ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

Jana Nayagan Movie Review: ತಮಿಳುನಾಡು ಸಿಎಂ 'ದಳಪತಿ' ವಿಜಯ್ ನಟನೆಯ ಅಂತಿಮ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ಮೂಲ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ವಿಜಯ್‌ ಫ್ಯಾನ್ಸ್‌ಗೆ ಇಷ್ಟವಾಗುತ್ತದೆಯೇ? ವಿಜಯ್‌ ಅವರಿಗೆ ಉತ್ತಮವಾದ ಬೀಳ್ಕೊಡುಗೆ ಸಿಕ್ಕಿದೆಯಾ? ಈ ಸಿನಿಮಾ ವಿಮರ್ಶೆ ಓದಿ.

Thalapathy Vijay: ʻಜನ ನಾಯಗನ್ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Jul 23, 2026 4:51 PM

ಚಿತ್ರ: ಜನ ನಾಯಗನ್

ಬಿಡುಗಡೆ ದಿನಾಂಕ: ಜುಲೈ 23, 2026

ಭಾಷೆ: ತಮಿಳು

ಜಾನರ್: ಆಕ್ಷನ್, ಡ್ರಾಮಾ, ಥ್ರಿಲ್ಲರ್

ನಿರ್ದೇಶನ: ಎಚ್. ವಿನೋದ್

ತಾರಾಗಣ: 'ದಳಪತಿ' ವಿಜಯ್, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಇತರರು

ಸಂಗೀತ: ಅನಿರುದ್ಧ್ ರವಿಚಂದರ್

ಅವಧಿ: 183 ನಿಮಿಷಗಳು

ರೇಟಿಂಗ್: 2.5/5

‘ದಳಪತಿ’ ವಿಜಯ್ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಇವರು, ತಮ್ಮ ನಾಲ್ಕು ದಶಕಗಳ ಚಲನಚಿತ್ರ ಪಯಣದಲ್ಲಿ 69 ಸಿನಿಮಾಗಳಲ್ಲಿ ನಟಿಸಿರುವ ಕಾಲಿವುಡ್‌ನ ಸೂಪರ್‌ಸ್ಟಾರ್. ತಮ್ಮ ಜನಪ್ರಿಯತೆಯನ್ನೇ ನಂಬಿ ರಾಜಕೀಯ ಅಖಾಡಕ್ಕೆ ಧುಮುಕಿರುವ ವಿಜಯ್, ಪ್ರಸ್ತುತ ತಮಿಳುನಾಡು ಮುಖ್ಯಮಂತ್ರಿಯಾಗಿಯೂ ಅಧಿಕಾರದಲ್ಲಿದ್ದಾರೆ. ಒಂದು ಇಡೀ ರಾಜ್ಯದ ಜನರನ್ನು ಮುನ್ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿಜಯ್, ಈಗಾಗಲೇ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಅದಕ್ಕೂ ಮುನ್ನ ಅವರ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರಮಂದಿರಕ್ಕೆ ಆಗಮಿಸಿದೆ. ಇದು ವಿಜಯ್ ಅವರಿಗೆ ಸೂಕ್ತವಾದ ಬೀಳ್ಕೊಡುಗೆಯೇ? ಅವರ ಕೊನೆಯ ಸಿನಿಮಾ ಅಭಿಮಾನಿಗಳನ್ನು ಖುಷಿಪಡಿಸುತ್ತದೆಯೇ? ಇಲ್ಲಿದೆ ಸಂಪೂರ್ಣ ವಿಮರ್ಶೆ.

ಇದು ಭಗವಂತ್‌ ಕೇಸರಿಯ ಅರೆಬರೆ ರಿಮೇಕ್!‌

'ಜನ ನಾಯಗನ್' ಸಿನಿಮಾ ಸೆಟ್ಟೇರಿದ ಆರಂಭದಲ್ಲೇ ಇದು ತೆಲುಗಿನ 'ಭಗವಂತ್ ಕೇಸರಿ' ಸಿನಿಮಾದ ರಿಮೇಕ್ ಎಂಬ ಮಾತುಗಳು ಕೇಳಿಬಂದಿದ್ದವು. ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲವಾದರೂ, ಟ್ರೇಲರ್ ನೋಡಿದವರಿಗೆ ಅದು ರಿಮೇಕ್ ಎಂಬುದು ಖಾತ್ರಿಯಾಗಿತ್ತು. ಈಗ ಸಿನಿಮಾ ತೆರೆಕಂಡಿದೆ. ಹಾಗಾದರೆ, ಇದು ಪಕ್ಕಾ ರಿಮೇಕ್ ಸಿನಿಮಾವೇ? ಸಂಪೂರ್ಣವಾಗಿ ಹೌದು ಎಂದೂ ಹೇಳಲಾಗುವುದಿಲ್ಲ, ಇಲ್ಲ ಎಂದೂ ತಳ್ಳಿಹಾಕಲು ಸಾಧ್ಯವಿಲ್ಲ! ಏಕೆಂದರೆ, ಈ ಚಿತ್ರದ ಮೂಲ ಕಥಾಹಂದರವನ್ನು 'ಭಗವಂತ್ ಕೇಸರಿ'ಯಿಂದ ನೇರಾನೇರ ಪಡೆಯಲಾಗಿದೆ. ಆದರೆ, ಅದಕ್ಕೊಂದಿಷ್ಟು ಅನಗತ್ಯ ಮಸಾಲೆ ಮತ್ತು ವೈಯಕ್ತಿಕ ರಾಜಕೀಯ ಅಜೆಂಡಾಗಳನ್ನು ಸೇರಿಸಿ, 3 ಗಂಟೆಯ ಸುದೀರ್ಘ ಸಿನಿಮಾವನ್ನಾಗಿ ವಿಸ್ತರಿಸಲಾಗಿದೆ.

ಜನ ನಾಯಗನ್‌ ಕಥೆ ಏನು?

ದಳಪತಿ ವೆಟ್ರಿಕೊಂಡನ್ (ವಿಜಯ್) ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಆತನ ಮೇಲೆ ಜೈಲರ್ ಶ್ರೀಕಾಂತ್‌ಗೆ (ಗೌತಮ್ ಮೆನನ್) ವಿಶೇಷ ಗೌರವ ಮತ್ತು ಕರುಣೆ. ಶ್ರೀಕಾಂತ್ ಅವರ ಮುದ್ದಿನ ಮಗಳೇ ವಿಜಿ (ಮಮಿತಾ ಬೈಜು). ತಾಯಿಯನ್ನು ಕಳೆದುಕೊಂಡ ವಿಜಿ ಜೊತೆ ದಳಪತಿಗೆ ಉತ್ತಮ ಒಡನಾಟವಿರುತ್ತದೆ. ಇದೇ ವೇಳೆಗೆ ಶ್ರೀಕಾಂತ್ ಅಪಘಾತಕ್ಕೀಡಾಗಿ ಕೊನೆಯುಸಿರೆಳೆಯುವಾಗ, ಮಗಳು ವಿಜಿಯ ಜವಾಬ್ದಾರಿಯನ್ನು ಜೈಲಿನಿಂದ ಬಿಡುಗಡೆಯಾದ ದಳಪತಿಗೆ ಒಪ್ಪಿಸುತ್ತಾರೆ. ಆಕೆಯನ್ನು ಒಬ್ಬ ಸ್ವತಂತ್ರ ಹಾಗೂ ಶಕ್ತಿಶಾಲಿ ಮಹಿಳೆಯಾಗಿ ಬೆಳೆಸಿ, ಭಾರತೀಯ ಸೇನೆಗೆ ಸೇರಿಸುವಂತೆ ವಿನಂತಿಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ದಳಪತಿ, ವಿಜಿಯನ್ನು ಸೈನ್ಯಕ್ಕೆ ಸೇರಿಸುವ ಹೊಣೆ ಹೊತ್ತುಕೊಳ್ಳುತ್ತಾನೆ. ಆದರೆ, ದಳಪತಿಗೆ ಒಂದು ಭಯಂಕರ ಹಿನ್ನೆಲೆಯಿದ್ದರೆ, ಅತ್ತ ವಿಜಿಗೂ ಒಂದು ಭಾವನಾತ್ಮಕ ಫ್ಲ್ಯಾಶ್‌ಬ್ಯಾಕ್ ಇರುತ್ತದೆ. ಈ ಮಧ್ಯೆ ದೇಶವನ್ನೇ ನಾಶ ಮಾಡಲು ಜಾನ್ ಹಿಮ್ಲರ್ (ಬಾಬಿ ಡಿಯೋಲ್) ಎಂಬ ದೇಶದ್ರೋಹಿಯ ಎಂಟ್ರಿಯಾಗುತ್ತದೆ. ಈ ಎಲ್ಲಾ ಸವಾಲುಗಳನ್ನು ದಳಪತಿ ಹೇಗೆ ಎದುರಿಸುತ್ತಾನೆ ಎಂಬುದೇ ಉಳಿದ ಕಥೆ.

ಎಡವಿದ ನಿರ್ದೇಶಕ ಎಚ್.‌ ವಿನೋದ್!‌

'ಭಗವಂತ್ ಕೇಸರಿ' ಸಿನಿಮಾವನ್ನೇ ರಿಮೇಕ್ ಮಾಡಬೇಕೆಂಬುದು ವಿಜಯ್ ಅವರ ಬಯಕೆಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಆ ಸಿನಿಮಾದಲ್ಲಿದ್ದ 'ಮಹಿಳಾ ಸಬಲೀಕರಣ'ದ ಆಶಯಗಳು. ಮೂಲ ಚಿತ್ರದಲ್ಲಿ ಈ ವಿಷಯವನ್ನು ಪರಿಣಾಮಕಾರಿಯಾಗಿ ಹೇಳಿದ್ದರಿಂದ ಆ ತಂಡಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಇದೀಗ ಅದೇ ವಿಷಯಗಳ ಜೊತೆಗೆ ರಾಜಕೀಯ ಮಸಾಲೆಯನ್ನು ಸೇರಿಸಿ, ತಮ್ಮ ರಾಜಕೀಯ ಪ್ರವೇಶಕ್ಕೆ ಭರ್ಜರಿ ವೇದಿಕೆ ಸಿದ್ಧಪಡಿಸಿಕೊಳ್ಳುವುದು ವಿಜಯ್ ಉದ್ದೇಶವಾಗಿತ್ತು ಎಂಬುದು ಸಿನಿಮಾ ನೋಡಿದರೆ ಸ್ಪಷ್ಟವಾಗುತ್ತದೆ. ಇದರ ಜವಾಬ್ದಾರಿಯನ್ನು ನಿರ್ದೇಶಕ ಎಚ್. ವಿನೋದ್ ವಹಿಸಿಕೊಂಡಿದ್ದರು.

ಈ ಹಿಂದೆ ಹಿಂದಿಯ 'ಪಿಂಕ್' ಸಿನಿಮಾವನ್ನು ಅಜಿತ್ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಬದಲಾಯಿಸಿ 'ನೇರ್ಕೊಂಡ ಪಾರ್ವೈ' ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ವಿನೋದ್‌ಗೆ, ಈ ಬಾರಿ 'ಭಗವಂತ್ ಕೇಸರಿ'ಯ ಆಶಯವನ್ನು ದೃಶ್ಯರೂಪಕ್ಕೆ ತರಲು ಕಷ್ಟವಾಗಿದೆ. ಕಥೆಗಿಂತ ಹೆಚ್ಚಾಗಿ ವಿಜಯ್ ಅವರನ್ನು ತಮಿಳುನಾಡಿಗೆ ಅಗತ್ಯವಿರುವ ಪರ್ಯಾಯ ನಾಯಕ ಹಾಗೂ ಕಾಳಜಿಯುಳ್ಳ ರಾಜಕಾರಣಿಯಾಗಿ ಬಿಂಬಿಸುವ ಪ್ರಯತ್ನವೇ ಎದ್ದು ಕಾಣುತ್ತದೆ. ಒಂದು ದೃಶ್ಯದಲ್ಲಿ ಎಂ.ಜಿ.ಆರ್. ಅವರ ಭಾವಚಿತ್ರದ ಪಕ್ಕದಲ್ಲಿ ವಿಜಯ್ ಸಾಗುವಾಗ, "ತಂಗಮೇ ದಳಪತಿ" ಎಂಬ ಎಂ.ಜಿ.ಆರ್. ಧ್ವನಿ ಕೇಳಿಬರುತ್ತದೆ. ಅಂದರೆ, ರಾಜಕೀಯ ಅಧಿಕಾರದ ಚುಕ್ಕಾಣಿಯನ್ನು ನೇರವಾಗಿ ಹಸ್ತಾಂತರಿಸಿದಂತೆ ಬಿಂಬಿಸಲಾಗಿದೆ! ಇವೆಲ್ಲವೂ ಸಿನಿಮಾದ ಮೂಲ ಕಥೆಗೆ ಅನಗತ್ಯವೆನಿಸುತ್ತವೆ.

Jana Nayagan glimpse: ಸಿಎಂ ಲುಕ್ ಹೈಲೈಟ್! ಶುರುವಾಯ್ತು ಹೊಸ ಚರ್ಚೆ

ಶೇಕಡಾ 50ರಷ್ಟು ಕಥೆಯನ್ನು 'ಭಗವಂತ್ ಕೇಸರಿ'ಯಿಂದ ಪಡೆಯಲಾಗಿದ್ದರೂ, ಮಿಕ್ಕಂತೆ ಬಾಬಿ ಡಿಯೋಲ್ ಅವರ ಪಾತ್ರದ ಹಿನ್ನೆಲೆ, ಡ್ರೋನ್ ಅಟ್ಯಾಕ್, ರೋಬೋ ಫೈಟ್ ಮುಂತಾದವುಗಳನ್ನು ಹೊಸದಾಗಿ ಸೇರಿಸಲಾಗಿದೆ. ಪ್ರಥಮಾರ್ಧ 'ಭಗವಂತ್ ಕೇಸರಿ'ಯಂತೆ ಸಾಗಿದರೆ, ದ್ವಿತೀಯಾರ್ಧದಲ್ಲಿ ವಿಜಯ್ ಗುಣಗಾನ ಹಾಗೂ ರಾಜಕೀಯ ಮೈಲೇಜ್ ನೀಡುವಂತಹ ಸಂಭಾಷಣೆಗಳೇ ತುಂಬಿವೆ. ವಿಲನ್‌ಗಳನ್ನು ಗುರಿಯಾಗಿಸಿಕೊಂಡು ಹೇಳುವ ಡೈಲಾಗ್‌ಗಳು ಅಂತಿಮವಾಗಿ ಯಾರನ್ನು ಉದ್ದೇಶಿಸಿದ್ದವು ಎಂಬುದು ಪ್ರೇಕ್ಷಕರಿಗೆ ತಕ್ಷಣವೇ ಅರ್ಥವಾಗುತ್ತದೆ. 3 ಗಂಟೆಯ ಸುದೀರ್ಘ ಅವಧಿಯಲ್ಲಿ ಪ್ರೇಕ್ಷಕರನ್ನು ಎಂಗೇಜ್ ಮಾಡುವಂತಹ ದೃಶ್ಯಗಳು ತೀರಾ ಕಮ್ಮಿ.

ಈ ಚಿತ್ರದ ಪ್ಲಸ್‌ ಪಾಯಿಂಟ್‌ಗಳೇನು?

ಈ ಸಿನಿಮಾದ ಇಂಟರ್ವಲ್‌ ಬ್ಲಾಕ್‌ ಚೆನ್ನಾಗಿದೆ. ವಿಜಯ್‌ ಫ್ಯಾನ್ಸ್‌ ಸಖತ್‌ ಎಂಜಾಯ್‌ ಮಾಡುವುದಕ್ಕೆ ಏನು ಬೇಕೋ, ಅದೆಲ್ಲದವೂ ಆ ಒಂದೇ ಸೀನ್‌ನಲ್ಲಿ ಸಿಕ್ಕಿಬಿಡುತ್ತದೆ. ದಳಪತಿ ಕಚೇರಿ ಸಾಂಗ್‌ ಅಂತೂ ವಿಜಯ್‌ ಫ್ಯಾನ್ಸ್‌ಗೆ ಹಬ್ಬ. ಛಾಯಾಗ್ರಹಣ ಚೆನ್ನಾಗಿದೆ. ವಿಜಯ್‌ ಮ್ಯಾನರಿಸಂ ಖುಷಿ ನೀಡುತ್ತದೆ. ವಿಜಯ್ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಫ್ಲ್ಯಾಶ್‌ಬ್ಯಾಕ್ ದೃಶ್ಯವು ಚಿತ್ರದ ಅತ್ಯುತ್ತಮ ಭಾಗ ಎನ್ನಬಹುದು. ಜೊತೆಗೆ ಅನಿರುದ್ಧ್‌ ಅವರ ಸಂಗೀತ ಈ ಚಿತ್ರದ ಮತ್ತೊಂದು ಹೀರೋ. ಹಿನ್ನೆಲೆ ಸಂಗೀತದಲ್ಲಿ ಎಂದಿನ ಮೋಡಿ ಮುಂದುವರಿದಿದೆ.

Jana Nayagan Twitter Review: ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ಜನ ನಾಯಗನ್‌ಗೆ ಪ್ರೇಕ್ಷಕರ ಜಯಕಾರ

ಮೈನಸ್‌ ಪಾಯಿಂಟ್ಸ್ ಏನು?

ಯಾವ ಉದ್ದೇಶಕ್ಕಾಗಿ (ಮಕ್ಕಳ ಸುರಕ್ಷತೆ, ಮಹಿಳಾ ಸಬಲೀಕರಣ) ಭಗವಂತ್‌ ಕೇಸರಿ ಸಿನಿಮಾವನ್ನು ರಿಮೇಕ್‌ ಮಾಡಿದ್ದರೋ, ಆ ಉದ್ದೇಶ ಸರಿಯಾಗಿ ತಲುಪುವುದಿಲ್ಲ. ವಿಜಯ್‌ ಅವರ ರಾಜಕೀಯದ ರಸ್ತೆಗೆ ಉತ್ತಮ ಡಾಂಬರೀಕರಣ ಮಾಡಬೇಕೆಂಬ ಉದ್ದೇಶದಿಂದಾಗಿ ಮುಖ್ಯ ವಿಚಾರಗಳನ್ನೇ ನಿರ್ದೇಶಕರು ಮರೆತಂದಿದೆ. ಮೂಲ ಕಥೆಯಿಂದ ಕಡ ತಂದ ಭಾವನಾತ್ಮಕ ಸೀನ್‌ಗಳು, ಅದರಲ್ಲೂ ವಿಜಿ ಪಾತ್ರದ ಸುತ್ತಲಿನ ಕಥೆ ಹಾಗೂ ಗುಡ್ ಟಚ್-ಬ್ಯಾಡ್ ಟಚ್ ಕುರಿತ ಸೀನ್‌ ಪ್ರೇಕ್ಷಕರ ಮನ ಮುಟ್ಟುವಲ್ಲಿ ವಿಫಲವಾಗಿವೆ. ಇನ್ನು, ಇದರೊಳಗೆ ಮಿಕ್ಸ್‌ ಆಗಿರುವ ರಾಜಕಾರಣದ ಎಳೆಯಲ್ಲಿ ಹೊಸತೇನೂ ಇಲ್ಲ. ಬಾಬಿ ಡಿಯೋಲ್ ಅವರ ವಿಲನ್ ಪಾತ್ರಕ್ಕೆ ಸರಿಯಾದ ಲಾಜಿಕ್‌ ಇಲ್ಲ. ಆಫ್ರಿಕಾ ಮತ್ತು ಪಾಕಿಸ್ತಾನದ ಕಥೆಗಳು ಸಿನಿಮಾದ ಅವಧಿ ಹೆಚ್ಚಿದೆಯೇ ವಿನಃ ಬೇರೆನೂ ಲಾಭವಾಗಿಲ್ಲ. ಕಳಪೆ ವಿಎಫ್‌ಎಕ್ಸ್‌ ಪ್ರೇಕ್ಷಕರಿಗೆ ಕಿರಿಕಿರಿ ಮಾಡುವುದೇ ಹೆಚ್ಚು.

ಇನ್ನು, ಸಿನಿಮಾವು ಕ್ಲೈಮ್ಯಾಕ್ಸ್‌ನ ಹತ್ತಿರಬಂದಂತೆಲ್ಲಾ ವಿಎಫ್‌ಎಕ್ಸ್‌ ಮೂಲಕ ವಿಪರೀತ ಗುಂಡಿನ ಕಾಳಗ, ರೋಬೋ ಫೈಟ್‌, ಡ್ರೋನ್‌ ಅಟ್ಯಾಕ್‌, ಹೆಲಿಕಾಪ್ಟರ್‌ ದಾಳಿ.. ಎಲ್ಲವೂ ತೆರೆಮೇಲೆ ಏನು ನಡೆಯುತ್ತಿದೆ ಎಂಬ ಗೊಂದಲವನ್ನು ಉಂಟು ಮಾಡುತ್ತದೆ. ಕೊನೆಕೊನೆಗೆ ಇದು ಫೈಟಾ ಅಥವಾ ವಿಡಿಯೋ ಗೇಮಾ ಎಂಬ ಅನುಮಾನ ಪ್ರೇಕ್ಷಕರಿಗೆ ಬಂದರೆ ನಿರ್ದೇಶಕ ವಿನೋದ್‌ ಬೇಸರ ಮಾಡಿಕೊಳ್ಳಬಾರದು. ಜೊತೆಗೆ ಅಷ್ಟೊಂದು ಪ್ರಮಾಣದಲ್ಲಿ ಕೊಲೆಗಳು ಏಕೆ ನಡೆಯುತ್ತವೆ? ಆ ಪ್ರಮಾಣದ ರಕ್ತಪಾತದ ಅವಶ್ಯಕತೆ ಏನಿತ್ತು? ಅದನ್ನು ವಿನೋದ್‌ ಹೇಳಬೇಕು.

ವಿಜಯ್‌ಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಬಹುದಿತ್ತು!

ಇದು ವಿಜಯ್ ಅವರ ಕೊನೆಯ ಸಿನಿಮಾವಾಗಿದ್ದರಿಂದ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯಿತ್ತು. ಹೀಗಾಗಿ ನಿರ್ದೇಶಕರು ಇನ್ನಷ್ಟು ಉತ್ತಮವಾದ ಕಥೆಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. 'ಜನ ನಾಯಗನ್' ಚಿತ್ರದಲ್ಲಿ ವಿಜಯ್ ಪೋಷಕನಾಗಿ, ಪೊಲೀಸ್ ಅಧಿಕಾರಿಯಾಗಿ ತಮ್ಮ ಎಂದಿನ ಸ್ಟೈಲಿಶ್ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಪಂಚ್ ಸಂಭಾಷಣೆಗಳನ್ನು ಮಸ್ತಾಗಿಯೇ ಹೇಳಿದ್ದಾರೆ. ಉಳಿದಂತೆ ವಿಜಿ ಪಾತ್ರದಲ್ಲಿ ಮಮಿತಾ ಬೈಜು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಖತ್ ಆಗಿ ನಟಿಸಿದ್ದಾರೆ. ಪೂಜಾ ಹೆಗ್ಡೆ ಕೇವಲ ಗ್ಲಾಮರ್‌ಗಷ್ಟೇ ಸೀಮಿತ. ಬಾಬಿ ಡಿಯೋಲ್ ಅವರ ಪಾತ್ರದ ಕಳಪೆ ಬರವಣಿಗೆಯಿಂದಾಗಿ ಅವರ ಸಾಮರ್ಥ್ಯಕ್ಕೆ ತಕ್ಕ ಜಾಗ ಸಿಕ್ಕಿಲ್ಲ. ಗೌತಮ್ ಮೆನನ್, ಪ್ರಕಾಶ್ ರಾಜ್, ರೇವತಿ, ಪ್ರಿಯಾಮಿಣಿ, ನರೇನ್ ಮತ್ತು ನಾಸರ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಒಟ್ಟಾರೆಯಾಗಿ, ವಿಜಯ್ ಅವರ ರಾಜಕೀಯ ಹಾದಿಯನ್ನು ಓಲೈಸಲು ಮಾಡಿರುವ ಅತಿಯಾದ ಪ್ರಯತ್ನ ಸಿನಿಮಾದ ಆಶಯವನ್ನೇ ಹಾಳು ಮಾಡಿದೆ. ಅಭಿಮಾನಿಗಳಿಗೆ ವಿಜಯ್ ನಟನೆ ಮತ್ತು ಅನಿರುದ್ಧ್ ಸಂಗೀತ ಖುಷಿ ನೀಡಬಹುದು. ಮಿಕ್ಕಂತೆ ಇದು ವಿಜಯ್ ಅವರ ರಾಜಕೀಯ ಪಯಣಕ್ಕೆ ಮುನ್ನುಡಿ ಬರೆಯಲು ಮಾಡಿದ, ಅತಿಯಾದ ವೈಭವೀಕರಣದ ನೀರಸ ಮೆರವಣಿಗೆ!