ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆಕ್ರೋಶ; ಆಗಸ್ಟ್ 13ಕ್ಕೆ ಕರ್ನಾಟಕ ಬಂದ್
Karnataka Bandh: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಕ್ರಮದ ವಿರುದ್ಧ ಕರ್ನಾಟಕ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ. ಹಲವು ಸಂಘಟನೆಗಳು ನಡೆಸಿದ ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಕ್ರಮದ ವಿರುದ್ಧ ಕರ್ನಾಟಕ ಬಂದ್ (Karnataka Bandh) ಮಾಡಲು ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ. ಹಲವು ಸಂಘಟನೆಗಳು ನಡೆಸಿದ ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ( Vatal Nagaraj) ಕರೆ ನೀಡಿದ್ದಾರೆ. ಸಭೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಸಾರಾ ಗೋವಿಂದು, ಕೆಆರ್ ಕುಮಾರ್, ರೈತ ಪರ ಸಂಘಟನೆಗಳು ಭಾಗಿಯಾಗಿದ್ದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹೋರಾಟಗಾರರು ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.
ಜುಲೈ 28 ರಂದು CWRC ಸಭೆಯಲ್ಲಿ ಕರ್ನಾಟಕದಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಆದೇಶ ಹೊರಡಿಸಿತ್ತು, ಅಂದರೆ ಇದು ಸುಮಾರು 4 ಟಿಎಂಸಿ ನೀರಿಗೆ ಸಮವಾಗಿದೆ. ಆದೇಶದ ಪ್ರಕಾರ, ಜುಲೈ 29 ರಿಂದ ಇದು ಜಾರಿಯಾಬೇಕಿತ್ತು. ಆದರೆ ಕರ್ನಾಟಕ ಈ ಆದೇಶವನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಅರ್ಜಿ ಸಲ್ಲಿಸಿತ್ತು. ಆದರೆ ಗುರುವಾರ (ಜುಲೈ 30) ದೆಹಲಿಯಲ್ಲಿ ನಡೆದ CWMA ಸಭೆಯಲ್ಲಿ ಈ ವಾದವನ್ನು ತಿರಸ್ಕರಿಸಿ, CWRC ಆದೇಶವನ್ನು ಎತ್ತಿಹಿಡಿದಿದೆ.
ಈ ನಿಟ್ಟಿನಲ್ಲಿ ಕನ್ನಡ ಪರ ಹೋರಾಟಗಾರರು ಬಂದ್‌ಗೆ ಕರೆ ನೀಡಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಇರಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್ಯಾಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನು ಲಾರಿ ಮಾಲೀಕರ ಸಂಘ, ವಕೀಲರ ಸಂಘ, ಒಲಾ-ಊಬರ್ ಹಾಗೂ ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘಗಳು ಬಂದ್‌ಗೆ ಸಾಥ್ ನೀಡಲಿದೆ.
ಕಾವೇರಿ ಜಲ ವಿವಾದ; ರೈತರ ಹೋರಾಟಕ್ಕೆ ಸಾಥ್ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ
ಕಾವೇರಿ ನೀರು ವಿವಾದ ಸರ್ವ ಪಕ್ಷ ಸಭೆ:
ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2)ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.