#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

GBS Cases: ಮಹಾರಾಷ್ಟ್ರದಲ್ಲಿ ನಿಲ್ಲದ ಜಿಬಿಎಸ್ ಅಬ್ಬರ – ಇಲ್ಲಿಯವರೆಗೆ 167 ಪ್ರಕರಣ ಪತ್ತೆ

ಗುಲ್ಲಿಯನ್ ಬರ್ರೆ ಸಿಂಡ್ರೋಮ್ ಅಥವಾ ಜಿಬಿಎಸ್ ಎಂಬ ಆಟೋ ಇಮ್ಯೂನ್ ಕಾಯಿಲೆಯೊಂದು ಇತ್ತಿಚೆಗೆ ಜೊರಾಗಿ ಸದ್ದು ಮಾಡುತ್ತಿದ್ದು, ಮಹಾರಾಷ್ಟ್ರದಲ್ಲಿ ಈ ಸಾಂಕ್ರಾಮಿಕದ ಅಬ್ಬರಕ್ಕೆ ಜನರು ಭೀತಿ ಪಡುವಂತಾಗಿದೆ. ಇದಕ್ಕೆ ಸಂಬಂಧಿಸಿದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.

ಜಿಬಿಎಸ್ ಸಾಂಕ್ರಮಿಕಕ್ಕೆ ತತ್ತರಿಸದ ಮಹಾರಾಷ್ಟ್ರ

ಸಾಂದರ್ಭಿಕ ಚಿತ್ರ

Profile Sushmitha Jain Feb 11, 2025 6:14 PM

ಪುಣೆ: ರಾಜ್ಯದಲ್ಲಿ ಇದುವರೆಗೆ ಒಟ್ಟು 192 ಗುಲ್ಲಿಯನ್ ಬರ್ರೆ ಸಿಂಡ್ರೋಮ್ (Guillain-Barre Syndrome) (GBS) ಪ್ರಕರಣಗಳು ಪತ್ತೆಯಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ (Maharashtra Health Department) ಮಾಹಿತಿ ನೀಡಿದೆ. ಇವುಗಳಲ್ಲಿ 167 ಪ್ರಕರಣಗಳು ದೃಢಪಟ್ಟಿವೆ ಎಂಬುದಾಗಿ ಇಲಾಖೆ ಮಾಹಿತಿ ನೀಡಿದೆ. ಮಾತ್ರವಲ್ಲದೇ ಈ ಸಿಂಡ್ರೋಮ್ ಕಾರಣದಿಂದಾಗಿ ಇದುವರೆಗೆ ರಾಜ್ಯದಲ್ಲಿ ಏಳು ಸಾವಿನ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಂದು ಸಾವು ಜಿಬಿಎಸ್ ನಿಂದಲೇ ಉಂಟಾಗಿರುವುದು ಖಚಿತಪಟ್ಟಿದೆ, ಉಳಿದ ಆರು ಸಾವಿನ ಕಾರಣಗಳು ಇನ್ನಷ್ಟೇ ಖಚಿತಗೊಳ್ಳಬೇಕಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಬಿಎಸ್ ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗುತ್ತಿರುವುದೂ ಸಹ ಆತಂಕಕಾರಿ ವಿಚಾರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖಾ ವರದಿಗಳ ಪ್ರಕಾರ, 39 ಜಿಬಿಎಸ್ ಪ್ರಕರಣಗಳು ಪುಣೆ ಮಹಾನಗರ ಪಾಲಿಕೆ (Pune Municipal Corporation) (PMC) ವ್ಯಾಪ್ತಿಯಲ್ಲಿ ವರದಿಯಾಗಿದ್ದರೆ, 91 ಪ್ರಕರಣಗಳು ಪಿ.ಎಂ.ಸಿ.ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ವರದಿಯಾಗಿದೆ. 29 ಪ್ರಕರಣಗಳು ಪಿಂಪ್ರಿ ಚಿಂಚವಾಡ್ ಮಹಾನಗರ ಪಾಲಿಕೆ (Pimpri Chinchwad Municipal Corporation) ಪ್ರದೇಶದಲ್ಲಿ ವರದಿಯಾಗಿದ್ದರೆ, 25 ಪ್ರಕರಣಗಳು ಪುಣೆ (Pune) ಗ್ರಾಮಾಂತರ ಪ್ರದೇಶದಲ್ಲಿ ಕಂಡುಬಂದಿದೆ ಹಾಗೂ 8 ಜಿಬಿಎಸ್ ಪ್ರಕರಣಗಳು ಇತರೇ ಜಿಲ್ಲೆಗಳಲ್ಲಿ ವರದಿಯಾಗಿರುವುದಾಗಿ ಮಾಹಿತಿ ತಿಳಿಸಿದೆ.

ಪ್ರಸ್ತುತ, 48 ಜಿಬಿಎಸ್ ಸೋಂಕಿತ ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ದೆ ಪಡೆಯುತ್ತಿದ್ದಾರೆ. ಇನ್ನು, 21 ರೋಗಿಗಳು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ. 91 ರೋಗಿಗಳು ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದು, ಸೋಂಕು ಪೀಡಿತ ಪ್ರದೇಶಗಳಲ್ಲಿ ಜೀವರಕ್ಷಕ ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ.

ಇದಕ್ಕೂ ಮೊದಲು, ಫೆ.06ರಂದು ಪುಣೆ ಮಹಾನಗರ ಪಾಲಿಕೆಯು ನಾಂದೇಡ್ ಗ್ರಾಮ, ಧಾಯಾರಿ ಮತ್ತು ಸಿಂಹಘದ ಮಾರ್ಗಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ 30 ಖಾಸಗಿ ನೀರು ಪೂರೈಕೆ ಕೇಂದ್ರಗಳನ್ನು ಸೀಲ್ ಮಾಡಿತ್ತು. ಈ ಪ್ರದೇಶಗಳನ್ನು ಈ ಸೋಂಕು ಹರಡಿದ ಪ್ರಮುಖ ಕೇಂದ್ರಗಳೆಂದು ಗುರುತಿಸಲಾಗಿತ್ತು. ಕಳೆದ ಎರಡು ದಿನಗಳಲ್ಲಿ ಈ ನೀರು ಪೂರೈಕೆ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಂಸಿ ಅ‍ಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident: ಮಹಾ ಕುಂಭಮೇಳದಿಂದ ಹಿಂತಿರುಗುವಾಗ ದುರಂತ ಅಪಘಾತ- 7 ಮಂದಿ ದಾರುಣ ಸಾವು!

ಸೋಂಕು ಹರಡುವಿಕೆಯ ಕೇಂದ್ರಗಳೆಂದು ಶಂಕಿಸಲಾಗಿದ್ದ ಈ ಪ್ರದೇಶಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಈ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂದು ತಿಳಿದುಬಂದ ಕಾರಣ, ಈ ನೀರು ಪೂರೈಕೆ ಕೇಂದ್ರಗಳ ವಿರುದ್ಧ ಪಿಎಂಸಿ ಕ್ರಮ ಕೈಗೊಂಡಿದೆ. ಕೆಲವೊಂದು ಕೇಂದ್ರಗಳು ಕಾರ್ಯಾಚರಿಸಲು ಅಗತ್ಯವಿರುವ ಅನುಮತಿಯನ್ನು ಹೊಂದಿಲ್ಲದಿರುವುದೂ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಇನ್ನು ಕೆಲವು ಕೇಂದ್ರಗಳಲ್ಲಿನ ನೀರು ಎಸ್ಚೆರಿಚಿಯಾ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಮಾತ್ರವಲ್ಲದೇ, ಕೆಲವು ನೀರು ಪೂರೈಕೆ ಕೇಂದ್ರಗಳು ಸೋಂಕು ನಿರೋಧಕ ಮತ್ತು ಕ್ಲೋರಿನ್ ಬಳಸದೇ ಇರುವುದೂ ಸಹ ತನಿಖೆಯ ವೇಳೆ ಪತ್ತೆಯಾಗಿತ್ತು.

ಫೆ.03ರಂದು ಕೇಂದ್ರ ಆರೋಗ್ಯ ಸಚಿವರು ಮಹಾರಾಷ್ಟ್ರದ ಪ್ರಮುಖ ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರೊಂದಿಗೆ ಉನ್ನತಮಟ್ಟದ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಕೆಂದ್ರ ಸಚಿವರು, ರಾಜ್ಯದ ಅರೋಗ್ಯ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯ ಕಾಳಜಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಇದರಲ್ಲಿ ಜಿಬಿಎಸ್ ಪೀಡಿತರ ತಪಾಸಣೆ ಮತ್ತು ಅವರಿಗೆ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನಗಳ ಕುರಿತಾಗಿಯೂ ಕೇಂದ್ರ ಸಚಿವರು ವಿವರವಾದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗುಲ್ಲಿಯನ್ ಬರ್ರೆ ಸಿಂಡ್ರೋಮ್ ಅನ್ನುವಂತದ್ದು ಒಂದು ಸ್ವ-ರೋಗ ನಿರೊಧಕ ಸ್ಥಿತಿಯಾಗಿದ್ದು, ಇಲ್ಲಿ ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯು ತನ್ನದೇ ದೇಹದ ನರ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತದೆ, ಇದರಿಂದಾಗಿ ಆ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಕ್ಷೀಣತೆಯಂತಹ ಸಮಸ್ಯೆ ಕಂಡುಬರುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ವ್ಯಕ್ತಿಗೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಗಳೂ ಇರುತ್ತವೆ.