ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಾಲಿವುಡ್‌ಗೆ ಆಘಾತ; ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಯುವ ನಟ ಭರತ್ ಕಾಂತ್ - ಛಾಯಾಗ್ರಾಹಕ ತ್ರಿಲೋಕ್

ಟಾಲಿವುಡ್‌ನ ಉದಯೋನ್ಮುಖ ನಟ ಭರತ್ ಕಾಂತ್ ಮತ್ತು ಯುವ ಛಾಯಾಗ್ರಾಹಕ ಸಾಯಿ ತ್ರಿಲೋಕ್ ಹೈದರಾಬಾದ್ ಹೊರವಲಯದ ಔಟರ್ ರಿಂಗ್ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಭಾನುವಾರ ಮುಂಜಾನೆ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಇವರಿಗೆ 31 ವರ್ಷ ವಯಸ್ಸಾಗಿತ್ತು.

ಅಪಘಾತದಲ್ಲಿ ಪ್ರಾಣಬಿಟ್ಟ ನಟ ಭರತ್‌ಕಾಂತ್‌ - ಛಾಯಾಗ್ರಾಹಕ ಸಾಯಿ ತ್ರಿಲೋಕ್

-

Avinash GR
Avinash GR May 11, 2026 11:59 AM

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಭರತ್ ಕಾಂತ್ (31) ಮತ್ತು ಯುವ ಛಾಯಾಗ್ರಾಹಕ ಸಾಯಿ ತ್ರಿಲೋಕ್ (31) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಭಾನುವಾರ ಮುಂಜಾನೆ ಹೈದರಾಬಾದ್ ಹೊರವಲಯದ ಔಟರ್ ರಿಂಗ್ ರೋಡ್‌ನಲ್ಲಿ (ORR) ನಡೆದ ಭೀಕರ ಅಪಘಾತದಲ್ಲಿ ಇವರಿಬ್ಬರು ಮೃತಪಟ್ಟಿದ್ದು, ಈ ಸುದ್ದಿಯು ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ. ಏಕಕಾಲದಲ್ಲಿ ಇಬ್ಬರು ಯುವ ಪ್ರತಿಭೆಗಳನ್ನು ಕಳೆದುಕೊಂಡಿದ್ದಕ್ಕೆ ಟಾಲಿವುಡ್ ಕಂಬನಿ ಮಿಡಿದಿದೆ.

ಈ ಅಪಘಾತ ಸಂಭವಿಸಿದ್ದು ಹೇಗೆ?

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಭರತ್ ಕಾಂತ್ ಮತ್ತು ತ್ರಿಲೋಕ್ ತಮ್ಮ ಸ್ವಂತ ಊರಾದ ನೆಲ್ಲೂರುನಿಂದ ಶನಿವಾರ ರಾತ್ರಿ ಕಾರಿನಲ್ಲಿ ಹೈದರಾಬಾದ್‌ಗೆ ಆಗಮಿಸುತ್ತಿದ್ದರು. ಭಾನುವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ದೊಡ್ಡ ಅಂಬರ್‌ಪೇಟ್‌ನಿಂದ ಶಂಷಾಬಾದ್ ಕಡೆಗೆ ಹೋಗುತ್ತಿದ್ದಾಗ, ಬೊಂಗುಳೂರು ಎಕ್ಸಿಟ್ 12ರ ಸಮೀಪ ಭರತ್‌ ಮತ್ತು ತ್ರಿಲೋಕ್‌ ಇದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕಂಟೇನರ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಭರತ್ ಮತ್ತು ತ್ರಿಲೋಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Dileep Shankar: ಮಲಯಾಳಂ ನಟ ದಿಲೀಪ್‌ ಶಂಕರ್‌ ನಿಗೂಢ ಸಾವು-ಆತ್ಮಹತ್ಯೆ ಶಂಕೆ

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭರತ್‌ - ತ್ರಿಲೋಕ್‌ ಯಾವ್ಯಾವ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು?

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ಟೆನೆಂಟ್' ಸಿನಿಮಾದಲ್ಲಿ ನಟ ಭರತ್ ಕಾಂತ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಹಲವು ವೆಬ್ ಸರಣಿಗಳಲ್ಲೂ ಅವರು ಮಿಂಚಿದ್ದರು. ಇನ್ನು ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ತ್ರಿಲೋಕ್, ಹಲವು ಚಿತ್ರಗಳ ಜೊತೆಗೆ ಕಮರ್ಷಿಯಲ್ ಜಾಹೀರಾತುಗಳಿಗೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪುರಿ ಜಗನ್ನಾಥ್ ಪುತ್ರ ಆಕಾಶ್ ಪುರಿ ನಟನೆಯ 'ತಲ್ವಾರ್' ಸಿನಿಮಾಗೆ ಡಿಓಪಿ (DoP) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚಿತ್ರರಂಗದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿದ್ದ ಈ ಇಬ್ಬರು ಪ್ರತಿಭಾವಂತರು ಅಕಾಲಿಕ ಮರಣ ಹೊಂದಿದ್ದು ಬೇಸರದ ಸಂಗತಿ.

ಸಂತಾಪ ಸೂಚಿಸಿದ ನಟಿ ಅಶು ರೆಡ್ಡಿ

ಗೆಳೆಯ ಭರತ್ ಕಾಂತ್ ನಿಧನಕ್ಕೆ ನಟಿ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. "ಇದು ನನಗೆ ತುಂಬಲಾರದ ನಷ್ಟ. ನನ್ನ ಪ್ರಾಣ ಸ್ನೇಹಿತ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್ ಪರ್ಸನ್, ನನ್ನ ಕುಟುಂಬ ಮತ್ತು ನನ್ನ ಆತ್ಮೀಯ ಈಗ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಿನಗೆ ತಲುಪದ ಈ ಸಂದೇಶವನ್ನು ನಾನು ಪೋಸ್ಟ್ ಮಾಡುತ್ತೇನೆ ಅಂತ ನಾನು ಎಂದಿಗೂ ಅಂದುಕೊಂಡಿರಲಿಲ್ಲ"

ಅಶು ರೆಡ್ಡಿ ಪೋಸ್ಟ್‌

"ನಿನ್ನನ್ನು ಮತ್ತೆ ಭೇಟಿಯಾಗುವವರೆಗೂ ನಿನ್ನ ಮುಖ ಮತ್ತು ಆ ನಗು ಸದಾ ನೆನಪಿರುತ್ತದೆ. ಭಾರವಾದ ಹೃದಯದೊಂದಿಗೆ ನಿನಗೆ ವಿದಾಯ ಹೇಳುತ್ತಿದ್ದೇನೆ, ಗುಡ್ ಬೈ ಭರತ್..." ಎಂದು ಅಶು ರೆಡ್ಡಿ ನೋವು ಹಂಚಿಕೊಂಡಿದ್ದಾರೆ. ಭರತ್ ಜೊತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ಅವರು, "ದಯವಿಟ್ಟು ಮರಳಿ ಬಾ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.