ʻನಂಗ್ಯಾಕೆ ಮದುವೆಗೆ ಕರೀಲಿಲ್ಲʼ ಅಂತ ಕೋಪಗೊಂಡಿದ್ದ ಪುಟಾಣಿ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ರಶ್ಮಿಕಾ - ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ತಮ್ಮನ್ನು ಕರೆಯಲಿಲ್ಲ ಎಂದು ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿ 'ಲಕ್ಕಿ ತಲ್ಲಿ'ಯನ್ನು ಈ ಜೋಡಿ ಮನೆಗೆ ಆಹ್ವಾನಿಸಿದೆ. ತಮ್ಮ ನಿವಾಸಕ್ಕೆ ಲಕ್ಕಿ ತಲ್ಲಿ ಕುಟುಂಬವನ್ನು ಬರಮಾಡಿಕೊಂಡ ದಂಪತಿ, ಅವರಿಗೆ ಪ್ರೀತಿಯಿಂದ ಊಟ ಬಡಿಸಿ ಸತ್ಕರಿಸಿದ್ದಾರೆ. ಈ ಭೇಟಿಯ ಭಾವುಕ ಕ್ಷಣಗಳನ್ನು ಲಕ್ಕಿ ತಲ್ಲಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.
-
ಇತ್ತೀಚೆಗಷ್ಟೇ ಮದುವೆಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಗೆ 'ಲಕ್ಕಿ ತಲ್ಲಿ' ಎಂಬ ಓರ್ವ ಪುಟ್ಟ ಬಾಲಕಿ ಮುನಿಸಿಕೊಂಡಿದ್ದು, ಆ ಕುರಿತ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಆ ಫ್ಯಾನ್‌ಗೆ ಶೀಘ್ರದಲ್ಲೇ ಮನೆಗೆ ಕರೆಸಿಕೊಂಡು, ಮದುವೆ ಊಟ ಬಡಿಸುವುದಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಯ ನೀಡಿದ್ದರು. ಇದೀಗ ಅದು ನೆರವೇರಿದೆ.
ವಿರೋಶ್ ಮನೆಯಲ್ಲಿ ಲಕ್ಕಿ ತಲ್ಲಿಗೆ ಊಟ
ಹೌದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಆ ಪುಟ್ಟ ಬಾಲಕಿಯನ್ನು ತಮ್ಮ ಮನೆಗೆ ಕರೆಸಿಕೊಂಡು ಊಟ ಬಡಿಸಿದ್ದಾರೆ. ಈ ಬಗ್ಗೆ ಲಕ್ಕಿ ತಲ್ಲಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಅನ್ನು ಹಂಚಿಕೊಂಡಿದ್ದಾಳೆ ಮತ್ತು ವಿರೋಶ್ ಕಪಲ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ. "ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದು ನನಗೂ ಮತ್ತು ನನ್ನ ಕುಟುಂಬಕ್ಕೂ ನಿಜಕ್ಕೂ ಅದ್ಭುತ ಹಾಗೂ ಮರೆಯಲಾಗದ ಕ್ಷಣ" ಎಂದು ಲಕ್ಕಿ ತಲ್ಲಿ ಹೇಳಿಕೊಂಡಿದ್ದಾಳೆ.
Anand Deverakonda: ರಶ್ಮಿಕಾ-ವಿಜಯ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ
ನಮಗೆ ನಮ್ಮವರೊಂದಿಗೇ ಇದ್ದೇವೆ ಎಂಬ ಭಾವ ಮೂಡಿತು
"ನಾವು ಅಲ್ಲಿಗೆ ತಲುಪಿದ ಕ್ಷಣದಿಂದಲೇ ಅವರು ನಮ್ಮನ್ನು ಎಷ್ಟೊಂದು ಪ್ರೀತಿ ಮತ್ತು ಗೌರವದಿಂದ ಬರಮಾಡಿಕೊಂಡರೆಂದರೆ, ನಮಗೆ ನಮ್ಮದೇ ಮನೆಯಲ್ಲಿ ಇದ್ದಂತಹ ಅನುಭವವಾಯಿತು. ಅಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಭೇಟಿ ಮಾಡಿದ್ದು ಕೂಡ ಅಷ್ಟೇ ಸಂತೋಷ ನೀಡಿತು. ಅವರ ಆ ಮುಗುಳ್ನಗೆ ಮತ್ತು ಸ್ನೇಹಪರ ಸ್ವಭಾವ ಈ ಭೇಟಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಜೊತೆಗೆ ವಿಜಯ್ ದೇವರಕೊಂಡ ಅವರ ಕುಟುಂಬದವರೊಂದಿಗೆ ಕಳೆದ ಸಮಯ ಈ ಭೇಟಿಯನ್ನು ಬಹಳ ವಿಶೇಷವಾಗಿಸಿತು. ಪ್ರತಿಯೊಬ್ಬರೂ ತುಂಬಾ ಸರಳ ಹಾಗೂ ಪ್ರೀತಿಯ ಸ್ವಭಾವದವರಾಗಿದ್ದು, ನಮಗೆ ನಮ್ಮವರೊಂದಿಗೇ ಇದ್ದೇವೆ ಎನ್ನುವ ಭಾವನೆ ಮೂಡಿಸಿದರು" ಎಂದು ಲಕ್ಕಿ ತಲ್ಲಿ ಬರೆದುಕೊಂಡಿದ್ದಾಳೆ.
ಈ ಸಮಯ ನಮ್ಮ ಹೃದಯಕ್ಕೆ ಸದಾ ಹತ್ತಿರ
"ನಾವೆಲ್ಲರೂ ಸುಂದರವಾದ ಮಾತುಕತೆ, ನಗು ಮತ್ತು ಸಂತೋಷದ ಕ್ಷಣಗಳನ್ನು ಹಂಚಿಕೊಂಡೆವು. ಇವುಗಳನ್ನು ನಾವು ಎಂದಿಗೂ ನೆನಪಿಸಿಕೊಳ್ಳುತ್ತೇವೆ. ಅಲ್ಲಿನ ಸಂಪೂರ್ಣ ವಾತಾವರಣವು ಧನಾತ್ಮಕತೆ ಮತ್ತು ಪ್ರೀತಿಯಿಂದ ತುಂಬಿತ್ತು, ಇದು ಮನಸ್ಸಿಗೆ ತುಂಬಾ ಹತ್ತಿರವಾದ ಅನುಭವ. ಒಟ್ಟಾರೆಯಾಗಿ, ಇದು ನನ್ನ ಕುಟುಂಬ ಮತ್ತು ನಾನು ಎಂದೆಂದಿಗೂ ಮೆಲುಕು ಹಾಕುವಂತಹ ಒಂದು ಅದ್ಭುತ ದಿನ. ಪ್ರತಿಭಾವಂತರಷ್ಟೇ ಅಲ್ಲದೆ, ಅತೀ ಸರಳ ವ್ಯಕ್ತಿತ್ವ ಹೊಂದಿರುವ ಇಂತಹ ಅದ್ಭುತ ವ್ಯಕ್ತಿಗಳೊಂದಿಗೆ ಕಳೆದ ಈ ಸಮಯ ನಮ್ಮ ಹೃದಯಕ್ಕೆ ಸದಾ ಹತ್ತಿರವಾಗಿರುತ್ತದೆ" ಎಂದು ಲಕ್ಕಿ ತಲ್ಲಿ ಹೇಳಿದ್ದಾಳೆ.
ಲಕ್ಕಿ ತಲ್ಲಿ ಹಂಚಿಕೊಂಡಿರುವ ವಿಡಿಯೋ
ಲಕ್ಕಿ ತಲ್ಲಿ ಅಂದು ಹೇಳಿದ್ದೇನು?
ಒಂದು ರೀಲ್ಸ್ ಹಂಚಿಕೊಂಡಿದ್ದ ಲಕ್ಕಿ ತಲ್ಲಿ, "ವಿಜಯ್ ದೇವರಕೊಂಡ - ರಶ್ಮಿಕಾ ಮದುವೆಯಾಗಿದೆ. ಮದುವೆಗೆ ನಮ್ಮನ್ನೂ ಕರೆಯಬಹುದಿತ್ತು ಅಲ್ವಾ? ಎಲ್ಲಾ ಕಡೆ ಲಡ್ಡು ಹಂಚುತ್ತಿದ್ದಾರೆ, ಅನ್ನದಾನ ಮಾಡುತ್ತಿದ್ದಾರೆ. ನಾವು ಕೂಡ ಅಭಿಮಾನಿಗಳೇ ಅಲ್ವಾ? ನನ್ನನ್ನು ಮದುವೆಗೆ ಕರೆದರೆ ಏನಾಗುತ್ತಿತ್ತು? ಈ ವಿಡಿಯೋವನ್ನು ಅವರಿಗೆ ಶೇರ್ ಮಾಡಿ" ಎಂದು ವಿಡಿಯೋದಲ್ಲಿ ಲಕ್ಕಿ ತಲ್ಲಿ ಹೇಳಿದ್ದಳು.