ಕಸ್ಟಡಿಯಲ್ಲಿ ತಂದೆ-ಮಗ ಸಾವು: 9 ಪೊಲೀಸರಿಗೆ ಮರಣದಂಡನೆ; ಮಧುರೈ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು
Madurai Court: ತಂದೆ-ಮಗನ ಲಾಕಪ್ ಡೆತ್ ಆರೋಪಿಗಳಾದ 9 ಪೊಲೀಸ್ ಅಧಿಕಾರಿಗಳಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ. 2020ರಲ್ಲಿ ಶಾಂತಕುಲಂ ಜೈಲಿನಲ್ಲಿ ಮೃತಪಟ್ಟ ಜಯರಾಜ್ ಮತ್ತು ಬೆನ್ನಿಕ್ಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಪೊಲೀಸರು (ಸಂಗ್ರಹ ಚಿತ್ರ) -
ಚೆನ್ನೈ, ಏ. 6: ತಮಿಳುನಾಡು ಸೋಮವಾರ (ಏಪ್ರಿಲ್ 6) ಅಪರೂಪದ ತೀರ್ಪೊಂದಕ್ಕೆ ಸಾಕ್ಷಿಯಾಯಿತು. ತಂದೆ-ಮಗ ಲಾಕಪ್‌ನಲ್ಲೇ ಮೃತಪಟ್ಟ ಪ್ರಕರಣದ ಆರೋಪಿಗಳಾದ 9 ಪೊಲೀಸ್ ಅಧಿಕಾರಿಗಳಿಗೆ ಮಧುರೈ ನ್ಯಾಯಾಲಯ (Madurai Court) ಮರಣದಂಡನೆ ಶಿಕ್ಷೆ ಪ್ರಕಟಿಸಿತು. 2020ರಲ್ಲಿ ತೂತ್ತುಕುಡಿ ಜೆಲ್ಲೆಯ ಶಾಂತಕುಲಂ ಜೈಲಿನಲ್ಲಿ ಮೃತಪಟ್ಟ ಜಯರಾಜ್ ಮತ್ತು ಬೆನ್ನಿಕ್ಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿತು. ಇಷ್ಟೊಂದು ಪೊಲೀಸ್ ಅಧಿಕಾರಿಗಳಿಗೆ ಏಕಕಾಲಕ್ಕೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿರುವ ಅಪರೂಪದ ತೀರ್ಪು ಇದಾಗಿದ್ದು, ಸದ್ಯ ದೇಶದ ಗಮನ ಸೆಳೆದಿದೆ.
ನ್ಯಾಯಮೂರ್ತಿ ಜಿ. ಮುತ್ತುಕುಮಾರನ್ ಈ ತೀರ್ಪು ದೇಶದ ಇತಿಹಾಸದಲ್ಲೇ ಅಪರೂಪ ಎಂದು ಬಣ್ಣಿಸಿದರು. ʼʼಕಾನೂನು ಕಾಪಾಡಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿದ್ದಾರೆ. ತಂದೆ-ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಜಯರಾಜ್ ಮತ್ತು ಬೆನ್ನಿಕ್ಸ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲದಿದ್ದರೂ ಪೊಲೀಸರು ಹಿಂಸೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ 1.40 ಕೋಟಿ ರುಪಾಯಿ ಪರಿಹಾರ ನೀಡುವಂತೆಯೂ ಅಪರಾಧಿಗಳಿಗೆ ಸೂಚಿಸಲಾಗಿದೆʼʼ ಎಂದು ಹೇಳಿದರು.
9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ಪ್ರಕಟ:
The best verdict for most atrocious custodial deaths. Common man knows something can be trusted in the system.
— Dr. Mahesh Banda (@DrMaheshBanda) April 6, 2026
Thanks to courts! https://t.co/JpC9AC9X0U
6 ವರ್ಷಗಳ ಬಳಿಕ ತೀರ್ಪು ಪ್ರಕಟ
ಘಟನೆ ನಡೆದು ಸುಮಾರು 6 ವರ್ಷಗಳ ಬಳಿಕ ತೀರ್ಪು ಪ್ರಕಟಕೊಂಡಿದೆ. ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದಾಗಲೂ ತಂದೆ-ಮಗ ರಾತ್ರಿ 9 ಗಂಟೆ ತನಕ ಅಂಗಡಿ ತೆರೆದಿದ್ದರು ಎಂದು ಆರೋಪಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಒಬಿಸಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?
ಘಟನೆ ಹಿನ್ನೆಲೆ
2020ರ ಜೂನ್ 19ರಂದು ಶಾಂತಕುಲಮ್ ಪೊಲೀಸ್ ಸ್ಟೇಷನ್‌ಗೆ ತಂದೆ-ಮಗನನ್ನು ಕರೆ ತರಲಾಯಿತು. ಜೈಲಿನಲ್ಲಿ ಇಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಗಂಭೀರ ಗಾಯಗೊಂಡಿದ್ದ ಬೆನ್ನಿಕ್ಸ್ ಜೂನ್ 22ರಂದು ಮತ್ತು ಜಯರಾಜ್ ಜೂನ್ 23ರಂದು ಮೃತಪಟ್ಟರು. ಬಳಿಕ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತು. ಜನಾಕ್ರೋಶ ತೀವ್ರಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತು. 10 ಪೊಲೀಸರ ಅಧಿಕಾರಿಗಳಾದ ಇನ್ಸ್‌ಪೆಕ್ಟರ್ ಎಸ್. ಶ್ರೀಧರ್, ಸಬ್-ಇನ್ಸ್‌ಪೆಕ್ಟರ್ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್ಸ್‌ಟೇಬಲ್ ಎಸ್. ಮುರುಗನ್ ಮತ್ತು ಎ. ಸಾಮಿದುರೈ, ಕಾನ್ಸ್‌ಟೇಬಲ್ ಎಂ. ಮುತ್ತುರಾಜ್, ಎಸ್. ಚೆಲ್ಲದುರೈ, ಎಕ್ಸ್. ಥಾಮಸ್ ಫ್ರಾನ್ಸಿಸ್, ಎಸ್. ವೆಲ್ಲಿಮುತ್ತು ಮತ್ತು ಸ್ಪೆಷಲ್ ಸಬ್-ಇನ್ಸ್‌ಪೆಕ್ಟರ್ ಪೌಲ್‌ದುರೈ ವಿರುದ್ಧ ವಿವಿಧ ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಲಾಯಿತು. ಈ ಪೈಕಿ ಕೋವಿಡ್ ಬಾಧಿಸಿ ಪೌಲ್‌ದುರೈ ಮೃತಪಟ್ಟರು.
ಸೋಮವಾರ ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿ, ʼʼಜಯರಾಜ್ ಮತ್ತು ಬೆನ್ನಿಕ್ಸ್ ದೇಹದಲ್ಲಿ ಗಂಭೀರ ಗಾಯ ಕಂಡು ಬಂದಿದ್ದು, ಇದೇ ಕಾರಣದಿಂದ ಅವರು ಮೃತಪಟ್ಟಿದ್ದಾರೆʼʼ ಎಂದು ಹೇಳಿದರು.
ಲೈವ್‌ಲಾ ವೆಬ್‌ಸೈಟ್ ಪ್ರಕಾರ, ತಂದೆ-ಮಗ ಸ್ವಯಂ ಗಾಯ ಮಾಡಿಕೊಂಡಿದ್ದಾರೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳು ಗಾಯಗಳು ಪುನರಾವರ್ತಿತ ಹಲ್ಲೆಯ ಪರಿಣಾಮದಿಂದ ಕಂಡು ಬಂದಿದೆ ಎನ್ನುವುದನ್ನು ಎತ್ತಿ ಹಿಡಿಯಿತು. ಆ ಮೂಲಕ ಇದು ಕೊಲೆ ಎನ್ನುವುದು ಸಾಬೀತಾಗಿದ್ದು, ಕಾರಣರಾದ ಎಲ್ಲ 9 ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿತು.
ಧರ್ಮಾಂತರವಾದರೆ ಎಸ್‌ಸಿ ಹಕ್ಕು ಅನ್ವಯವಾಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸುಳ್ಳು ಆರೋಪ
ಶಾಂತಕುಲಂ ಪೊಲೀಸ್ ಠಾಣೆಗೆ ಕರೆತಂದು ತಂದೆ-ಮಗನ ಮೇಲೆ ರಾತ್ರಿಯಿಡಿ ಅಮಾನುಷವಾಗಿ ಹಲ್ಲೆ ನಡೆಸಿರುವ ಕುರುಹಾಗಿ ಮೇಜು, ಲಾಠಿಗಳ ಮೇಲೆ ರಕ್ತದ ಕಲೆಗಳಿದ್ದವು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು. ಜತೆಗೆ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಅಂಗಡಿ ತೆರೆದಿತ್ತು ಎನ್ನುವ ಆರೋಪ ಸುಳ್ಳು ಎನ್ನುವುದೂ ಸಾಬೀತಾಗಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.