ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಡಮಾನ್ ಸಮುದ್ರದಲ್ಲಿ ಬೃಹತ್‌ ಪ್ರಮಾಣದ ನೈಸರ್ಗಿಕ ಅನಿಲ ಪತ್ತೆ; ಭಾರತದ ಇಂಧನ ಕ್ಷೇತ್ರಕ್ಕೆ ಭಾರಿ ಬಲ

ಅಂಡಮಾನ್ ಸಮುದ್ರದ ಶ್ರೀ ವಿಜಯಪುರಂ-3 ಅನ್ವೇಷಣಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಆಯಿಲ್ ಇಂಡಿಯಾ ನಡೆಸಿದ ಪರೀಕ್ಷೆಯಲ್ಲಿ ಅನಿಲದ ಅಸ್ತಿತ್ವ ದೃಢಪಟ್ಟಿದ್ದು, ಇದು ಅಂಡಮಾನ್ ಬೇಸಿನ್‌ನಲ್ಲಿ ಸತತ ಎರಡನೇ ಯಶಸ್ವಿ ಪತ್ತೆಯಾಗಿದೆ. ಈ ಬೆಳವಣಿಗೆ ಭಾರತದ ಇಂಧನ ಭದ್ರತೆ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸುವ ಪ್ರಯತ್ನಗಳಿಗೆ ಮಹತ್ವದ ಉತ್ತೇಜನ ನೀಡಲಿದೆ.

ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲ ಪತ್ತೆ

ಎಐ ರಚಿತ ಚಿತ್ರ -

Profile
Sushmitha Jain Jun 6, 2026 6:12 PM

ನವದೆಹಲಿ, ಜೂ. 6: ಭಾರತದ ಇಂಧನ ಕ್ಷೇತ್ರಕ್ಕೆ ಮಹತ್ವದ ಬೆಳವಣಿಗೆಯಾಗಿ ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್‌ ಸಿಂಗ್ ಪುರಿ (Hardeep Singh Puri) ಈ ಮಾಹಿತಿಯನ್ನು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-3 (Sri Vijayapuram-3) ಅನ್ವೇಷಣಾ ಬಾವಿಯಲ್ಲಿ ಈ ಅನಿಲ ನಿಕ್ಷೇಪ ಪತ್ತೆಯಾಗಿದೆ. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಸುಮಾರು 355 ಮೀಟರ್ ಆಳದ ಸಮುದ್ರ ಪ್ರದೇಶದಲ್ಲಿ ಕೊರೆತ ಕಾರ್ಯ ನಡೆಸಿದ್ದು, ಪ್ರಾಥಮಿಕ ಪರೀಕ್ಷೆಗಳಲ್ಲಿ ನೈಸರ್ಗಿಕ ಅನಿಲದ ಅಸ್ತಿತ್ವ ದೃಢಪಟ್ಟಿದೆ.

ಸಚಿವ ಹರ್‌ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣ Xನಲ್ಲಿ ಸಂತಸ ವ್ಯಕ್ತಪಡಿಸಿ, “ಶ್ರೀ ವಿಜಯಪುರಂ-3 ಬಾವಿಯಲ್ಲಿ ನೈಸರ್ಗಿಕ ಅನಿಲದ ಅಸ್ತಿತ್ವ ಪತ್ತೆಯಾಗಿರುವುದು ಭಾರತದ ಸಮುದ್ರ ಅನ್ವೇಷಣಾ ಕಾರ್ಯಕ್ರಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ” ಎಂದು ಹೇಳಿದ್ದಾರೆ.

ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರ ಎಕ್ಸ್‌ ಪೋಸ್ಟ್:



ಮೂರು ಬಾವಿಗಳಲ್ಲಿ ಎರಡರಲ್ಲಿ ಯಶಸ್ಸು

ಪ್ರಸ್ತುತ ಅಂಡಮಾನ್ ಬೇಸಿನ್‌ನಲ್ಲಿ ಆಯಿಲ್ ಇಂಡಿಯಾ ಮೂರು ಅನ್ವೇಷಣಾ ಬಾವಿಗಳನ್ನು ಕೊರೆದಿದ್ದು, ಅವುಗಳಲ್ಲಿ ಎರಡರಲ್ಲಿ ಹೈಡ್ರೋಕಾರ್ಬನ್‌ಗಳ ಅಸ್ತಿತ್ವ ದೃಢಪಟ್ಟಿದೆ. ಇದಕ್ಕೂ ಮುನ್ನ 2025ರಲ್ಲಿ ಶ್ರೀ ವಿಜಯಪುರಂ-2 ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿತ್ತು. ಆ ಅನಿಲದಲ್ಲಿ ಸುಮಾರು 87 ಪ್ರತಿಶತ ಮೀಥೇನ್ ಅಂಶವಿರುವುದು ಪರೀಕ್ಷೆಯಲ್ಲಿ ತಿಳಿದುಬಂದಿತ್ತು.

ಈ ಎರಡು ಸತತ ಯಶಸ್ಸುಗಳು ಅಂಡಮಾನ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ತೈಲ ಮತ್ತು ಅನಿಲ ಸಂಪನ್ಮೂಲಗಳು ಇರಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿವೆ. ತಜ್ಞರ ಪ್ರಕಾರ, ಅಂಡಮಾನ್ ಬೇಸಿನ್ ಭೂವೈಜ್ಞಾನಿಕವಾಗಿ ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾದ ತೈಲ-ಅನಿಲ ಸಮೃದ್ಧ ಪ್ರದೇಶಗಳಿಗೆ ಹೋಲಿಕೆಯಾಗಿದೆ.

5ನೇ ತಲೆಮಾರಿನ ಸು-57 ಫೈಟರ್ ಜೆಟ್ ಭಾರತಕ್ಕಾಗಿ ತಯಾರಿಸಲು ರಷ್ಯಾ ಸಿದ್ದ: ವ್ಲಾಡಿಮಿರ್ ಪುಟಿನ್

ಭಾರತಕ್ಕೆ ಏಕೆ ಮಹತ್ವ?

ಭಾರತ ತನ್ನ ತೈಲ ಮತ್ತು ಅನಿಲ ಅಗತ್ಯಗಳ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಹೊಸ ತೈಲ ಮತ್ತು ಅನಿಲ ನಿಕ್ಷೇಪಗಳು ಪತ್ತೆಯಾಗುವುದರಿಂದ ಆಮದು ಅವಲಂಬನೆ ಕಡಿಮೆಯಾಗಲಿದ್ದು, ಇಂಧನ ಭದ್ರತೆ ಬಲಗೊಳ್ಳಲಿದೆ. ಜತೆಗೆ ದೇಶದ ಆರ್ಥಿಕ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ.

ಮುಂದೇನು?

ಹೊಸದಾಗಿ ಪತ್ತೆಯಾದ ಅನಿಲದ ಗುಣಮಟ್ಟ, ರಾಸಾಯನಿಕ ಸಂಯೋಜನೆ ಮತ್ತು ಶಕ್ತಿಮೌಲ್ಯವನ್ನು ತಿಳಿಯಲು ಆಯಿಲ್ ಇಂಡಿಯಾ ಸಂಸ್ಥೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಿದೆ. ಅನಿಲದ ಮಾದರಿಗಳನ್ನು ಸಂಗ್ರಹಿಸಿ ಐಸೋಟೋಪ್ ಪರೀಕ್ಷೆ ಸೇರಿ ಹಲವು ವೈಜ್ಞಾನಿಕ ವಿಶ್ಲೇಷಣೆಗಳನ್ನು ನಡೆಸಲಾಗುತ್ತದೆ. ಅಂಡಮಾನ್ ಪ್ರದೇಶದಲ್ಲಿ ಇನ್ನಷ್ಟು ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಸರ್ಕಾರ ಹೆಚ್ಚುವರಿ ಅನ್ವೇಷಣಾ ಬಾವಿಗಳ ಕೊರೆತಕ್ಕೆ ಯೋಜನೆ ರೂಪಿಸಿದೆ. ಇದಕ್ಕಾಗಿ ಸುಮಾರು 600 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 3D ಸೀಸ್ಮಿಕ್ ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆ ಕಾರ್ಯವೂ ನಡೆಯುತ್ತಿದೆ.

ಸಮುದ್ರ ಮಂಥನ್ ಮಿಷನ್‌ಗೆ ಉತ್ತೇಜನ

ಈ ಅನಿಲ ಪತ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 'ಸಮುದ್ರ ಮಂಥನ್ ಮಿಷನ್' ಯೋಜನೆಯ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ. ಈ ಯೋಜನೆಯಡಿ ಭಾರತದ ಕಡಲ ತೀರ ಪ್ರದೇಶಗಳಲ್ಲಿ ಆಳ ಸಮುದ್ರ ಮತ್ತು ಅತಿ ಆಳ ಸಮುದ್ರ ಅನ್ವೇಷಣಾ ಕಾರ್ಯಗಳನ್ನು ವಿಸ್ತರಿಸಿ ದೇಶದ ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ.