ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ಯುಎಪಿಎ ಕಾಯ್ದೆಯಡಿ ಉಗ್ರ ರಾಣಾ ಅರೆಸ್ಟ್‌; NIA ಹೇಳಿದ್ದೇನು?

2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಆರೋಪಿ ತಹಾವ್ವುರ್‌ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ಆತನನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ದಿಲ್ಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಉಗ್ರ ನಿಗ್ರಯ ಕಾಯ್ದೆಯಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. "2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರನನ್ನು ಬಂಧಿಸಲು ಹಲವು ವರ್ಷಗಳ ನಿರಂತರ ಮತ್ತು ಸಂಘಟಿತ ಪ್ರಯತ್ನʼʼ ನಡೆಸಲಾಯಿತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಯುಎಪಿಎ ಕಾಯ್ದೆಯಡಿ ಉಗ್ರ ರಾಣಾ ಅರೆಸ್ಟ್‌

ತಹಾವ್ವುರ್‌ ರಾಣಾ.

Profile Ramesh B Apr 10, 2025 8:12 PM

ಹೊಸದಿಲ್ಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ (26/11 Mumbai terror attacks) ಸಂಚುಕೋರ ಆರೋಪಿ ತಹಾವ್ವುರ್‌ ರಾಣಾ (Tahawwur Rana)ನನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ದಿಲ್ಲಿಗೆ ಕರೆತಂದಿದ್ದು, ಯುಎಪಿಎ (UAPA) ಕಾಯ್ದೆಯಡಿ ಬಂಧಿಸಲಾಗಿದೆ. ದಿಲ್ಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಉಗ್ರ ನಿಗ್ರಯ ಕಾಯ್ದೆಯಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಹಾವ್ವುರ್‌ ರಾಣಾ ಬಂದಿಳಿದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ಎನ್ಐಎ ಅಧಿಕಾರಿಗಳು, "2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರನನ್ನು ಬಂಧಿಸಲು ಹಲವು ವರ್ಷಗಳ ನಿರಂತರ ಮತ್ತು ಸಂಘಟಿತ ಪ್ರಯತ್ನʼʼ ನಡೆಸಲಾಯಿತು ಎಂದಿದ್ದಾರೆ.

"ಹಸ್ತಾಂತರದ ಒಪ್ಪಂದದ ಅಡಿಯಲ್ಲಿ ಹಲವು ವರ್ಷಗಳ ಕಾಲ ರಾಣಾನನ್ನು ಅಮೆರಿಕದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಈ ಕ್ರಮವನ್ನು ತಡೆಹಿಡಿಯಲು ರಾಣಾ ನಡೆಸಿದ ಎಲ್ಲ ಕಾನೂನು ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಆತನನ್ನು ಹಸ್ತಾಂತರವಾಯಿತು" ಎಂದು ಎನ್‌ಐಎ ತಿಳಿಸಿದೆ.

ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯವು 2023ರ ಮೇ 16ರಂದು ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶ ಹೊರಡಿಸಿತ್ತು. ನಂತರ ರಾಣಾ ಈ ತೀರ್ಪನ್ನು ತಡೆಹಿಡಿಯುವಂತೆ ಅನೇಕ ಮೊಕದ್ದಮೆಗಳನ್ನು ದಾಖಲಿಸಿದ್ದ. ಕೊನೆಗೆ ಅವೆಲ್ಲವನ್ನೂ ತಿರಸ್ಕರಿಸಲಾಯಿತು. ಅಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯೂ ತಿರಸ್ಕೃತಗೊಂಡಿತ್ತು. ಹೀಗೆ ಕೊನೆಗೂ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.



ಈ ಸುದ್ದಿಯನ್ನೂ ಓದಿ: Tahawwur Rana: 17 ವರ್ಷಗಳ ಶ್ರಮಕ್ಕೆ ಕೊನೆಗೂ ಫಲ; ಭಾರತಕ್ಕೆ ಬಂದಿಳಿದ ತಹಾವ್ವುರ್‌ ರಾಣಾ

ಅಮೆರಿಕದ ಅಧಿಕಾರಿಗಳೊಂದಿಗೆ ಸಮನ್ವಯ

"ಅಮೆರಿಕದ ಡಿಒಜೆ, ಸ್ಕೈ ಮಾರ್ಷಲ್, ಎನ್ಐಎ ಮತ್ತಿತರ ಭಾರತೀಯ ಗುಪ್ತಚರ ಸಂಸ್ಥೆಗಳು,
ನ್ಯಾಶನಲ್‌ ಸೆಕ್ಯುರಿಟಿ ಗಾರ್ಡ್‌ (NSG)ನೊಂದಿಗೆ ಹಸ್ತಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ಭಾರತದ ವಿದೇಶಾಂಗ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯವು ಹಸ್ತಾಂತರ ಪ್ರಕ್ರಿಯೆಯನ್ನು ಯಶಸ್ವಿಯಾಗಿಸಲು ಅಮೆರಿಕದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿತು" ಎಂದು ಎನ್ಎಸ್‌ಜಿ ಹೇಳಿದೆ.

ಯಾರು ಈ ತಹಾವ್ವುರ್‌ ರಾಣಾ?

ತಹಾವ್ವುರ್‌ ಹುಸೇನ್‌ ರಾಣಾ 1961ರ ಜ. 12ರಂದು ಪಾಕಿಸ್ತಾನದ ಪಂಜಾಬ್‌ನ ಚಿಚಾವತ್ನಿಯಲ್ಲಿ ಜನಿಸಿದ್ದು, ಆತ ಕ್ಯಾಡೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ. ಕ್ಯಾಡೆಟ್‌ ಕಾಲೇಜಿನಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಹ-ಸಂಚುಕೋರ ​​ಡೇವಿಡ್ ಹೆಡ್ಲಿ ಜತೆ ನಿಕಟ ಸಂಪರ್ಕ ಬೆಳೆದಿತ್ತು. ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ರಾಣಾ ಪಾಕಿಸ್ತಾನ ಸೇನಾ ವೈದ್ಯಕೀಯ ದಳಕ್ಕೆ ಸೇರಿದ್ದ ಮತ್ತು ಕ್ಯಾಪ್ಟನ್-ಜನರಲ್ ಡ್ಯೂಟಿ ಪ್ರಾಕ್ಟೀಷನರ್ ಆಗಿ ಸೇವೆ ಸಲ್ಲಿಸಿದ. 1997ರಲ್ಲಿ ಮಿಲಿಟರಿಯನ್ನು ತೊರೆದ ಆತ ವೈದ್ಯೆ ಪತ್ನಿಯೊಂದಿಗೆ ಕೆನಡಾಕ್ಕೆ ತೆರಳಿದ್ದ. ರಾಣಾ ಮತ್ತು ಅವರ ಪತ್ನಿ ಇಬ್ಬರೂ 2001ರಲ್ಲಿ ಕೆನಡಾದ ಪೌರತ್ವ ಪಡೆದಿದ್ದರು. 26/11 ದಾಳಿಯನ್ನು ಯೋಜಿಸಲು ಬಳಸಲಾಗುವ ಮುಂಬೈನಲ್ಲಿ ಮುಂಭಾಗದ ಕಚೇರಿಯನ್ನು ಸ್ಥಾಪಿಸಲು ರಾಣಾ ಹೆಡ್ಲಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು 2009ರಲ್ಲಿ ಅಮೆರಿಕದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಇದೀಗ ಹಸ್ತಾಂತರ ಪ್ರಕ್ರಿಯೆ ಪೂರ್ತಿಗೊಂಡಿದೆ.