ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧ್ಯಪ್ರಾಚ್ಯದಲ್ಲಿ ಸಂಘರ್ಷದಲ್ಲಿ 10 ನಾವಿಕರು ಸೇರಿ 16 ಭಾರತೀಯರು ಸಾವು: ಸಂಸತ್ತಿಗೆ ಮಾಹಿತಿ ನೀಡಿದ ಸಚಿವ ಕೀರ್ತಿ ವರ್ಧನ್ ಸಿಂಗ್

ಕಳೆದ ಫೆಬ್ರವರಿಯಲ್ಲಿ ಪ್ರಾರಂಭವಾಗಿರುವ ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದಲ್ಲಿ ಈವರೆಗೆ ಒಟ್ಟು 16 ಭಾರತೀಯರು ಸಾವನ್ನಪ್ಪಿದ್ದಾರೆ. ಇದರಲ್ಲಿ 10 ನಾವಿಕರು ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದರು.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: 16 ಭಾರತೀಯರು ಸಾವು

ಸಂಗ್ರಹ ಚಿತ್ರ -

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East conflict) ಆರಂಭವಾದ ಬಳಿಕ ಒಟ್ಟು 16 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ (Minister Kirti Vardhan Singh) ಅವರು ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದರು. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಫೆಬ್ರವರಿಯ 28ರಂದು ಪ್ರಾರಂಭವಾದ ಇರಾನ್ ಮತ್ತು ಯುಎಸ್ (Iran US War) ನಡುವಿನ ಸಂಘರ್ಷದಲ್ಲಿ ಈವರೆಗೆ 10 ನಾವಿಕರು ಸೇರಿ ಒಟ್ಟು 16 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಮಧ್ಯಪ್ರಾಚ್ಯ ಭಾಗದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮುಂದುವರಿದಿದೆ. ಇದರಿಂದ ಭಾರತೀಯ ನಾವಿಕರು, ಪ್ರಜೆಗಳು ಕೂಡ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿದ್ದು, ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲೂ ಪಾಸ್‌; ಮತ್ತೊಂದು ಸೆಲ್ಫಿ ವಿಡಿಯೊ ಹಂಚಿಕೊಂಡ ನರೇಂದ್ರ ಮೋದಿ

ಈ ವರ್ಷದ ಆರಂಭದಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಮೇಲೆ 10 ನಾವಿಕರು ಸೇರಿದಂತೆ ಒಟ್ಟು 16 ಮಂದಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದಲ್ಲಿ ಒಬ್ಬರು, ಕುವೈತ್‌ನಲ್ಲಿ ಇಬ್ಬರು, ಒಮಾನ್‌ನಲ್ಲಿ ಎಂಟು, ಇರಾಕ್‌ನಲ್ಲಿ ಒಬ್ಬರು ಮತ್ತು ಯುಎಇಯಲ್ಲಿ ನಾಲ್ಕು ಮಂದಿ ಸೇರಿದಂತೆ ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 75 ಭಾರತೀಯರು ಗಾಯಗೊಂಡಿದ್ದು, ಇದರಲ್ಲಿ ಯುಎಇಯಲ್ಲಿ 32, ಒಮಾನ್‌ನಲ್ಲಿ 24, ಕತಾರ್‌ನಲ್ಲಿ ನಾಲ್ಕು, ಕುವೈತ್‌ನಲ್ಲಿ 13, ಸೌದಿ ಅರೇಬಿಯಾದಲ್ಲಿ ಒಬ್ಬರು ಮತ್ತು ಇಸ್ರೇಲ್‌ನಲ್ಲಿ ಒಬ್ಬರು ಸೇರಿದ್ದಾರೆ ಎಂದು ಸಂಸತ್ತಿಗೆ ಸಿಂಗ್ ತಿಳಿಸಿದರು.

ಸಂಘರ್ಷದ ಹೊರತಾಗಿ ಕತಾರ್‌ನ ರಾಸ್ ಲಫಾನ್ ಅನಿಲ ಸೌಲಭ್ಯದಲ್ಲಿ ನಡೆದ ಅಪಘಾತದಲ್ಲಿ 12 ಮಂದಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ. ಎರಡು ರಾಷ್ಟ್ರಗಳ ಸರ್ಕಾರಗಳ ಸಹಯೋಗದೊಂದಿಗೆ ಭಾರತೀಯ ಪ್ರಜೆಗಳ ಮೃತ ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲು ಭಾರತಕ್ಕೆ ಬೇಗನೆ ತಲುಪಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗಿದೆ ಎಂದರು.

ಅಪಘಾತದಲ್ಲಿ ಗಾಯಗೊಂಡಿರುವ ಭಾರತೀಯರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿ ಮತ್ತು ದೂತಾವಾಸಗಳ ಸ್ಥಳೀಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳೊಂದಿಗೆ ನಿರಂತರ ಸಮನ್ವಯ ನಡೆಸಿ ಗಾಯಾಳುಗಳು ಭಾರತಕ್ಕೆ ಸುರಕ್ಷಿತವಾಗಿ ಮರಳುವುದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಿದವು ಎಂದು ಹೇಳಿದರು.

ಯುದ್ಧ ವಲಯದಲ್ಲಿ ಉಂಟಾಗಿರುವ ದುರಂತಗಳಲ್ಲಿ ಮೃತಪಟ್ಟವರಿಗೆ DGMA ಕಲ್ಯಾಣ ಯೋಜನೆ (ನಾವಿಕರ ಕಲ್ಯಾಣ ನಿಧಿ ಸೊಸೈಟಿ - SWFS) ಅಡಿಯಲ್ಲಿ, 10 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಪೀಡಿತ ನಾವಿಕರ ಹತ್ತಿರದ ಸಂಬಂಧಿಕರಿಗೆ ತ್ವರಿತವಾಗಿ ವಿತರಿಸಲಾಗುವುದು ಎಂದರು.

ಕಳೆದ ಫೆಬ್ರವರಿ ತಿಂಗಳಾಂತ್ಯಕ್ಕೆ ಸಂಘರ್ಷ ಪ್ರಾರಂಭವಾದ ಮೇಲೆ 2,557 ಭಾರತೀಯರು ಸಂಘರ್ಷ ಪೀಡಿತ ಪ್ರದೇಶದಿಂದ ಸ್ಥಳಾಂತರಗೊಂಡಿದ್ದಾರೆ. ಒಟ್ಟು ಮಧ್ಯಪ್ರಾಚ್ಯ ಭಾಗದಲ್ಲಿ 7,000 ಭಾರತೀಯರು ಸುರಕ್ಷಿತ ಪ್ರದೇಶಗಳಿಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ. ಇರಾನ್‌ನಲ್ಲಿ ಪರಿಸ್ಥಿತಿ ಸುಧಾರಣೆಯಾಗುವವರೆಗೂ ಭಾರತೀಯರಿಗೆ ತಮ್ಮ ಪ್ರಯಾಣ ಯೋಜನೆಯನ್ನು ಮುಂದೂಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ವಿದೇಶದಲ್ಲಿ ವಾಸಿಸುವ ಭಾರತೀಯ ಪ್ರಜೆಗಳ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ದುಬೈನಲ್ಲಿರುವ ಇರಾನಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 130 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು, ಸ್ಥಳೀಯ ಸರ್ಕಾರವು ಆಸ್ಪತ್ರೆಯನ್ನು ಮುಚ್ಚಲು ತೆಗೆದುಕೊಂಡ ನಿರ್ಧಾರದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ತಲುಪಿಸಲಾಗಿದೆ ಎಂದರು.

ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್‌ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ

ಕಳೆದ ಜೂನ್ 1ರಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅರಿಜೋನಾ ರಾಜ್ಯದಲ್ಲಿ ಯುಎಸ್ ಬಾರ್ಡರ್ ಪೆಟ್ರೋಲ್ ಏಜೆಂಟ್‌ಗಳು 'ಆಪರೇಷನ್ ಚೆಕ್‌ಮೇಟ್' ಸಮಯದಲ್ಲಿ 52 ವ್ಯಕ್ತಿಗಳನ್ನು ಅಕ್ರಮವಾಗಿ ಅಮೆರಿಕದಲ್ಲಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದರು. ಅವರಲ್ಲಿ 36 ಜನರು ಸೆಮಿ ಟ್ರಕ್‌ಗಳನ್ನು ಚಾಲನೆ ಮಾಡುತ್ತಿದ್ದರು. ಇವರಲ್ಲಿ 30 ಮಂದಿ ಭಾರತೀಯರಾಗಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅವರನ್ನು ಗಡೀಪಾರು ಮಾಡುವುದಾಗಿ ಯುಎಸ್ ಹೇಳಿದೆ. ಆದರೂ ಮಾಹಿತಿ ಸಿಕ್ಕಿದ ತಕ್ಷಣವೇ ಸಚಿವಾಲಯವು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಈ ಕುರಿತು ಮಾತುಕತೆ ನಡೆಸಿದೆ. ಸಂಬಂಧಪಟ್ಟ ವ್ಯಕ್ತಿಗಳ ಗುರುತು ಮತ್ತು ವಿವರಗಳ ಕುರಿತು ಅಮೆರಿಕ ಸಿಬಿಪಿಯಿಂದ ದೃಢೀಕರಣಕ್ಕಾಗಿ ಭಾರತ ಸರ್ಕಾರ ಕಾಯುತ್ತಿದೆ ಎಂದು ತಿಳಿಸಿದರು.