ಮುಂಬೈ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ; ತಪ್ಪಿದ ಭಾರಿ ದುರಂತ
ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು ಡಿಕ್ಕಿ ಹೊಡೆದಿದ್ದು, ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಎರಡೂ ವಿಮಾನಗಳ ರೆಕ್ಕೆ ಪರಸ್ಪರ ತಾಗಿದ್ದು, ಯಾವುದೇ ಅನಾಹುತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ನಡುವೆ ಡಿಕ್ಕಿ -
ಮುಂಬೈ, ಫೆ. 3: ಕಳೆದ ವರ್ಷ ಜೂನ್‌ನಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ 260 ಮಂದಿ ಬಲಿಯಾದ ಘಟನೆ ಇನ್ನು ಮಾಸಿಲ್ಲ. ಅದರ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ (Air India) ಮತ್ತು ಇಂಡಿಗೋ (IndiGo) ವಿಮಾನಗಳು ಡಿಕ್ಕಿ ಹೊಡೆದಿದ್ದು, ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಎರಡೂ ವಿಮಾನಗಳ ರೆಕ್ಕೆ ಪರಸ್ಪರ ತಾಗಿದ್ದು, ಯಾವುದೇ ಅನಾಹುತವಾಗಿಲ್ಲ. ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆ ಕೆಲಕ್ಷಣಗಳ ಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಮುಂಬೈ- ಕೊಯಮತ್ತೂರು ಮಧ್ಯೆ ಸಂಚರಿಸುವ ಏರ್ ಇಂಡಿಯಾದ AI 2732 ವಿಮಾನ ಮತ್ತು ಹೈದರಾಬಾದ್-ಮುಂಬೈ ನಡುವೆ ಓಡಾಡುವ ಇಂಡಿಗೋ ಸಂಸ್ಥೆಯ 6E 791 ವಿಮಾನದ ರೆಕ್ಕೆ ಪರಸ್ಪರ ತಾಗಿವೆ ಎಂದು ಮೂಲಗಳು ತಿಳಿಸಿವೆ.
ʼʼಮಂಗಳವಾರ (ಫೆಬ್ರವರಿ 3) ರಾತ್ರಿ ಘಟನೆ ನಡೆದಿದೆ. ವಿಮಾನ ನಿಲ್ದಾಣದ ರನ್‌ವೇಯಲ್ಲಿದ್ದಾಗ ಪ್ಯಾಸೆಂಜರ್ ವಿಮಾನದ ರೆಕ್ಕೆಯ ತುದಿಗಳು ಒಂದಕ್ಕೊಂದು ತಾಕಿದವು. ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಿದ್ದರೆ, ಏರ್ ಇಂಡಿಯಾ ವಿಮಾನ ನಿರ್ಗಮಿಸಲು ಮುಂದಾದಾಗ ರೆಕ್ಕೆಯ ತುದಿಗಳು ಪರಸ್ಪರ ಉಜ್ಜಿದವು. ಯಾರಿಗೂ ಗಾಯವಾಗಿಲ್ಲʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಯಲ್ಲಿ ನಡೆದ ವಿಮಾನ ಅಪಘಾತ:
Mumbai: Ground incident at @CSMIA_Official #mumbaiairport as @airindia 2732 ws taxying from C1 towards M4 fr departure & Indigo arrival flight ws taxing joining B1, right wing tips of both aircraft touched each other. Both d aircraft wr taxying at d time of incident.@NBTMumbai pic.twitter.com/TubgGHa6p5
— Manish Jha (@nbtmanish) February 3, 2026
ಪ್ರಯಾಣಿಕರು ಸೇಫ್
ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು. ಹೀಗಾಗಿ ಅಪಾಯ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ಮಾಹಿತಿ ನೀಡಿದ್ದಾರೆ.
ʼʼಫೆಬ್ರವರಿ 3ರಂದು ಮುಂಬೈನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ AI 2732 ವಿಮಾನವು ಟೇಕ್-ಆಫ್ ಆಗುವ ಮೊದಲು ಟ್ಯಾಕ್ಸಿವೇಯಲ್ಲಿ ನಿಂತಿದ್ದಾಗ ಇಂಡಿಗೋ ವಿಮಾನ ಸಮೀಪಕ್ಕೆ ಬಂತು. ಈ ವೇಳೆ ಎರಡೂ ವಿಮಾನಗಳ ರೆಕ್ಕೆ ತುದಿಗಳು ಪರಸ್ಪರ ಉಜ್ಜಿದವು. ಇದರ ಪರಿಣಾಮವಾಗಿ ನಮ್ಮ ವಿಮಾನದ ರೆಕ್ಕೆ ತುದಿಗೆ ಹಾನಿಯಾಗಿದೆ" ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ
"ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ತಾಂತ್ರಿಕ ತಪಾಸಣೆಗಾಗಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಕಾರ್ಯ ನಿರ್ವಹಿಸಲಾಗುತ್ತಿದೆʼʼ ಎಂದು ಹೇಳಿದೆ.
ಇತ್ತ ಇಂಡಿಗೋ ವಿಮಾನಯಾನ ಸಂಸ್ಥೆ ಕೂಡ ಘಟನೆಯನ್ನು ದೃಢಪಡಿಸಿದೆ. ವಿಮಾನವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದಿದೆ. "ಸಂಬಂಧಿತ ಅಧಿಕಾರಿಗಳಿಗೆ ಘಟನೆ ಬಗ್ಗೆ ತಕ್ಷಣ ಮಾಹಿತಿ ನೀಡಲಾಯಿತು. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆ ನಮ್ಮ ಆದ್ಯತೆ" ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರ ವಿವರ ಗೊತ್ತಾಗಿಲ್ಲ
ಪಿಟಿಐ ವರದಿಯ ಪ್ರಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತಂಡವು ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಎರಡೂ ವಿಮಾನಗಳಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.