ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie-War 2: ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ-ʼವಾರ್‌ 2ʼ ಕದನ; ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಹೇಗಿದೆ?

ಬಹುನಿರೀಕ್ಷಿತ ಬಾಲಿವುಡ್‌ನ ʼವಾರ್‌ 2ʼ ಮತ್ತು ಕಾಲಿವುಡ್‌ನ 'ಕೂಲಿ' ಚಿತ್ರ ಆಗಸ್ಟ್‌ 14ರಂದು ತೆರೆ ಕಾಣಲಿದ್ದು, ಅಡ್ವಾನ್ಸ್‌ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದೆ. ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ನಲ್ಲಿ ರಜನಿಕಾಂತ್‌ ನಟನೆಯ ʼಕೂಲಿʼ ಮುಂದಿದೆ. ಅಂತಿಮವಾಗಿ ಗೆಲುವು ಯಾರ ಪಾಲಗಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ-ʼವಾರ್‌ 2ʼ ಕದನ

Ramesh B Ramesh B Aug 13, 2025 3:48 PM

ಚೆನ್ನೈ: ಈ ವರ್ಷದ ಅತೀ ದೊಡ್ಡ ಬಾಕ್ಸ್‌ ಆಫೀಸ್‌ ಕ್ಲ್ಯಾಶ್‌ಗೆ ವೇದಿಕೆ ಸಜ್ಜಾಗಿದೆ. ಬಹುನಿರೀಕ್ಷಿತ ಬಾಲಿವುಡ್‌ನ ʼವಾರ್‌ 2ʼ (War 2) ಮತ್ತು ಕಾಲಿವುಡ್‌ನ 'ಕೂಲಿ' (Coolie) ಚಿತ್ರ ಆಗಸ್ಟ್‌ 14ರಂದು ತೆರೆ ಕಾಣಲಿದ್ದು, ಅಡ್ವಾನ್ಸ್‌ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದೆ. ಆ ಮೂಲಕ ಪ್ರೀ ರಿಲೀಸ್‌ ಕಲೆಕ್ಷನ್‌ನಲ್ಲಿಯೂ ತೀವ್ರ ಪೈಪೋಟಿ ಕಂಡು ಬಂದಿದೆ. 'ವಾರ್‌ 2' ಚಿತ್ರದಲ್ಲಿ ಹೃತಿಕ್‌ ರೋಷನ್‌-ಜೂ. ಎನ್‌ಟಿಆರ್‌ ನಟಿಸಿದ್ದು, 'ಕೂಲಿ' ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ 171ನೇ ಸಿನಿಮಾ ಎನ್ನುವುದು ವಿಶೇಷ. ಇದೇ ಕಾರಣಕ್ಕೆ ಸಿನಿ ರಸಿಕರಲ್ಲಿ ಕುತೂಹಲ ಕೆರಳಿದ್ದು, ಮೊದಲ ದಿನವೇ ಕೋಟಿ ಕೋಟಿ ಬಾಚುವ ಸಾಧ್ಯತೆ ಇದೆ. ಈ ಮಧ್ಯೆ ಎರಡೂ ಚಿತ್ರಗಳ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಲೆಕ್ಕಚಾರ ಆರಂಭವಾಗಿದೆ.

ಸ್ವಾತಂತ್ರ್ಯೋತ್ಸವ, ಲಾಂಗ್‌ ವೀಕೆಂಡ್‌ ಮೇಲೆ ಕಣ್ಣಿಟ್ಟಿರುವ ನಿರ್ಮಾಪಕರು ಚಿತ್ರ ರಿಲೀಸ್‌ಗೆ ಇದೇ ದಿನವನ್ನು ಆಯ್ದುಕೊಂಡಿದ್ದಾರೆ. ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ದಕ್ಷಿಣ ಭಾರತ ಮತ್ತು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ ಪಾರಮ್ಯ ಮೆರೆದರೆ, ಉತ್ತರ ಭಾರತ, ಹಿಂದಿ ಬೆಲ್ಟ್‌ನಲ್ಲಿ ʼವಾರ್‌ 2ʼ ಮುಂದಿದೆ.



ಈ ಸುದ್ದಿಯನ್ನೂ ಓದಿ: Coolie Movie: ರಜನಿಕಾಂತ್‌ ಅಭಿನಯದ ʼಕೂಲಿʼ ಚಿತ್ರ ನೋಡಲು ಸುಳ್ಳು ಸಿಕ್‌ ಲೀವ್‌ ಹಾಕಬೇಕಿಲ್ಲ; ಕಂಪೆನಿಯೇ ರಜೆ ಜತೆ ಟಿಕೆಟ್ ಕೂಡ ನೀಡುತ್ತಿದೆ!

ʼಕೂಲಿʼ ಅಡ್ವಾನ್ಸ್‌ ಬುಕ್ಕಿಂಗ್‌ ಹೇಗಿದೆ?

ಆಗಸ್ಟ್‌ 13ರ ವೇಳೆಗೆ ಭಾರತದಲ್ಲಿ ʼಕೂಲಿʼ ಚಿತ್ರದ 9 ಲಕ್ಷ ಟಿಕೆಟ್‌ ಮಾರಾಟವಾಗಿದ್ದು, 20 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಆ ಮೂಲಕ 2025ರಲ್ಲಿ ಬಿಡುಗಡೆ ಮೊದಲು ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಇನ್ನು ತಮಿಳುನಾಡು ಒಂದರಲ್ಲೇ 12 ಕೋಟಿ ರೂ. ಗಳಿಸಿದ್ದು, ಕೇರಳ ಮತ್ತು ಕರ್ನಾಟಕದಲ್ಲಿ ಅನುಕ್ರಮವಾಗಿ 5.35 ಕೋಟಿ ರೂ. ಮತ್ತು 4.15 ಕೋಟಿ ರೂ. ಬಾಚಿಕೊಂಡಿದೆ. ಆದರೆ ಉತ್ತರ ಭಾರತದಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡು ಬಂದಿದೆ. ಇಲ್ಲಿ ಸುಮಾರು 17,500 ಟಿಕೆಟ್‌ ಸೇಲ್‌ ಆಗಿದ್ದು, 4–4.5 ಕೋಟಿ ರೂ. ಗಳಿಸಿದೆ.

ʼವಾರ್‌ 2ʼ ಕಥೆ ಏನು?

ದೇಶಾದ್ಯಂತ ʼವಾರ್‌ 2ʼ ಚಿತ್ರದ 1.29 ಲಕ್ಷ ಟಿಕೆಟ್‌ ಮಾರಾಟವಾಗಿದ್ದು, 17.29 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಈ ಪೈಕಿ ಹಿಂದಿ ಮಾತನಾಡುವ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿದೆ. ರಿಲೀಸ್‌ಗೆ ಇನ್ನೂ 1 ದಿನ ಬಾಕಿದ್ದು, ಮೊದಲ ದಿನದ ಕಲೆಕ್ಷನ್‌ 30–35 ಕೋಟಿ ರೂ. ತಲುಪುವ ಸಾಧ್ಯತೆ ಇದೆ.

ಇತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ʼಕೂಲಿʼ ದಾಖಲೆ ನಿರ್ಮಿಸಿದ್ದು, ಪ್ರೀ-ಸೇಲ್‌ ಮೂಲಕವೇ 27 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಇನ್ನು ಉತ್ತರ ಅಮೆರಿಕದಲ್ಲಿ 2 ಮಿಲಿಯನ್‌ ಡಾಲರ್‌ ಗಳಿಸಿದ್ದು, ಕಾಲಿವುಡ್‌ನಲ್ಲಿ ಇತಿಹಾಸ ಬರೆದಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಅಡ್ವಾನ್ಸ್‌ ಬುಕ್ಕಿಂಗ್‌ ಮೂಲಕ 50–60 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ರಿಲೀಸ್‌ ಮೊದಲೇ 100 ಕೋಟಿ ರೂ. ಕ್ಲಬ್‌ ಸೇರುವ ಎಲ್ಲ ಸಾಧ್ಯತೆ ಇದೆ.

ಗೆಲುವು ಯಾರಿಗೆ?

ಸದ್ಯ ಎಲ್ಲರ ಗಮನ ಈ ಎರಡೂ ಚಿತ್ರಗಳ ಮೇಲಿದ್ದು, ಬಾಕ್ಸ್‌ ಆಫೀಸ್‌ ಕದನದಲ್ಲಿ ಗೆಲುವು ಯಾರ ಪಾಲಾಗಲಿದೆ ಎನ್ನುವ ಕುತೂಹಲ ಮೂಡಿದೆ. ರಜನಿಕಾಂತ್‌-ಹೃತಿಕ್‌ ರೋಷನ್‌, ಜೂ. ಎನ್‌ಟಿಆರ್‌ ಪೈಕಿ ಯಾರು ಪ್ರಾಬಲ್ಯ ಸಾಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.