ಧರ್ಮಾಂತರವಾದರೆ ಎಸ್‌ಸಿ ಹಕ್ಕು ಅನ್ವಯವಾಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Supreme Court: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರವಾದವರು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜಾತಿ ಪ್ರಮಾಣಪತ್ರ ಇದ್ದರೂ ಹಕ್ಕು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -
ನವದೆಹಲಿ, ಮಾ. 24: ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮಗಳನ್ನು ಬಿಟ್ಟು ಇತರ ಧರ್ಮಗಳಿಗೆ ಮತಾಂತರವಾದ (Religious Conversion) ವ್ಯಕ್ತಿಗಳು ಪರಿಶಿಷ್ಟ ಜಾತಿ (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ. ಈ ಕುರಿತು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಾಲಯದ ಪ್ರಕಾರ, 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶದ ಉಪನಿಯಮ 3 ಪ್ರಕಾರ, ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮಗಳನ್ನು ಅನುಸರಿಸುವವರಿಗೆ ಮಾತ್ರ ಎಸ್‌ಸಿ ಸ್ಥಾನಮಾನ ಅನ್ವಯವಾಗುತ್ತದೆ. ಇತರ ಧರ್ಮಗಳಿಗೆ ಮತಾಂತರವಾದ ತಕ್ಷಣವೇ ಆ ವ್ಯಕ್ತಿ ಎಸ್‌ಸಿ ಹಕ್ಕು ಕಳೆದುಕೊಳ್ಳುತ್ತಾನೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ, “ಒಬ್ಬ ವ್ಯಕ್ತಿ ಬೇರೆ ಧರ್ಮವನ್ನು ಅನುಸರಿಸುತ್ತಾ, ಒಂದೇ ಸಮಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಇಂತಹವರಿಗೆ ಮೀಸಲಾತಿ, ಸೌಲಭ್ಯ ಅಥವಾ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದೆ.
ಧರ್ಮಾಂತರದ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು:
The Supreme Court of India ruled that a person will not be eligible for Scheduled Caste (SC) status after religious conversion to a faith other than Hinduism, Sikhism, or Buddhism.
— IANS (@ians_india) March 24, 2026
Upholding the Andhra Pradesh High Court order, the court said individuals who convert to… pic.twitter.com/tutBA3vdY6
ಪ್ರಕರಣದ ಹಿನ್ನೆಲೆ
ಈ ಪ್ರಕರಣದಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ, ತನ್ನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯ್ದೆಯಡಿ ದೂರು ದಾಖಲಿಸಿದ್ದ. ಆದರೆ ಆರೋಪಿಗಳು, “ಕ್ರೈಸ್ತ ಧರ್ಮಕ್ಕೆ ಮತಾಂತರವಾದ ವ್ಯಕ್ತಿಗೆ ಈ ಹಕ್ಕು ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.
ಆಂಧ್ರ ಪ್ರದೇಶ ಹೈಕೋರ್ಟ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ಹೇಳಿ ಪ್ರಕರಣವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ: ಡಿಜಿಟಲ್ ಬಳಕೆ ಕರಡು ನೀತಿ ಬಿಡುಗಡೆ
ಸುಪ್ರೀಂ ಕೋರ್ಟ್ ಅಭಿಪ್ರಾಯ
ನ್ಯಾಯಾಲಯ ಹೊರಡಿಸಿದ ಆದೇಶದ ಪ್ರಕಾರ, ಸಂಬಂಧಿತ ವ್ಯಕ್ತಿ ತನ್ನ ಮೂಲ ಧರ್ಮಕ್ಕೆ ಮರಳದೆ, ದೀರ್ಘಕಾಲದಿಂದ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದಾನೆ. “ಪಾಸ್ಟರ್ ಆಗಿ ಸೇವೆ ಸಲ್ಲಿಸಿರುವುದು ಹಾಗೂ ನಿಯಮಿತವಾಗಿ ಪ್ರಾರ್ಥನೆಗಳನ್ನು ನಡೆಸಿರುವುದು ಅವನು ಕ್ರೈಸ್ತನೆಂಬುದನ್ನು ದೃಢಪಡಿಸುತ್ತದೆ” ಎಂದು ಹೇಳಿದೆ.
ಜಾತಿ ಪ್ರಮಾಣಪತ್ರದ ಬಗ್ಗೆ ತೀರ್ಪು
ವ್ಯಕ್ತಿಯ ಬಳಿ ಜಾತಿ ಪ್ರಮಾಣಪತ್ರ ಇರುವುದರಿಂದ ಹಕ್ಕು ಸಿಗಬೇಕು ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. “ಪ್ರಮಾಣಪತ್ರ ರದ್ದುಪಡಿಸದಿದ್ದರೂ, ಕಾನೂನುಬದ್ಧ ಹಕ್ಕು ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಅದು ಪ್ರತ್ಯೇಕವಾಗಿ ಪರಿಶೀಲಿಸಬೇಕಾದ ವಿಷಯ” ಎಂದು ಸ್ಪಷ್ಟಪಡಿಸಿದೆ.
ಮುಖ್ಯ ಅಂಶಗಳು
- ಧರ್ಮಾಂತರವಾದ ಕ್ಷಣದಿಂದಲೇ ಎಸ್‌ಸಿ ಸ್ಥಾನಮಾನ ಕಳೆದುಹೋಗುತ್ತದೆ.
- ಕ್ರೈಸ್ತ ಅಥವಾ ಇತರ ಧರ್ಮಸ್ಥರಿಗೆ ಎಸ್‌ಸಿ ಕಾಯ್ದೆಯ ರಕ್ಷಣೆ ಅನ್ವಯಿಸುವುದಿಲ್ಲ
- ಜಾತಿ ಪ್ರಮಾಣಪತ್ರ ಇದ್ದರೂ ಹಕ್ಕು ಸಿಗುವುದಿಲ್ಲ.
- 1950ರ ಸಂವಿಧಾನ ಆದೇಶದಲ್ಲಿ ಈ ನಿಯಮ ಸ್ಪಷ್ಟವಾಗಿದೆ.