ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್ ಕೇಸ್; ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು!
Vijayalakshmi Abusive Comment Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ನಾಗರಾಜ್ ತಳವಾರ ಮತ್ತು ಧಾರವಾಡದ ಪ್ರಶಾಂತ್ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 4ಕ್ಕೇರಿದೆ.
-
ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರಿಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಈ ಪ್ರಕರಣದಲ್ಲಿ ಅರೆಸ್ಟ್ ಆದವರ ಸಂಖ್ಯೆಯು 4ಕ್ಕೇರಿದೆ.
ಈಗ ಅರೆಸ್ಟ್ ಆದವರು ಯಾರು?
ಸದ್ಯ ಅರೆಸ್ಟ್ ಆಗಿರುವವರನ್ನು ನಾಗರಾಜ್ ತಳವಾರ, ಪ್ರಶಾಂತ್ ತಳವಾರ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬುವವರು ವೃತ್ತಿಯಲ್ಲಿ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಆಗಿದ್ದು, ಪ್ರಶಾಂತ್ ತಳವಾರ ಅವರು ಧಾರವಾಡದಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರಿಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಇದೀಗ ಬಂಧಿಸಿದ್ದಾರೆ. ಈ ಕೇಸ್‌ನಲ್ಲಿ ಅರೆಸ್ಟ್ ಆದವರ ಸಂಖ್ಯೆಯು 4ಕ್ಕೇರಿದೆ.
Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್, ಇಬ್ಬರ ಬಂಧನ
ಈ ಹಿಂದೆ ಇಬ್ಬರನ್ನು ಬಂಧಿಸಿದ್ದ ಪೊಲೀಸರು
ಬೆಂಗಳೂರಿನ ಚಿಕ್ಕಬಾಣಾವರ ಮೂಲದ ಆಟೋ ಚಾಲಕ ಚಂದ್ರು ಮತ್ತು ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಅವರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ. 15 ಇನ್‌ಸ್ಟಾಗ್ರಾಂ ಐಡಿಗಳು ಮತ್ತು ಕೆಟ್ಟ ಕಾಮೆಂಟ್ ಹಾಕಿದ್ದ 150ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್ ಫೋಟೋ ಸಮೇತ ವಿಜಯಲಕ್ಷ್ಮಿ ದೂರು ನೀಡಿದ್ದರು. ತನಿಖೆ ಕೈಗೊಂಡಿರುವ ಸೈಬರ್ ಪೊಲೀಸರು ಸದ್ಯ 15 ಐಡಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ.
ತನಿಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವಿಜಯಲಕ್ಷ್ಮಿ
"ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗಿನ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆಶ್ಚರ್ಯವೆಂದರೆ, ನಾನು ನೀಡಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ನೀಡಿದ ದೂರಿಗೆ ಕೇವಲ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ನನ್ನ ದೂರು ಅಷ್ಟು ಮುಖ್ಯವಾದುದಲ್ಲವೇ ಅಥವಾ ಅದಕ್ಕೆ ಮಾನ್ಯತೆ ಇಲ್ಲವೇ ಎಂದು ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತಿದೆ" ಎಂದು ವಿಜಯಲಕ್ಷ್ಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
"ಇಂತಹ ನಡವಳಿಕೆಯನ್ನು ಬೆಂಬಲಿಸುವವರಿಗೆ ಅಥವಾ ರಕ್ಷಿಸುವವರಿಗೆ ನಾನು ಹೇಳುವುದಿಷ್ಟೇ, ಕುರುಡಾಗಿ ಇಂತಹ ಕೃತ್ಯಗಳನ್ನು ಬೆಂಬಲಿಸುವ ಬದಲು, ಆ ಶಕ್ತಿಯನ್ನು ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಬಳಸಿ. ನಾನು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ ಮತ್ತು ಇದನ್ನು ನಾನು ಇಲ್ಲಿಗೇ ಸುಮ್ಮನೆ ಬಿಡುವುದಿಲ್ಲ" ಎಂದು ವಿಜಯಲಕ್ಷ್ಮಿ ಹೇಳಿದ್ದರು.