‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕ ಬೆನ್ನಲ್ಲೇ ಲೀಕ್ ಆಯ್ತು ರಿಲೀಸ್ ಡೇಟ್; ಸಿಎಂ ವಿಜಯ್ ಕೊನೇ ಸಿನಿಮಾ ಯಾವಾಗ ಬರತ್ತೆ?
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಿಂದ 12 ಬದಲಾವಣೆಗಳೊಂದಿಗೆ ‘ಎ’ ಪ್ರಮಾಣಪತ್ರ ಪಡೆದ ಬೆನ್ನಲ್ಲೇ, ಯುಕೆ ವಿತರಕರಿಂದ ಜುಲೈ 24 ರ ಬಿಡುಗಡೆ ದಿನಾಂಕ ಲೀಕ್ ಆಗಿದೆ. ಟಿವಿಕೆ ಪಕ್ಷದ ಉಲ್ಲೇಖ ಹಾಗೂ ರಾಷ್ಟ್ರಧ್ವಜದ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದು, ಸದ್ಯ ಎಲ್ಲರ ಗಮನ ರಿಲೀಸ್ ಡೇಟ್ ಮೇಲಿದೆ.
-
ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ‘ಜನ ನಾಯಗನ್’ ಬಿಡುಗಡೆ ದಿನಾಂಕ ಕೊನೆಗೂ ಲೀಕ್ ಆಗಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದುಕೊಂಡಿದ್ದ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಯುಕೆ ವಿತರಕರು ಬಹಿರಂಗಪಡಿಸಿದ್ದಾರೆ.
ಯುಕೆ ವಿತರಕರಿಂದ ಮಾಹಿತಿ ಲೀಕ್
‘ಜನ ನಾಯಗನ್’ ಸಿನಿಮಾವನ್ನು ಜುಲೈ 24ರಂದು ಯುನೈಟೆಡ್ ಕಿಂಗ್‌ಡಮ್‌ನ (UK) ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅಲ್ಲಿನ ಪ್ರಸಿದ್ಧ ವಿತರಣಾ ಸಂಸ್ಥೆಯಾದ ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಈ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದು, ಈಗಾಗಲೇ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ ಎಂದು ತಿಳಿಸಿದೆ. ಯುಕೆ ಚಿತ್ರಮಂದಿರಗಳಲ್ಲಿ ಯಾವುದೇ ಕತ್ತರಿ ಇಲ್ಲದ ‘15-ರೇಟೆಡ್’ (Uncut 15-rated) ಅಡಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ದಳಪತಿಯ ಮಾಸ್ ಆಕ್ಷನ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ಸೆನ್ಸಾರ್ ಮಂಡಳಿ ಸೂಚಿಸಿದ್ದ 12 ಬದಲಾವಣೆಗಳು
ಇತ್ತೀಚೆಗೆ ಸಿಎಂ ವಿಜಯ್ ಅವರು ‘ಜನ ನಾಯಗನ್’ ಚಿತ್ರದ ಸೆನ್ಸಾರ್ ಆಗಿರುವುದನ್ನು ಖಚಿತಪಡಿಸಿ ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಒಟ್ಟು 12 ಬದಲಾವಣೆಗಳನ್ನು ಮಾಡಲು ಸೂಚಿಸಿತ್ತು ಎಂಬ ಮಾಹಿತಿ ಸಿಕ್ಕಿದೆ. ರಾಷ್ಟ್ರಧ್ವಜ ಕೆಳಗೆ ಬೀಳುವ ದೃಶ್ಯಗಳು, ವಿಜಯ್ ಅವರ ರಾಜಕೀಯ ಪಕ್ಷವಾದ ‘ಟಿವಿಕೆ’ ಬಗೆಗಿನ ಉಲ್ಲೇಖಗಳು, ಕೆಲವು ಅವಾಚ್ಯ ಶಬ್ದಗಳು ಹಾಗೂ ಧಾರ್ಮಿಕ ಪದಗಳನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ ಸೂಚಿಸಿತ್ತು. ಈ ಎಲ್ಲಾ ಬದಲಾವಣೆಗಳ ಬಳಿಕವೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.
ಜನ ನಾಯಗನ್ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?
ಈ ಹೈ-ಬಜೆಟ್ ಚಿತ್ರವು ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಮತ್ತು ಶ್ರೀಲೀಲಾ ನಟಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ‘ಭಗವಂತ್ ಕೇಸರಿ’ಯ ಅಧಿಕೃತ ರಿಮೇಕ್ ಆಗಿದೆ. ಚಿತ್ರದಲ್ಲಿ ಮಮಿತಾ ಬೈಜು, ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ದೊಡ್ಡ ತಾರಾಗಣವಿದೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಿದ್ದು, ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಯುಕೆ ವಿತರಕರ ಟ್ವೀಟ್
THE HONOURABLE CHIEF MINISTER OF TAMIL NADU. C JOSEPH VIJAY. #JanaNayagan in UK cinemas July 24 — uncut, 15-rated. All the action, all the mass, all the Thalapathy craze, exactly as it was meant to be seen. One last time 🔥🔥🔥@actorvijay @KvnProductions @PharsFilm… pic.twitter.com/c6YCX6mvDJ
— Ahimsa Entertainment (@ahimsafilms) July 12, 2026
ಚಿತ್ರತಂಡವು ಭಾರತದಲ್ಲಿ ಬಿಡುಗಡೆಯ ಅಧಿಕೃತ ದಿನಾಂಕವನ್ನು ಇನ್ನೂ ಪ್ರಕಟಿಸದೇ ಇದ್ದರೂ, ಯುಕೆಯ ಲೀಕ್ ಮಾಹಿತಿಯ ಪ್ರಕಾರ ಜುಲೈ 24ರಂದೇ ಜಾಗತಿಕವಾಗಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಧುಮುಕಿರುವ ಮುಖ್ಯಮಂತ್ರಿ ವಿಜಯ್ ಅವರನ್ನು ಕೊನೆಯ ಬಾರಿಗೆ ಬೆಳ್ಳಿಪರದೆ ಮೇಲೆ ಸಂಭ್ರಮಿಸಲು ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.