ಶ್ರೀಮಾಯಕ್ಕನ ಸನ್ನಿಧಿಯಲ್ಲಿ ಭಕ್ತರಿಂದಲೇ ಬಿಡುಗಡೆಯಾಯ್ತು ‘ಅನಂತ ಪಯಣ’ ಚಿತ್ರದ ‘ಭಕ್ತಿಯ ಭಂಡಾರ’ ಗೀತೆ!
Ananta Payana Movie: ‘ಅನಂತ ಪಯಣ’ ಚಿತ್ರದ ‘ಭಕ್ತಿಯ ಭಂಡಾರ’ ಗೀತೆಯು ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಶ್ರೀ ಮಾಯಕ್ಕನ ಪವಿತ್ರ ಸನ್ನಿಧಿಯಲ್ಲಿ ಜನಸಾಮಾನ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ಗಣ್ಯರ ಬದಲು ಭಕ್ತಾದಿಗಳ ಕೈಯಿಂದಲೇ ಹಾಡನ್ನು ಅನಾವರಣಗೊಳಿಸಿರುವುದು ವಿಶೇಷವಾಗಿದೆ. ಶ್ರೀ ಕಾಕ ಅವರ ನಟನೆ, ನಿರ್ದೇಶನ ಹಾಗೂ ನೃತ್ಯ ಸಂಯೋಜನೆಯಲ್ಲಿ ಈ ಭಕ್ತಿಗೀತೆ ಮೂಡಿಬಂದಿದೆ.
-
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಪ್ರಸಿದ್ಧ ಶ್ರೀ ಮಾಯಕ್ಕನ ದೇವಸ್ಥಾನದ ಪವಿತ್ರ ಸನ್ನಿಧಿಯಲ್ಲಿ, ‘ಅನಂತ ಪಯಣ’ ಚಿತ್ರದ ‘ಭಕ್ತಿಯ ಭಂಡಾರ’ ಎಂಬ ಭಕ್ತಿಗೀತೆಯು ಭಕ್ತಿಭಾವದೊಂದಿಗೆ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾದ ಈ ಸಮಾರಂಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಹಾಡಿನ ಬಿಡುಗಡೆಗೆ ಸಾಕ್ಷಿಯಾದರು.
ಭಕ್ತಾದಿಗಳ ಕೈಯಿಂದಲೇ ‘ಭಕ್ತಿಯ ಭಂಡಾರ’ ಗೀತೆ ರಿಲೀಸ್
ಕಾರ್ಯಕ್ರಮದಲ್ಲಿ ಅಥಣಿ ತಾಲೂಕಿನ ಪೂಜ್ಯ ಶ್ರೀ ಅಂಬ್ರೇಶ್ವರ್ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವ ಮೂಲಕ ಸಮಾರಂಭಕ್ಕೆ ಆಧ್ಯಾತ್ಮಿಕ ಮೆರುಗು ತುಂಬಿದರು. ಸಾಮಾನ್ಯವಾಗಿ ಸಿನಿರಂಗದ ಹಾಡುಗಳನ್ನು ಗಣ್ಯರು ಅಥವಾ ತಾರೆಯರ ಸಮ್ಮುಖದಲ್ಲಿ ಬಿಡುಗಡೆ ಮಾಡುವುದು ವಾಡಿಕೆ. ಆದರೆ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಯಾವುದೇ ಗಣ್ಯರ ಬದಲಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ಸಾಮಾನ್ಯ ಭಕ್ತಾದಿಗಳ ಕೈಯಿಂದಲೇ ‘ಭಕ್ತಿಯ ಭಂಡಾರ’ ಗೀತೆಯನ್ನು ಅನಾವರಣಗೊಳಿಸಿದ್ದು. ಈ ವಿನೂತನ ಪ್ರಯೋಗ ನೆರೆದಿದ್ದ ಭಕ್ತಸಮೂಹದಲ್ಲಿ ಅಪಾರ ಹರ್ಷವನ್ನು ಉಂಟುಮಾಡಿತು.
‘ಅನಂತ ಪಯಣ’ ಸಿನಿಮಾವು ಭಕ್ತಿ ಹಾಗೂ ಭಾವನಾತ್ಮಕ ಎಳೆಗಳನ್ನು ಹೊಂದಿರುವ ಕಥಾಹಂದರವನ್ನು ಒಳಗೊಂಡಿದೆ. ದೇವರ ಮೇಲಿನ ಅಚಲ ನಂಬಿಕೆ, ಸಮರ್ಪಣಾ ಭಾವ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ಸಂಗೀತದ ಮೂಲಕ ತಲುಪಿಸುವ ಸದುದ್ದೇಶದಿಂದ ಈ ಭಕ್ತಿಗೀತೆಯನ್ನು ಅತ್ಯಂತ ಶ್ರದ್ಧೆಯಿಂದ ರೂಪಿಸಲಾಗಿದೆ. ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಶ್ರೀ ಕಾಕ ಅವರೇ ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಭಕ್ತಿಗೀತೆಯ ಭಾವತೀವ್ರತೆಗೆ ತಕ್ಕಂತೆ ಸ್ವತಃ ಅವರೇ ನೃತ್ಯ ಸಂಯೋಜನೆಯನ್ನೂ ಮಾಡಿ ಹಾಡಿನ ದೃಶ್ಯ ವೈಭವಕ್ಕೆ ವಿಶೇಷ ಆಕರ್ಷಣೆ ತಂದಿದ್ದಾರೆ.
ಚಿತ್ರಕ್ಕೆ ಸಂತೋಷ್ ಅಶೋಕ್ ಹೆಗ್ಡೆ ಹಾಗೂ ಎಸ್.ಕೆ. ಫಿಲಂ ಫ್ಯಾಕ್ಟರಿ ಬಂಡವಾಳ ಹೂಡಿದ್ದು, ಸದಭಿರುಚಿಯ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಸಂಕಲ್ಪದೊಂದಿಗೆ ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ. ಹಾಡು ಬಿಡುಗಡೆಯಾದ ಕ್ಷಣದಲ್ಲಿ ದೇವಸ್ಥಾನದ ಆವರಣದಲ್ಲಿ ಭಕ್ತರ ಜಯಘೋಷ ಮೊಳಗಿತು. ದೈವ ಸನ್ನಿಧಿಯಲ್ಲಿ ತಮ್ಮ ಕೈಯಿಂದಲೇ ಹಾಡು ರಿಲೀಸ್ ಆಗಿರುವುದು ಭಕ್ತರಲ್ಲಿ ಧನ್ಯತಾ ಭಾವವನ್ನು ಮೂಡಿಸಿತು.
ಈ ಹಾಡು ಕೇವಲ ಸಿನಿಮೀಯ ಗೀತೆಯಾಗದೆ, ಪ್ರತಿಯೊಬ್ಬ ಭಕ್ತನ ಅಂತರಂಗದಲ್ಲೂ ಭಕ್ತಿಭಾವವನ್ನು ಜಾಗೃತಗೊಳಿಸುವಂತಾಗಲಿ ಎಂಬುದು ಚಿತ್ರತಂಡದ ಆಶಯವಾಗಿದೆ. ಶ್ರೀ ಅಂಬ್ರೇಶ್ವರ್ ಸ್ವಾಮೀಜಿಯವರ ಆಶೀರ್ವಾದ, ಭಕ್ತರ ಪ್ರೀತಿ ಹಾಗೂ ಶ್ರೀ ಕಾಕ ಅವರ ಪರಿಶ್ರಮದಲ್ಲಿ ಮೂಡಿಬಂದಿರುವ ಈ ‘ಭಕ್ತಿಯ ಭಂಡಾರ’ ಗೀತೆ ಸದ್ಯ ಕನ್ನಡಿಗರ ಮನಗೆದ್ದು ಭಕ್ತಿ ಲೋಕದಲ್ಲಿ ಸಂಚಲನ ಮೂಡಿಸುವ ಮುನ್ಸೂಚನೆ ನೀಡಿದೆ.