Boss Movie Review: ಎಲ್ರಿಗೂ ಗೊತ್ತಿರೋ ಕಥೆಗೆ ಹೊಸ ರೂಪ ಕೊಡಲು ಯತ್ನಿಸಿದ 'ಬಾಸ್'!
BOSS MOVIE REVIEW: ನಿರ್ದೇಶಕ ಲವ ಸಾರಥ್ಯದ ಹಾಗೂ ತನುಷ್ ಶಿವಣ್ಣ ನಟನೆಯ 'ಬಾಸ್' ಸಿನಿಮಾ ಇಂದು (ಆ.7) ಬಿಡುಗಡೆಯಾಗಿದೆ. ಈ ಸಿನಿಮಾದ ಕಥೆಯು ದರ್ಶನ್ ಅವರ ಕೇಸ್‌ಗೆ ಹೋಲಿಕೆ ಇದೆ ಎಂಬ ಗುಮಾನಿ ಆರಂಭದಿಂದಲೂ ಇತ್ತು. ಹಾಗಾದರೆ, ಈ ಸಿನಿಮಾದ ಕಥೆಯಲ್ಲಿ ಯಾವೆಲ್ಲಾ ವಿಚಾರಗಳಿವೆ? ಮುಂದೆ ಓದಿ.
-
ಚಿತ್ರ: ಬಾಸ್
ಬಿಡುಗಡೆ ದಿನಾಂಕ: ಆಗಸ್ಟ್ 7, 2026
ಭಾಷೆ: ಕನ್ನಡ
ಪ್ರಕಾರ (Genre): ಥ್ರಿಲ್ಲರ್, ಡ್ರಾಮಾ
ನಿರ್ದೇಶನ: ಲವ
ತಾರಾಗಣ: ತನುಷ್ ಶಿವಣ್ಣ, ಪಾಯಲ್ ಚೆಂಗಪ್ಪ, ವಂದಿತಾ ಗೌಡ, ಸಂದೀಪ್
ಅವಧಿ: 122 ನಿಮಿಷಗಳು
ರೇಟಿಂಗ್: 2.5/5
ನಟ ತನುಷ್ ಶಿವಣ್ಣ ಅವರು ‘ಬಾಸ್’ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಎಲ್ಲರಿಗೂ ಇದು ಅದೇ ಕೇಸ್ ಇರಬಹುದಾ ಎಂಬ ಅನುಮಾನ ಮೂಡಿದ್ದು ಸಹಜ. ಆನಂತರ ಬಿಡುಗಡೆಯಾದ ಫಸ್ಟ್ ಲುಕ್ ಹಾಗೂ ಟೀಸರ್ ನೋಡಿದ ಮೇಲಂತೂ, "ಇದು ನಟ ದರ್ಶನ್ ಬದುಕಿನಲ್ಲಿ ನಡೆದ ಕಥೆ; ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಇಲ್ಲಿ ಸಿನಿಮಾವಾಗಿದೆ" ಎಂದು ಚರ್ಚಿಸಲಾರಂಭಿಸಿದರು. ಕೊನೆಗೆ ದರ್ಶನ್ ಅವರ ಕುಟುಂಬ ಈ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ನಮಗೆಲ್ಲ ಗೊತ್ತೇ ಇದೆ. ಸದ್ಯ ಎಲ್ಲಾ ಅಡೆತಡೆಗಳನ್ನು ದಾಟಿ ಈ ಸಿನಿಮಾ ತೆರೆಗೆ ಬಂದಿದೆ. ಹಾಗಾದರೆ ಇದು ದರ್ಶನ್ ಅವರ ಜೀವನದಲ್ಲಿ ನಡೆದ ಕಥೆಯಾ? ಅಥವಾ ಬೇರೆ ಕಥೆ ಇದೆಯೇ? ಇಲ್ಲಿದೆ ಸಿನಿಮಾ ವಿಮರ್ಶೆ.
‘ಬಾಸ್’ ಸಿನಿಮಾದ ಕಥೆಯೇನು?
ತನುಷ್ ಅಲಿಯಾಸ್ ಬಾಸ್ (ತನುಷ್) ಒಬ್ಬ ಖ್ಯಾತ ಕ್ರಿಕೆಟಿಗ. ಆತನಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುವ ಅಭಿಮಾನಿಗಳಿದ್ದಾರೆ, ಸಮಾಜದಲ್ಲಿ ದೊಡ್ಡ ಸ್ಥಾನಮಾನವಿದೆ. ಆತನ ಜೊತೆ ಒಂದು ಸೆಲ್ಫಿ ಸಿಕ್ಕರೆ ಸಾಕು ಎಂಬ ಕಾಯುವ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಇಂತಹ ಬಾಸ್‌ನ ಪ್ರೇಯಸಿ ಶೀಲಾ ಗೌಡ (ವಂದಿತಾ). ಈಕೆಗೆ ಶಿವಸ್ವಾಮಿ (ಸಂದೀಪ್) ಎಂಬ ಮೊಬೈಲ್ ಶಾಪ್‌ನ ಸಿಬ್ಬಂದಿಯೊಬ್ಬ ಅಶ್ಲೀಲ ಸಂದೇಶಗಳನ್ನು, ಫೋಟೋಗಳನ್ನು ಕಳುಹಿಸುತ್ತಾ, ಕರೆ ಮಾಡಿ ಕಿರುಕುಳ ನೀಡುತ್ತಿರುತ್ತಾನೆ. ಇದರಿಂದ ಶೀಲಾಳ ನೆಮ್ಮದಿ ಹಾಳಾಗುತ್ತದೆ. ಕೊನೆಗೆ ಶೀಲಾಳ ಮನೆಕೆಲಸದ ಹುಡುಗ ಜೀವನ್, ಶಿವಸ್ವಾಮಿಯನ್ನು ಪತ್ತೆ ಹಚ್ಚುತ್ತಾನೆ. ಕೊನೆಗೆ ಆತನನ್ನು ಕಿಡ್ನಾಪ್ ಮಾಡಿಸುತ್ತಾನೆ. ಬೆಂಗಳೂರಿನ ಶೆಡ್‌ವೊಂದರಲ್ಲಿ ಆತನನ್ನು ಕೂಡಿಹಾಕಿ ಹಲ್ಲೆ ನಡೆಸಲಾಗುತ್ತದೆ. ಜೀವನ್ ಮತ್ತಿತರ ಸಹಚರರ ಹೊಡೆತ ತಾಳಲಾರದೆ ಶಿವಸ್ವಾಮಿ ಸಾವನ್ನಪ್ಪುತ್ತಾನೆ.
ಆನಂತರವೇ ಅಸಲಿ ಆಟ ಶುರುವಾಗುವುದು. ಕೊಲೆಯಾದ ಶಿವ ಸ್ವಾಮಿ ಮೃತದೇಹವನ್ನ ಹೇಗೆ ವಿಲೇವಾರಿ ಮಾಡ್ತಾರೆ? ಈ ಕೇಸ್‌ನಲ್ಲಿ ಕ್ರಿಕೆಟಿಗ ಬಾಸ್ ಎಂಟ್ರಿ ಆಗುವುದು ಏಕೆ? ಬಾಸ್‌ಗೂ ಈ ಶಿವಸ್ವಾಮಿಗೂ ಏನು ಲಿಂಕ್? ಎಂಬುದನ್ನು ತೆರೆಮೇಲೆಯೇ ನೋಡಬೇಕು.
ಮೇಕಿಂಗ್ ಹೇಗಿದೆ?
ಈ ಕಥೆಯನ್ನು ಕೇಳಿದಾಗ, ಇದನ್ನು ಎಲ್ಲೋ ಕೇಳಿದಂತಿದೆಯಲ್ಲ ಎನಿಸುವುದು ಸಹಜ. ಹೌದು, ಇದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನೇ ಹೋಲುತ್ತದೆ. ಆದರೆ, ಕಥೆಯಲ್ಲಿ ಬರುವ ಊರು ಹಾಗೂ ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಇಲ್ಲಿನ ಮುಖ್ಯಪಾತ್ರಧಾರಿ ಬಾಸ್ ಒಬ್ಬ ಕ್ರಿಕೆಟ್ ಆಟಗಾರ. ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬರುವ ಪಾತ್ರಗಳೇ ಇಲ್ಲಿವೆ ಎನಿಸಿದರೂ, ಅವುಗಳ ಹಿನ್ನೆಲೆ ಮತ್ತು ಹೆಸರುಗಳು ಬೇರೆ ಬೇರೆಯಾಗಿವೆ.
ನಾವು ಈಗಾಗಲೇ ಪತ್ರಿಕೆಗಳಲ್ಲಿ ಓದಿರುವ, ಟಿವಿಯಲ್ಲಿ ನೋಡಿರುವ ವಿಚಾರಗಳೇ ಇಲ್ಲಿ ದೃಶ್ಯರೂಪ ಪಡೆದುಕೊಂಡಿವೆ. "ಆ ಕೇಸ್‌ಗೂ ನಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ" ಎಂದು ಚಿತ್ರತಂಡ ಹೇಳಿದರೂ, ನೋಡುಗ ಮಾತ್ರ ರೇಣುಕಾಸ್ವಾಮಿ ಪ್ರಕರಣದೊಂದಿಗೇ ಎಲ್ಲವನ್ನೂ ಹೋಲಿಸುತ್ತಾ ಸಾಗುತ್ತಾನೆ.
ನಿರ್ದೇಶಕ ಲವ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಗಮನಸೆಳೆಯುವ ಕೆಲಸ ಮಾಡಿದ್ದರೂ, ಅದು ಮೊದಲಾರ್ಧದ (First Half) ತನಕ ಮಾತ್ರ! ಮೊದಲಾರ್ಧವು ಪ್ರೇಕ್ಷಕ ಊಹಿಸಿದಂತೆ ಸಾಗಿದರೂ, ಒಂದಷ್ಟು ರೋಚಕತೆಯನ್ನು ಕಾಯ್ದುಕೊಂಡಿದೆ. ಶಿವಸ್ವಾಮಿಯನ್ನು ಕಿಡ್ನಾಪ್ ಮಾಡುವುದು, ಆತನಿಗೆ ಚಿತ್ರಹಿಂಸೆ ನೀಡುವುದು, ಶೀಲಾ ಗೌಡಳ ತಳಮಳ ಹಾಗೂ ಬಾಸ್ ಎಂಟ್ರಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮತ್ತು ಕುತೂಹಲ ಮೂಡಿಸುವ ರೀತಿಯಲ್ಲಿ ತೋರಿಸಿದ್ದಾರೆ.
ಆದರೆ, ದ್ವಿತೀಯಾರ್ಧ ಮಾತ್ರ ನೀರಸವಾಗಿ ಸಾಗುತ್ತದೆ. ಈಗಾಗಲೇ ಸುದ್ದಿ ವಾಹಿನಿಗಳಲ್ಲಿ ನೋಡಿದ ದೃಶ್ಯಗಳೇ ಸಿನಿಮಾದಲ್ಲೂ ಪುನರಾವರ್ತನೆಯಾದಂತಿರುತ್ತದೆ. ಕಥೆಯು ಆರಕ್ಕೇರದೆ, ಮೂರಕ್ಕಿಳಿಯದೆ ಸಾಗುತ್ತದೆ. ಜೊತೆಗೆ ಈ ಸಿನಿಮಾಗೆ ಸರಿಯಾದ ಅಂತ್ಯವೂ ಸಿಕ್ಕಿಲ್ಲ. ಆರಂಭದ ಮತ್ತು ಕೊನೆಯ ದೃಶ್ಯಗಳಿಗೆ ನಿರ್ದೇಶಕರು ಎಐ ಮೊರೆಹೋಗಿರುವುದು ಬೇಸರ ಮೂಡಿಸುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಬೇಕಾದಂತಹ ಸೂಕ್ತ ಹಿನ್ನೆಲೆ ಸಂಗೀತ ಇಲ್ಲಿಲ್ಲ. ಮೊದಲಾರ್ಧದಲ್ಲಿದ್ದ ರೋಚಕತೆಯನ್ನು ಕೊನೆಯವರೆಗೂ ಉಳಿಸಿಕೊಂಡು, ಗೊತ್ತಿರುವ ಕಥೆಯನ್ನೇ ಪುನಃ ಹೇಳುವ ಬದಲು ಬೇರೆ ಏನಾದರೂ ಹೊಸ 'ಟ್ವಿಸ್ಟ್' ಕೊಟ್ಟಿದ್ದರೆ ಸಿನಿಮಾ ಇನ್ನು ಚೆನ್ನಾಗಿರುತ್ತಿತ್ತು.
ಕಲಾವಿದರ ಅಭಿನಯ ಹೇಗಿದೆ?
ನಟ ತನುಷ್ ಅವರು 'ಬಾಸ್' ಪಾತ್ರದಲ್ಲಿ ತಕ್ಕಮಟ್ಟಿಗೆ ಇಷ್ಟವಾಗುತ್ತಾರೆ. ಶೀಲಾ ಗೌಡ ಪಾತ್ರದಲ್ಲಿ ವಂದಿತಾ ಹೆಚ್ಚು ಸ್ಕೋರ್ ಮಾಡುತ್ತಾರೆ. ಬಾಸ್ ಪತ್ನಿಯಾಗಿ ಅಭಿನಯಿಸಿರುವ ಪಾಯಲ್ ಚೆಂಗಪ್ಪ ಅವರಿಗೆ ಜಾಸ್ತಿ ದೃಶ್ಯಗಳಿಲ್ಲದಿದ್ದರೂ, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜೇಶ್ ಲೀ ಅಭಿನಯ ಚೆನ್ನಾಗಿದೆ. ಬಾಸ್ ಸಹಚರರಾಗಿ ಕಾಣಿಸಿಕೊಂಡಿರುವ ವಿರಾಜ್, ಸುಜಾನಿತ್, ಭೀಷ್ಮ ರಾಮಯ್ಯ ಮುಂತಾದವರು ಪಾತ್ರಕ್ಕೆ ಸರಿಹೊಂದಿದ್ದಾರೆ. ಶಿವಸ್ವಾಮಿ ಪಾತ್ರ ಮಾಡಿರುವ ನಟ ಸಂದೀಪ್ ನೀನಾಸಂ ಬೆರಗು ಮೂಡಿಸುತ್ತಾರೆ.
ಅಂತಿಮವಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನೇ ಹೋಲುವಂತಿರುವ 'ಬಾಸ್' ಸಿನಿಮಾವು ಸರಿಯಾದ ಅಂತ್ಯವಿಲ್ಲದೆ ಸೊರಗುತ್ತದೆ. ಈ ಪ್ರಕರಣದ ಕುರಿತು ಆಸಕ್ತಿ ಇದ್ದವರು ಒಮ್ಮೆ ಈ ಸಿನಿಮಾವನ್ನು ನೋಡಬಹುದು.