ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಮಮತಾ ಬ್ಯಾನರ್ಜಿಗೆ ಮತ್ತೊಂದು ಹೊಡೆತ; ಎನ್‌ಡಿಎ ಸೇರುವುದಾಗಿ ಘೋಷಿಸಿದ 20 ಸಂಸದರು
TMC: ಟಿಎಂಸಿಯ ಹಿರಿಯ ನಾಯಕಿ, ಸಂಸದೆ ಕಾಕೋಳಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ 20 ಸಂಸದರು ಆಡಳಿತರೂಢ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 312ಕ್ಕೆ ಏರಲಿದೆ.
ಸಂಸದೆ ಕಾಕೋಳಿ ಘೋಷ್ ದಸ್ತಿದಾರ್ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಜೂ. 8: ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಆಡಳಿತ ನಡೆಸಿದ ಬಳಿಕ ಹೀನಾಯವಾಗಿ ಸೋತ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಇದೀಗ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಈಗಾಗಲೇ ಇಬ್ಭಾಗವಾಗಿರುವ ಟಿಎಂಸಿ ಸಂಸತ್ತಿನಲ್ಲೂ ಹೋಳಾಗಿದೆ. 59 ಶಾಸಕರು ತಮ್ಮದೇ ಪ್ರತ್ಯೇಕ ಬಣ ರಚಿಸಿಕೊಂಡಿದ್ದು, ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಬಂಡಾಯವೆದ್ದಿದ್ದಾರೆ. ಇದೀಗ ಸಂಸದರೂ ಸಿಡಿದೆದ್ದಿದ್ದು, ಆಡಳಿತರೂಢ ಎನ್‌ಡಿಎ ಒಕ್ಕೂಟ ಸೇರುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಟಿಎಂಸಿಯ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.
ಟಿಎಂಸಿಯ ಹಿರಿಯ ಸಂಸದೆ ಕಾಕೋಳಿ ಘೋಷ್ ದಸ್ತಿದಾರ್ ಮಹತ್ವದ ಘೋಷಣೆ ಹೊರಡಿಸಿದ್ದು, 20 ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್‌ಡಿಎ ಸಂಸದರ ಸಂಖ್ಯೆ 312ಕ್ಕೆ ಏರಲಿದೆ.
ಎನ್‌ಡಿಎಗೆ ಬೆಂಬಲ ಸೂಚಿಸಿದ ಟಿಎಂಸಿ ಸಂಸದರು:
#BREAKING
— Nabila Jamal (@nabilajamal_) June 8, 2026
REBEL MPs FROM TMC TO SUPPORT BJP LED NDA
20 Lok Sabha MPs led by Kakoli Ghosh Dastidar form a breakaway group, extend support to the BJP-led NDA
The rebel bloc is meeting Lok Sabha Speaker Om Birla today
TMC currently holds 28 Lok Sabha seats. If 20 walk, Mamata's… pic.twitter.com/94n5C9wk6M
ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 13 ಟಿಎಂಸಿ ಸದಸ್ಯರಿದ್ದಾರೆ. ಈ ಬಗ್ಗೆ ದಸ್ತಿದಾರ್ ಮಾತನಾಡಿ, ಎನ್‌ಡಿಎಗೆ ಬೆಂಬಲ ನೀಡುವ ಬಗ್ಗೆ ಸ್ಪೀಕರ್‌ಗೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ. ʼʼನನ್ನನ್ನೂ ಸೇರಿ ಸುಮಾರು 20 ಟಿಎಂಸಿ ಸಂಸದರು ಎನ್‌ಡಿಎಗೆ ಬಂಬಲ ನೀಡುವುದಾಗಿ ತಿಳಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದೇವೆʼʼ ಎಂದು ವಿವರಿಸಿದ್ದಾರೆ.
ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿ? 20 ಸಂಸದರು ಬಿಜೆಪಿ ಸಂಪರ್ಕದಲ್ಲಿ ಎಂಬ ವರದಿಯಿಂದ ರಾಜಕೀಯ ಸಂಚಲನ
ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ತಾವು ಮುಂದುವರಿದಿರುವುದಾಗಿ ಹೇಳಿಕೊಂಡ ದಸ್ತಿದಾರ್, ಸಂಸದರೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ʼʼಜನಾಭಿಪ್ರಾಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮ ಮುಂದಿನ ರಾಜಕೀಯ ಹಾದಿ ಎನ್‌ಡಿಎ ಜತೆ ಎಂಬುದನ್ನು ಅರಿತುಕೊಂಡಿದ್ದೇವೆʼʼ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಟಿಎಂಸಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾಕೋಳಿ ಘೋಷ್ ದಸ್ತಿದಾರ್ ಆಕ್ರೋಶ
ಪಶ್ಚಿಮ ಬಂಗಾಳದ ಬರಾಸಾತ್ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಗೆದ್ದ 64 ವರ್ಷದ ಕಾಕೋಳಿ ಘೋಷ್ ದಸ್ತಿದಾರ್ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಟಿಎಂಸಿ ವಿರುದ್ಧ ಕಿಡಿಕಾರಿದ್ದರು. ʼʼರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಟಿಎಂಸಿಯ ಹೀನಾಯ ಸೋಲಿಗೆ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಕೆಟ್ಟ ಆಡಳಿತ ನೀತಿಯೇ ಕಾರಣʼʼ ಎಂದು ದೂರಿದ್ದರು. ಕಾಕೋಳಿ 4 ದಶಕಗಳಿಂದಲೂ ಮಮತಾ ಅವರ ಆಪ್ತೆಯಾಗಿ ಗುರುತಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ವೀಫ್ ವಿಪ್ (ಮುಖ್ಯ ಸಚೇತಕಿ) ಆಗಿ ನೇಮಿಸಲಾಗಿತ್ತು. ಇತ್ತೀಚೆಗೆ ಅವರನ್ನು ಆ ಹುದ್ದೆಯಿಂದ ಬದಲಾಯಿಸಲಾಗಿತ್ತು.
ಅತ್ತ ದೆಹಲಿಯಲ್ಲಿ ಆಯೋಜಿಸಿರುವ ವಿಪಕ್ಷಗಳ ಇಂಡಿ ಒಕ್ಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರೆ ಇತ್ತ ಅವರ ಪಕ್ಷ ಮತ್ತೊಂದು ಹೋಳಾಗಿದೆ. ಒಂದೇ ಒಂದು ಸೋಲು ಅವರನ್ನು ಏಕಾಂಗಿಯನ್ನಾಗಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.