ಅಕ್ರಮ ವಲಸಿಗರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ 'ಸರ್ಜಿಕಲ್ ಸ್ಟ್ರೈಕ್': 4,800 ಮಂದಿ ಬಾಂಗ್ಲಾದೇಶಕ್ಕೆ ವಾಪಸ್
ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಒಳನುಸುಳುವಿಕೆ ಹೆಚ್ಚಾಗಿದ್ದು, ಈಗಾಗಲೇ 4,800 ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ಇನ್ನು 836 ಜನರು ಗಡೀಪಾರು ನಿರೀಕ್ಷೆಯಲ್ಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದರು. ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಭಾನುವಾರ ಈ ಮಾಹಿತಿ ನೀಡಿದರು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (west bengal) ಜನಸಂಖ್ಯಾ ವ್ಯತ್ಯಾಸಕ್ಕೆ ಅಕ್ರಮ ಒಳನುಸುಳುವಿಕೆ (illegal immigrants) ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಿಂದ (Bangladesh) ಅಕ್ರಮ ಒಳನುಸುಳುವಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಬಂದು ಇಲ್ಲಿ ವಾಸವಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರಲ್ಲಿ 4,800 ಮಂದಿಯನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ಇನ್ನು 836 ಜನರು ಗಡೀಪಾರು ನಿರೀಕ್ಷೆಯಲ್ಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (CM Suvendu Adhikari) ತಿಳಿಸಿದರು. ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವ್ಯಾಪ್ತಿಗೆ ಬರದ ಅಕ್ರಮ ವಲಸಿಗರನ್ನು ಕೇಂದ್ರ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ನೇರವಾಗಿ ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶದ ಗಡಿ ಭದ್ರತೆಯನ್ನು ಸುರಕ್ಷಿತಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇದರೊಂದಿಗೆ ಅಕ್ರಮ ವಲಸೆಯನ್ನು ಕೂಡ ನಿಯಂತ್ರಿಸಬೇಕಿದೆ ಎಂದು ಅವರು ಹೇಳಿದರು.
ಬಿಜೆಪಿ ತೊರೆದ ಅಣ್ಣಾಮಲೈಗೆ ತಮಿಳಿಗರು ಸಾಥ್; ಹೊಸ ಆಂದೋಲನಕ್ಕೆ 24 ಗಂಟೆಗಳಲ್ಲಿ 15 ಲಕ್ಷ ಜನರು ಸೇರ್ಪಡೆ
ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸ್ಥಾಪಿಸಲಾದ ಹೋಲ್ಡಿಂಗ್ ಕೇಂದ್ರಗಳಿಂದ ಸುಮಾರು 4,800 ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದು, ಇನ್ನೂ 836 ಮಂದಿ ಗಡೀಪಾರಿನ ನೀರಿಕ್ಷೆಯಲ್ಲಿದ್ದಾರೆ. ಗಡಿಯ ಭದ್ರತೆಗೆ ಸುಮಾರು 100 ಕಿ.ಮೀ. ಉದ್ದದ ಬೇಲಿ ಹಾಕಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗೆ ರಾಜ್ಯವು ಈಗಾಗಲೇ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಸುಮಾರು 100 ಕಿ.ಮೀ ಭೂಮಿಯನ್ನು ಹಸ್ತಾಂತರಿಸಲಾಗಿದ್ದು, ಇನ್ನು 556 ಕಿ.ಮೀ. ಭೂಮಿ ಬೇಕಾಗಿದೆ. ಇದರೊಂದಿಗೆ ಸಿಲಿಗುರಿ ಕಾರಿಡಾರ್, ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ಉತ್ತರ ಬಂಗಾಳದಲ್ಲಿ ಚಿಕನ್ಸ್ ನೆಕ್ ಕಾರಿಡಾರ್‌ಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಅಕ್ರಮ ವಲಸೆಯನ್ನು ತಡೆಗಟ್ಟಲು ಹಿಂದಿನ ತೃಣಮೂಲ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇವರಿಗೆ ರಾಜ್ಯದ ಸೌಲಭ್ಯಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಹೊಸ ಸರ್ಕಾರದ ಕ್ರಮಗಳನ್ನು ಅನುಸರಿಸಿ ಅನೇಕ ದಾಖಲೆರಹಿತ ವಲಸಿಗರು ಈಗಾಗಲೇ ಸ್ವಯಂಪ್ರೇರಣೆಯಿಂದ ಇಲ್ಲಿಂದ ಹೊರಟು ಹೋಗಿದ್ದಾರೆ ಎಂದರು.
ಜನಗಣತಿಗೆ ಸಂಬಂಧಿಸಿ ರಾಜ್ಯದಲ್ಲಿ ಕೆಲಸ ಪ್ರಾರಂಭಿಸಲಾಗಿದೆ. ಆಗಸ್ಟ್ 1 ರಿಂದ ಆಗಸ್ಟ್ 15 ರ ನಡುವೆ ಮನೆ-ಮನೆ ಸಮೀಕ್ಷೆಯನ್ನು ನಡೆಸಲಾಗುವುದು. ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ ಜನಗಣತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಹೊಸ ಸರ್ಕಾರದ ವಿವಿಧ ಯೋಜನೆಗಳು
ಚುನಾವಣಾ ಭರವಸೆಯಲ್ಲಿ ನೀಡಲಾಗಿರುವ ಅನ್ನಪೂರ್ಣ ಯೋಜನೆಯಡಿ 50 ಲಕ್ಷ ಮಹಿಳೆಯರು ತಲಾ 3,000 ರೂ.ಗಳನ್ನು ಪಡೆದಿದ್ದಾರೆ. ಯೋಜನೆಯ ಅನುಷ್ಠಾನದ ಮೊದಲ ದಿನವೇ 28 ಲಕ್ಷಕ್ಕೂ ಹೆಚ್ಚು ಮಹಿಳೆಯರು ಇದನ್ನು ಪಡೆದುಕೊಂಡಿದ್ದರು. ಫಲಾನುಭವಿಗಳನ್ನು ಪರಿಶೀಲನಾ ಪ್ರಕ್ರಿಯೆಯಲ್ಲಿ ಒಳಪಡಿಸಿದ ಮೇಲೆಯೇ ಹಣವನ್ನು ವಿತರಿಸಲಾಗುತ್ತಿದೆ. ಹಿಂದಿನ ಸರ್ಕಾರದ ಲಕ್ಷ್ಮಿರ್ ಭಂಡಾರ್ ಫಲಾನುಭವಿಗಳಲ್ಲಿ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಂಡುಬಂದಿಲ್ಲ. ಇದರಲ್ಲಿ ಸುಮಾರು ಮೂರು ಲಕ್ಷ ಪುರುಷರು ಕೂಡ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.
ತೃಣಮೂಲ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಅಧಿಕಾರಿ, ಹಲವು ತೃಣಮೂಲ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕೆಲವರನ್ನು ಬಂಧಿಸಲಾಗಿದೆ. ತನಿಖೆ ನಡೆದಲ್ಲೆಲ್ಲಾ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದೆ ಎಂದರು.
ಜೂನ್ 22 ರಂದು ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಹಲವಾರು ಹೆಚ್ಚುವರಿ ಕಲ್ಯಾಣ ಕ್ರಮಗಳನ್ನು ಅನಾವರಣಗೊಳಿಸಲಾಗುವುದು ಎಂ ಅವರು, ಬಿಜೆಪಿ ಸರ್ಕಾರದ ಅಡಿಯಲ್ಲಿ ಮೀನು ಪ್ರಿಯರಿಗೆ ಬಂಗಾಳದಲ್ಲಿ ತೊಂದರೆಯಾಗುತ್ತದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳ ಹೇಳಿಕೆಗೆ ವಿರುದ್ಧವಾಗಿ ಅವರು ಮುಂದಿನ ವಾರದಿಂದ ಪ್ರತಿ ವ್ಯಕ್ತಿಗೆ 5 ರೂ. ಬೆಲೆಯ ಸಬ್ಸಿಡಿ ದರದಲ್ಲಿ ಮೀನು ಊಟವನ್ನು ಪರಿಚಯಿಸಲಾಗುವುದು ಎಂದು ಘೋಷಿಸಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯುಷ್ಮಾನ್ ಭಾರತ್ ಯೋಜನೆಗಾಗಿ ರಾಜ್ಯವು ಕೇಂದ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಇದರಿಂದ ಸುಮಾರು 6.5 ಕೋಟಿ ಜನರನ್ನು ಒಳಗೊಂಡ ಸುಮಾರು 1.46 ಕೋಟಿ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ಪಡೆಯಲಿದೆ ಎಂದರು.
ನೀಟ್ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ? NAT ಹೇಳಿದ್ದೇನು?
7 ನೇ ವೇತನ ಆಯೋಗವನ್ನು ಸರ್ಕಾರ ರಚಿಸಿದ್ದು, 2016 ಮತ್ತು 2019 ರ ನಡುವಿನ ಅವಧಿಯ ಸುಮಾರು ಮೂರು ಲಕ್ಷ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಬಾಕಿಯನ್ನು ಈಗಾಗಲೇ ಪಾವತಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು 4,500 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದರಲ್ಲಿ 527 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ ಅವರು, ಆರೋಗ್ಯ ರಕ್ಷಣೆ, ವಸತಿ ಮತ್ತು ಉದ್ಯೋಗ ಕಾರ್ಯಕ್ರಮಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡುವ ಭರವಸೆಯನ್ನು ನೀಡಿದರು.