ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈಯಿಂದ ಅಹಮದಾಬಾದ್‌ ಇನ್ನು ಕೇವಲ 90 ನಿಮಿಷಗಳ ಪ್ರಯಾಣ: 2027ಕ್ಕೆ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಪ್ರಾಯೋಗಿಕ ಸಂಚಾರ

Bullet Train Trial Run to Begin in 2027: ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಯು ಪ್ರಮುಖ ಮೈಲುಗಲ್ಲು ತಲುಪಿದ್ದು, ಮುಂದಿನ ವರ್ಷ ಪ್ರಾಯೋಗಿಕ ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂಬೈ-ಅಹಮದಾಬಾದ್ ಕಾರಿಡಾರ್‌ನ ಒಂದು ಭಾಗದಲ್ಲಿ ಈ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಅಲ್ಲಿನ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

ಮುಂದಿನ ವರ್ಷ ಬಹುನಿರೀಕ್ಷಿತ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ

ಸಾಂದರ್ಭಿಕ ಚಿತ್ರ -

Priyanka P
Priyanka P Sep 8, 2026 9:04 PM

ಮುಂಬೈ, ಆ. 8: ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು (Bullet train) ಯೋಜನೆಯು ಪ್ರಮುಖ ಮೈಲುಗಲ್ಲು ತಲುಪಿದ್ದು, ಮುಂದಿನ ವರ್ಷ ಪ್ರಾಯೋಗಿಕ ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ದೇಶದ ಮೊದಲ ಸ್ವದೇಶಿ ಹೈಸ್ಪೀಡ್ ರೈಲು 2027ರ ಮೇ ಅಥವಾ ಜೂನ್‌ನಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ಇಳಿಯಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ದೃಢಪಡಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ-ಗುಜರಾತ್‌ನ ಅಹಮದಾಬಾದ್ ನಡುವಿನ ಕಾರಿಡಾರ್‌ನ ಒಂದು ಭಾಗದಲ್ಲಿ ಈ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು, ಅಲ್ಲಿ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಪರೀಕ್ಷೆ ಮುಗಿದ ನಂತರ, ಎರಡರಿಂದ ನಾಲ್ಕು ತಿಂಗಳೊಳಗೆ ಪ್ರಯಾಣಿಕರಿಗೆ ಸೇವೆ ಸಿಗಲಿದೆ.

ಗುಜರಾತ್‌ನ ವಡೋದರಾದಲ್ಲಿ ನಡೆದ ನಮೋ ಫಾರ್ ವಿಕಸಿತ್ ಭಾರತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಹೈ-ಸ್ಪೀಡ್ (ಬುಲೆಟ್) ರೈಲಿನ ಮೊದಲ ಬಾಡಿ ಫ್ರೇಮ್ (ರಚನೆ) ಈಗಷ್ಟೇ ಪೂರ್ಣಗೊಂಡಿದೆ ಮತ್ತು ಬೋಗಿಗಳ ರಚನಾತ್ಮಕ ಶಕ್ತಿಯನ್ನು ಪರೀಕ್ಷಿಸುವ ಅತ್ಯಂತ ಪ್ರಮುಖ ಹಂತವಾದ ಸ್ಕ್ವೀಜ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಮುಂದಿನ ವರ್ಷದಿಂದ ಭಾರತದಲ್ಲಿ ಓಡಲಿದೆ ಬುಲೆಟ್ ರೈಲು: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

ಮುಂದಿನ ವರ್ಷ ಮೇ ಅಥವಾ ಜೂನ್ ವೇಳೆಗೆ ಭಾರತದ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಸಿದ್ಧವಾಗಲಿದೆ. 2ರಿಂದ 4 ತಿಂಗಳ ಪರೀಕ್ಷೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಬುಲೆಟ್ ರೈಲನ್ನು ಉದ್ಘಾಟಿಸಲಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಈ ಯೋಜನೆಯು ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದ ಪ್ರಮುಖ ಭಾಗ ಎಂದು ಬಣ್ಣಿಸಿದ ಸಚಿವರು, ಇದು ಗುಜರಾತ್‌ನ ಎರಡು ಪ್ರಮುಖ ನಗರಗಳು ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಎಷ್ಟು ಗಣನೀಯವಾಗಿ ಕಡಿತಗೊಳಿಸಲಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

ವಡೋದರಾದಿಂದ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರೆ, ನೀವು ಕೇವಲ ಒಂದೂವರೆ ಗಂಟೆಯಲ್ಲಿ ಮುಂಬೈ ತಲುಪುತ್ತೀರಿ ಎಂದು ಅವರು ಹೇಳಿದರು. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಸೂರತ್-ವಾಪಿ ಮಾರ್ಗವು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಚೆನಾಬ್ ಸೇತುವೆ ಮತ್ತು ಮಿಜೋರಾಂ ಅನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಜೋಡಿಸುವ ರೈಲು ಮಾರ್ಗ ಸೇರಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಹಲವು ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ. ದೇಶಾದ್ಯಂತ 280 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗಿದೆ. 36,000 ಕಿಲೋ ಮೀಟರ್ ಹೊಸ ರೈಲು ಹಳಿಗಳನ್ನು ಅಳವಡಿಸಲಾಗಿದೆ ಹಾಗೂ ಇದರೊಂದಿಗೆ ವಂದೇ ಭಾರತ್ ತಂತ್ರಜ್ಞಾನವನ್ನು ಹೊಂದಿರುವ ಸರಕು ಸಾಗಣೆ (ಕಾರ್ಗೋ) ರೈಲುಗಳ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.