Zubair Hangargekar: ಅಲ್-ಖೈದಾ ಜತೆ ಸಂಪರ್ಕ ಆರೋಪ: ಪುಣೆ ಟೆಕ್ಕಿಯ ಬಂಧನ
Al Qaeda: ಅಲ್-ಖೈದಾ ಜತೆ ನಂಟು ಹೊಂದಿದ್ದ ಪುಣೆ ಮೂಲದ ವ್ಯಕ್ತಿಯನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನವೆಂಬರ್ 4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಸಾಂದರ್ಭಿಕ ಚಿತ್ರ -
ಮುಂಬೈ: ಉಗ್ರ ಸಂಘಟನೆ ಅಲ್-ಖೈದಾ (Al-Qaeda) ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪುಣೆಯ ಟೆಕ್ಕಿ (Techie)ಯೊಬ್ಬನನ್ನು ಮಹಾರಾಷ್ಟ್ರ (Maharashtra)ದ ಭಯೋತ್ಪಾದನಾ ನಿಗ್ರಹ ದಳ (Anti-Terrorism Squad) ಬಂಧಿಸಿದೆ. ಪುಣೆಯ (Pune) ಕೊಂಡ್ವಾ (Kondhwa) ಪ್ರದೇಶದ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಜುಬೈರ್ ಹಂಗರ್ಗೇಕರ್ (Zubair Hangargekar) ಬಂಧಿತ ಆರೋಪಿ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ತಂಡ ತೀವ್ರ ನಿಗಾ ಇಟ್ಟಿತ್ತು. ಬಂಧನದ ಬಳಿಕ ಆರೋಪಿಯನ್ನು ವಿಶೇಷ ಯುಎಪಿಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನವೆಂಬರ್ 4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಅಕ್ಟೋಬರ್ 27ರ ರಾತ್ರಿ ಪುಣೆಯಲ್ಲಿ ಶೋಧಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು, ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಗಡದ್ದಾಗಿ ತಿಂದು ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ಪ್ರವಾಸಿಗರು; ಬೆನ್ನಟ್ಟಿದ ಸಿಬ್ಬಂದಿ
ಸ್ಥಳೀಯ ನಿವಾಸಿಗಳ ಪ್ರಕಾರ, ಆರೋಪಿ ಹಂಗರ್ಗೇಕರ್ ಶಾಂತ ಸ್ವಭಾವದ ಟೆಕ್ಕಿಯಾಗಿದ್ದ. ಆರೋಪಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಹಿನ್ನೆಲೆಯವನಾಗಿದ್ದು, ಆತ ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ. ಆರೋಪಿಯು ಉಗ್ರ ಹಾಗೂ ಮೂಲಭೂತವಾದಿಗಳ ಸಂಪರ್ಕಕ್ಕೆ ಹೇಗೆ ಬಂದ? ಅವನು ಒಬ್ಬನೇ ಕಾರ್ಯನಿರ್ವಹಿಸುತ್ತಿದ್ದನಾ? ಅಥವಾ ಸಂಘಟಿತ ಜಾಲದ ಭಾಗವಾಗಿದ್ದಾನೋ? ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
19 ಲ್ಯಾಪ್‌ಟಾಪ್ ಹಾಗೂ 40 ಮೊಬೈಲ್ ಫೋನ್‌ಗಳು ವಶ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಎಟಿಎಸ್ ಅಧಿಕಾರಿಗಳು ಆರೋಪಿಯ ಮನೆಯಿಂದ 19 ಲ್ಯಾಪ್‌ಟಾಪ್, 40 ಮೊಬೈಲ್ ಫೋನ್‌ಗಳು ಮತ್ತು ಅಲ್-ಖೈದಾ ಸಂಘಟನೆಯೊಂದಿಗಿನ ಸಂಪರ್ಕ ಸೂಚಿಸುವ ವಿವಿಧ ಪುಸ್ತಕ ಹಾಗೂ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಯುವಕರನ್ನು ಉಗ್ರ ಚಟುವಟಿಕೆಗಳತ್ತ ಸೆಳೆಯಲು ಪ್ರಯತ್ನ?
ಎಟಿಎಸ್ ಅಧಿಕಾರಿಗಳು ಆರೋಪಿ ಹಂಗರ್ಗೇಕರ್ ವಿರುದ್ಧ ನಿಷೇಧಿತ ಉಗ್ರವಾದ ಸಾಹಿತ್ಯ ಪುಸ್ತಕ ಹೊಂದಿರುವುದು, ಯುವಕರನ್ನು ಉಗ್ರ ಮನೋಭಾವದತ್ತ ಪ್ರೇರೇಪಿಸಲು ಯತ್ನ ಹಾಗೂ ಅಲ್-ಖೈದಾ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವುದಾಗಿ ಆರೋಪಿಸಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳಿಂದ ಆತ ಜಿಹಾದಿ ಸಿದ್ಧಾಂತವನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹರಡುವ ಉದ್ದೇಶ ಹೊಂದಿದ್ದ ಎಂಬುವುದು ಸ್ಪಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಂಧನವು ಮಹಾರಾಷ್ಟ್ರ ಎಟಿಎಸ್ ನಡೆಸುತ್ತಿರುವ ಆನ್‌ಲೈನ್ ಉಗ್ರ ಮನೋಭಾವ ತಡೆ ಅಭಿಯಾನದ ಭಾಗವಾಗಿದೆ. ಕೆಲವು ತಿಂಗಳಿನಿಂದ ಪುಣೆಯಲ್ಲಿ ಉಗ್ರ ಚಟುವಟಿಕೆ ಮತ್ತು ವಿದೇಶಿ ಸಂಪರ್ಕ ಹೊಂದಿದ ಡಿಜಿಟಲ್ ಜಾಲಗಳ ಮೇಲೆ ಎಟಿಎಸ್ ಕಣ್ಣಿಟ್ಟಿದೆ.