Apoorva Mukhija: ರಣವೀರ್ ವಿವಾದದ ಬಳಿಕ ಅಪೂರ್ವ ಮುಖಿಜಾಗೆ ಅತ್ಯಾಚಾರ ಬೆದರಿಕೆ; ಗೆಳತಿಯಿಂದ ಆಘಾತಕಾರಿ ಮಾಹಿತಿ
ಜನಪ್ರಿಯ ಹಾಸ್ಯ ಕಾರ್ಯಕ್ರಮ ʻಇಂಡಿಯಾ ಗಾಟ್ ಲ್ಯಾಟೆಂಟ್ʼನಲ್ಲಿ ಇತ್ತೀಚೆಗೆ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ವಿವಾದ ಸೃಷ್ಟಿಸಿದ್ದು, ಈ ಶೋದಲ್ಲಿ ಭಾಗವಹಿಸಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಅಪೂರ್ವ ಮುಖಿಜಾ ಅವರಿಗೆ ಅತ್ಯಾಚಾರ ಮತ್ತು ಕೊಲೆಯ ಬೆದರಿಕೆಗಳು ಬಂದಿವೆ.

ರಿದಾ ತರನಾ ಅವರ ಪೋಸ್ಟ್ ಮತ್ತು ಅಪೂರ್ವ ಮುಖಿಜಾ

ಹೊಸದಿಲ್ಲಿ: ಸಮಯ್ ರೈನಾ (Samay Raina) ಅವರ ಜನಪ್ರಿಯ ಹಾಸ್ಯ ಕಾರ್ಯಕ್ರಮ ʻಇಂಡಿಯಾ ಗಾಟ್ ಲ್ಯಾಟೆಂಟ್ʼ (India’s Got Latent)ನಲ್ಲಿ ಇತ್ತೀಚೆಗೆ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ (Ranveer Allahbadia) ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ವಿವಾದ ಸೃಷ್ಟಿಸಿದ್ದು, ಈ ಶೋದಲ್ಲಿ ಭಾಗವಹಿಸಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಅಪೂರ್ವ ಮುಖಿಜಾ (Apoorva Mukhija) ಅವರಿಗೆ ಅತ್ಯಾಚಾರ ಮತ್ತು ಕೊಲೆಯ ಬೆದರಿಕೆಗಳು ಬಂದಿವೆ. ಮುಖಿಜಾ ಅವರ ಸ್ನೇಹಿತೆ ರಿದಾ ತರನಾ ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದು, ಆನ್‌ಲೈನ್ ಬೆದರಿಕೆಗಳನ್ನು ಖಂಡಿಸಿದ್ದಾರೆ.
ರಿದಾ ತರನಾ ಗೆಳತಿಗೆ ಬಂದ ಬೆದರಿಕೆಯ ಸಂದೇಶವನ್ನು ಬಹಿರಂಗಪಡಿಸಿದ್ದು, ಆ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ʼʼಮಹಿಳೆ ಎನ್ನುವ ಕಾರಣಕ್ಕೇ ಹಲವರು ಮಹಿಳೆಯನ್ನು ದ್ವೇಷಿಸುತ್ತಾರೆ. ಅವಳು ಉಸಿರಾಡಿದರೆ, ಜೀವಿಸಿದರೆ, ಬೆಳವಣಿಗೆ ಹೊಂದಿದರೆ ಸಾಕು ಕಾಲೆಳೆಯಲು ಮುಂದಾಗುತ್ತಾರೆ. ಅವಳು ಮಹಿಳೆ ಎಂಬ ಅಂಶವೇ ಯಾವಾಗಲೂ ಅವಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನೀವು ನಿರಂತರವಾಗಿ ಬೆದರಿಕೆಗೆ ಒಳಗಾದಾಗ ಹೇಗೆ ಸುರಕ್ಷಿತವಾಗಿರುತ್ತೀರಿ?ʼʼ ಎಂದು ಪ್ರಶ್ನಿಸಿದ್ದಾರೆ.
ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಪಿಸೋಡ್ ಅನ್ನು ಯುಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ. 2024ರ ಜೂನ್‌ನಲ್ಲಿ ಆರಂಭವಾದ ʻಇಂಡಿಯಾ ಗಾಟ್ ಲ್ಯಾಟೆಂಟ್ʼ ಇದುವರೆಗೆ 18 ಸಂಚಿಕೆಗಳನ್ನು ಪ್ರಸಾರ ಮಾಡಿದೆ.
ಏನಿದು ವಿವಾದ?
ಸಮಯ್ ರೈನಾ ನಡೆಸಿಕೊಡುವ ಇಂಡಿಯಾ ಗಾಟ್ ಲ್ಯಾಟೆಂಟ್ ಶೋನಲ್ಲಿ ರಣವೀರ್ ಪೋಷಕರ ಲೈಂಗಿಕತೆಯ ಕುರಿತಾಗಿ ಅಶ್ಲೀಲವಾಗಿ ಮಾತನಾಡಿದ್ದರು. ಈ ಶೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡ ಬಳಿಕ ಎಲ್ಲರಿಗೂ ಆಘಾತ ವ್ಯಕ್ತಪಡಿಸಿದ್ದರು. ಅದರಲ್ಲಿ ರಣವೀರ್, ʼʼನಿಮ್ಮ ತಂದೆ-ತಾಯಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತಲೇ ದಿನ ದೂಡುತ್ತೀರಾ? ಅಥವಾ ನೀವು ಕೂಡ ಅವರೊಂದಿಗೆ ಸೇರಿಕೊಳ್ಳಲು ಬಯಸುತ್ತೀರಾ?ʼʼ ಎಂದು ಅಸಹ್ಯವಾಗಿ ಮಾತನಾಡಿದ್ದರು.
ಇದಾದ ಬಳಿಕ ಅವರ ವಿರುದ್ದ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ದೂರು ಕೂಡ ದಾಖಲಾಗಿದ್ದವು. ರಣವೀರ್ ಮಾತ್ರವಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಯ್ ರೈನಾ, ಆಶಿಶ್ ಚಂಚ್ಲಾನಿ, ಅಪೂರ್ವ ಮುಖಿಜಾ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಅಪೂರ್ವ ಹೇಳಿಕೆ ದಾಖಲಿಸಿದ ಮುಂಬೈ ಪೊಲೀಸರು
ವಿವಾದಾತ್ಮಕ ಹೇಳಿಕೆ ವಿಚಾರದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಮುಂಬೈ ಪೊಲೀಸರು ಫೆ. 12ರಂದು ಅಪೂರ್ವ ಅವರ ಹೇಳಿಕೆಯನ್ನು ದಾಖಲಿಸಿದ್ದರು. ಮತ್ತೊಂದೆಡೆ ಮುಂದಿನ ತಿಂಗಳು ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡಮಿ (IIFA)ಯ ಪ್ರಶಸ್ತಿ ಪ್ರಧಾನ ಸಮಾರಂಭದ ಅಧಿಕೃತ ರಾಯಭಾರಿಗಳ ಪಟ್ಟಿಯಿಂದ ಮುಖಿಜಾ ಅವರನ್ನು ತೆಗೆದು ಹಾಕಲಾಗಿದೆ.
ಈ ಸುದ್ದಿಯನ್ನೂ ಓದಿ: India's got latent row: ರಣವೀರ್ ಅಲಹಾಬಾದಿಯಾ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು!
ಯಾರು ಈ ಅಪೂರ್ವ?
ರೆಬೆಲ್ ಕಿಡ್ ಎಂದೂ ಕರೆಯಲ್ಪಡುವ ಅಪೂರ್ವ ಮುಖಿಜಾ ಅವರು ಕೋವಿಡ್ -19ರ ಲಾಕ್‌ಡೌನ್ ಸಮಯದಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ವಿಡಿಯೊಗಳ ಮೂಲಕ ಜನಪ್ರಿಯರಾಗಿದ್ದಾರೆ. ಇವರು ರಾಜಸ್ಥಾನದ ಜೈಪುರ ಮತ್ತು ದಿಲ್ಲಿಯಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ.