಿರಲು ನನ್ನ ಮನಸ್ಸನ್ನು ನಾನೇ ನಿಯಂತ್ರಿಸಿಕೊಂಡೆ. ಈಗ ನಾನು ಚೆನ್ನಾಗಿಯೇ ಇದ್ದೇನೆ, ಜೀವನದಲ್ಲಿ ಎಲ್ಲರೂ ಮುಂದೆ ಸಾಗಲೇಬೇಕಲ್ಲವೇ?" ಎಂದಿದ್ದಾರೆ.

ʻದಳಪತಿʼ ವಿಜಯ್ ಪುತ್ರನ ʻಸಿಗ್ಮಾʼ ಸಿನಿಮಾ ರಿಲೀಸ್‌ಗೆ ರೆಡಿ; ತಮಿಳುನಾಡು ಸಿಎಂ ಮಗ ಜೇಸನ್‌ ಸಂಜಯ್‌ ಡೈರೆಕ್ಟರ್‌ ಆಗಿದ್ದೇಕೆ?

ಸಿಗ್ಮಾ ಕಲೆಕ್ಷನ್‌ ಹೇಗಿದೆ?

ಲವ್‌ ಬ್ರೇಕಪ್‌ ನಂತರ ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡ ಜೇಸನ್ ಸಂಜಯ್, ತಮ್ಮ ಚೊಚ್ಚಲ ಚಿತ್ರ ‘ಸಿಗ್ಮಾ’ದ ಸ್ಕ್ರಿಪ್ಟ್ ಮತ್ತು ನಿರ್ದೇಶನದ ಕೆಲಸಗಳಲ್ಲಿ ಮುಳುಗಿಹೋದದ್ದಾಗಿ ಹೇಳಿಕೊಂಡಿದ್ದಾರೆ.‌ ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಕಂಡ ‘ಸಿಗ್ಮಾ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ಸೋಮವಾರದ ಅಂತ್ಯಕ್ಕೆ ಈ ಚಿತ್ರವು ಭಾರತದಲ್ಲಿ ₹6.19 ಕೋಟಿ ನಿವ್ವಳ ಗಳಿಕೆ ಕಂಡಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ ₹7.04 ಕೋಟಿ ತಲುಪಿದೆ.

ಮಗನಿಗೆ ಅಪ್ಪನ ಬೆಂಬಲ

ಮಗನ ಚೊಚ್ಚಲ ಚಿತ್ರಕ್ಕೆ ತಂದೆ, ನಟ-ರಾಜಕಾರಣಿ ವಿಜಯ್ ಅವರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯ ದಿನದಂದು ಮಧುರಾಂತಕಂನಲ್ಲಿ ನಡೆದ ರೋಡ್‌ಶೋ ವೇಳೆ, ಪಕ್ಷದ ಕಾರ್ಯಕರ್ತರೊಬ್ಬರು ನೀಡಿದ ‘ಸಿಗ್ಮಾ’ ಚಿತ್ರದ ಜೇಸನ್ ಅವರ ಫೋಟೋ ಫ್ರೇಮ್ ಅನ್ನು ವಿಜಯ್ ಹೆಮ್ಮೆಯಿಂದ ತಮ್ಮ ತಲೆಯ ಮೇಲೆ ಎತ್ತಿ ಹಿಡಿದು ಅಪಾರ ಜನಸ್ತೋಮಕ್ಕೆ ಪ್ರದರ್ಶಿಸಿ ಮಗನ ಯಶಸ್ಸನ್ನು ಸಂಭ್ರಮಿಸಿದ್ದರು. ಮತ್ತೊಂದೆಡೆ, ವಿಜಯ್ ಕುಟುಂಬದ ಇತರ ಸದಸ್ಯರು ಚೆನ್ನೈನ ಚಿತ್ರಮಂದಿರವೊಂದಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಮೊದಲ ದಿನದ ಮೊದಲ ಶೋವನ್ನು ವೀಕ್ಷಿಸಿ ಸಂಭ್ರಮಿಸಿದ್ದರು.