77ನೇ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ; ಟಿಕೆಟ್ ಮಾರಾಟ ಆರಂಭ, ವೇಳಾಪಟ್ಟಿ ಬಿಡುಗಡೆ, ಅಭ್ಯಾಸ ಶುರು
ದೆಹಲಿಯಲ್ಲಿ ಜನವರಿ 26ರಂದು ನಡೆಯುವ 77ನೇ ಗಣರಾಜ್ಯೋತ್ಸವ ಆಚರಣೆಗೆ ದೇಶವೇ ಸಜ್ಜಾಗಿದೆ. ವಿವಿಧ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟಿಕೆಟ್‌ಗಳ ,ಮಾರಾಟ ಆರಂಭವಾಗಿದೆ. ಈಗಾಗಲೇ ಮಿಲಿಟರಿ ಪ್ರದರ್ಶನಗಳು, ಸಾಂಸ್ಕೃತಿಕ ಟ್ಯಾಬ್ಲೋ ಮತ್ತು ಸೇನಾ ಮೆರವಣಿಗೆಯ ಅಭ್ಯಾಸಗಳು ನಡೆಯುತ್ತಿವೆ. ಇದು ಜನರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವ (77 Republic Day 2026) ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ದೆಹಲಿಯಲ್ಲಿ (Republic Day Parade 2026) ಜನವರಿ 26ರಂದು ನಡೆಯುವ ಭವ್ಯ ಮಿಲಿಟರಿ ಪ್ರದರ್ಶನಗಳು, ಸಾಂಸ್ಕೃತಿಕ ಟ್ಯಾಬ್ಲೋ, ನಾಗರಿಕ ತುಕಡಿಗಳನ್ನು ಒಳಗೊಂಡ ಐಕಾನಿಕ್ ಪೆರೇಡ್ ಗೆ ಕರ್ತವ್ಯ ಪಥವನ್ನು (delhi Kartavya Path) ಸಜ್ಜುಗೊಳಿಸಲಾಗುತ್ತಿದೆ. ಈಗಾಗಲೇ ಗಣರಾಜ್ಯೋತ್ಸವದ ವಿವಿಧ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರ ಟಿಕೆಟ್‌ಗಳ ಮಾರಾಟ ನಡೆಯುತ್ತಿದ್ದು, ಮಿಲಿಟರಿ ಪ್ರದರ್ಶನಗಳು, ಸಾಂಸ್ಕೃತಿಕ ಟ್ಯಾಬ್ಲೋ ಮತ್ತು ಸೇನಾ ಮೆರವಣಿಗೆಯ ಪೂರ್ವಾಭ್ಯಾಸಗಳು ನಡೆಯುತ್ತಿವೆ. ಇವೆಲ್ಲವೂ ದೇಶದ ಜನರ ಉತ್ಸಾಹವನ್ನು ಹೆಚ್ಚಿಸುತ್ತಿದೆ.
ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಅಭ್ಯಾಸದ ಜೊತೆಗೆ 78ನೇ ಸೇನಾ ದಿನದ ಪೆರೇಡ್ ಜನವರಿ 15 ರಂದು ಜೈಪುರದಲ್ಲಿ ನಡೆಯಲಿದೆ. ಸೇನಾ ದಿನದ ಮೆರವಣಿಗೆಯು ಆಪರೇಷನ್ ಸಿಂದೂರ್ ಮೇಲೆ ನಡೆಸಲಾಗುತ್ತಿದೆ. ಇದರಲ್ಲಿ ಟಿ-90 ಟ್ಯಾಂಕ್‌ಗಳು, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಎಂ-777 ಹೊವಿಟ್ಜರ್‌ಗಳು ಪ್ರದರ್ಶನಗೊಳ್ಳಲಿವೆ. ಇದು ಭಾರತದ ಸ್ವಾವಲಂಬನೆ ಮತ್ತು ಆಧುನಿಕ ಮಿಲಿಟರಿ ಸಾಮರ್ಥ್ಯವನ್ನು ಪ್ರತಿಬಿಂಬಿಸಲಿದೆ.
ಐಪಿಎಲ್ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್ ರೆಹಮಾನ್!
1949ರ ಜನವರಿ 15ರಂದು ದೇಶದ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಜನರಲ್ ಕೆ.ಎಂ. ಕಾರಿಯಪ್ಪ ಅವರು ಬ್ರಿಟಿಷ್ ಮುಖ್ಯಸ್ಥರಿಂದ ಅಧಿಕಾರ ವಹಿಸಿಕೊಂಡು ದಿನವನ್ನು ಈ ದಿನ ಸ್ಮರಿಸಲಾಗುತ್ತದೆ.
ಏನು ಕಾರ್ಯಕ್ರಮ?
ಗಣರಾಜ್ಯೋತ್ಸವದ ಆಚರಣೆಯಲ್ಲಿ ಜನವರಿ 26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ, ಜನವರಿ 28ರಂದು ಬೀಟಿಂಗ್ ರಿಟ್ರೀಟ್ ಸಮಾರಂಭದ ಪೂರ್ಣ ಉಡುಗೆ ಪೂರ್ವಾಭ್ಯಾಸ, ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭ, ಆಚರಣೆಗಳ ಔಪಚಾರಿಕ ಮುಕ್ತಾಯ ಕಾರ್ಯಕ್ರಮಗಳು ನಡೆಯಲಿವೆ.
ಟಿಕೆಟ್ ಬುಕ್ಕಿಂಗ್ ಹೇಗೆ?
ಈ ಮೂರು ಕಾರ್ಯಕ್ರಮಗಳಿಗೆ ಟಿಕೆಟ್ ಮಾರಾಟ ಜನವರಿ 5 ರಿಂದ ಜನವರಿ 14ರವರೆಗೆ ನಡೆಯಲಿದೆ. ಗಣರಾಜ್ಯೋತ್ಸವ ಪರೇಡ್ ಟಿಕೆಟ್ 20 ಮತ್ತು 100 ರೂ., ಪೂರ್ಣ ಉಡುಗೆ ರಿಹರ್ಸಲ್ ಬೀಟಿಂಗ್ ರಿಟ್ರೀಟ್ ಟಿಕೆಟ್ 20 ರೂ., ಬೀಟಿಂಗ್ ರಿಟ್ರೀಟ್ ಸಮಾರಂಭ ಟಿಕೆಟ್ 100 ರೂ. ಗೆ ಲಭ್ಯವಿದೆ.
ಟಿಕೆಟ್ ಬುಕ್ಕಿಂಗ್ ಅಧಿಕೃತ aamantran.mod.gov.in ಪೋರ್ಟಲ್ ನಲ್ಲಿ ಮಾಡಬಹುದು. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಮಾರಾಟ ಪ್ರಾರಂಭವಾಗುತ್ತದೆ. ಅಲ್ಲದೇ ದೆಹಲಿಯಲ್ಲಿ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಆಫ್‌ಲೈನ್ ಟಿಕೆಟ್‌ಗಳು ಲಭ್ಯವಿದೆ. ಇದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಸೇನಾ ಭವನ, ಶಾಸ್ತ್ರಿ ಭವನ, ಜಂತರ್ ಮಂತರ್, ಸಂಸತ್ ಭವನದ ಸ್ವಾಗತ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ ಮತ್ತು ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಲಭ್ಯವಾಗಲಿದೆ. ಯಾವುದಾದರೂ ಮಾನ್ಯವಾದ ಗುರುತು ಪತ್ರ ತೋರಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ಏನು ವಿಶೇಷ?
ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ವೈಮಾನಿಕ ಪ್ರದರ್ಶನ, ಮಿಲಿಟರಿ ಕವಾಯತುಗಳು, ವರ್ಣರಂಜಿತ ರಾಜ್ಯ ಟ್ಯಾಬ್ಲೋಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಇರಲಿದೆ. ಇದೇ ಮೊದಲ ಬಾರಿಗೆ ಬ್ಯಾಕ್ಟ್ರಿಯನ್ ಒಂಟೆಗಳು, ಝನ್ಸ್ಕಾರ್ ಪೋನಿಗಳು, ತರಬೇತಿ ಪಡೆದ ನಾಯಿಗಳು ಮತ್ತು ರಾಪ್ಟರ್‌ಗಳನ್ನು ಒಳಗೊಂಡಂತೆ ಭಾರತೀಯ ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ ವಿಶೇಷ ಪ್ರಾಣಿ ತುಕಡಿಯನ್ನು ಪ್ರದರ್ಶಿಸಲಾಗುವುದು.
ಮೂರರಲ್ಲಿ ಒಂದು ಗ್ಲಾಸ್ ಕುಡಿಯುವ ನೀರು ಕಲುಷಿತ; ಜಲ ಜೀವನ್ ಮಿಷನ್ ವರದಿಯಲ್ಲಿ ಬಹಿರಂಗ
ಸಂದರ್ಶಕರಿಗೆ ಸೂಚನೆ
ಗಣರಾಜ್ಯೋತ್ಸವದ ಟಿಕೆಟ್‌ಗಳು ಸೀಮಿತವಾಗಿವೆ. ಆದ್ದರಿಂದ ಮುಂಚಿತವಾಗಿ ಬುಕ್ಕಿಂಗ್ ಮಾಡಿದವರಿಗೆ ಆದ್ಯತೆ ಇರುತ್ತದೆ. ಭದ್ರತಾ ತಪಾಸಣೆಗಾಗಿ ಸಂದರ್ಶಕರು ನಿಗದಿತ ಸಮಯಕ್ಕಿಂತ ಮೊದಲು ಸ್ಥಳಕ್ಕೆ ಆಗಮಿಸಬೇಕು. ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬಳಸಿದ ಗುರುತು ಪತ್ರವನ್ನು ಹೊಂದಿರಬೇಕು. ಗಣರಾಜ್ಯೋತ್ಸವ ಆಚರಣೆ ಕುರಿತಾದ ಅಧಿಕೃತ ಮಾಹಿತಿಯು rashtraparv.mod.gov.in ನಲ್ಲಿ ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.