ಅರುಣಾಚಲ ಸಿಎಂ ಕುಟುಂಬಕ್ಕೆ ಸುತ್ತಿಕೊಂಡ 1,270 ಕೋಟಿ ರುಪಾಯಿ ಗುತ್ತಿಗೆ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಸರ್ಕಾರಿ ಗುತ್ತಿಗೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸಲು ಸೂಚಿಸಿದೆ. 2015ರಿಂದ 2025ರವರೆಗಿನ ಟೆಂಡರ್ ಹಂಚಿಕೆ, ಕಾಮಗಾರಿಗಳ ಅನುಷ್ಠಾನ ಮತ್ತು ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲು ನ್ಯಾಯಾಲಯ ಆದೇಶಿಸಿದೆ. ಸುಮಾರು 1,270 ಕೋಟಿ ರುಪಾಯಿ ಮೌಲ್ಯದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು (ಸಂಗ್ರಹ ಚಿತ್ರ) -
ನವದೆಹಲಿ, ಏ. 6: ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪೆಮಾ ಖಂಡು (Pema Khandu) ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸರ್ಕಾರಿ ಗುತ್ತಿಗೆಗಳನ್ನು ನೀಡಲಾದ ಹಗರಣದ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ (Supreme Court) ಕೇಂದ್ರೀಯ ತನಿಖಾ ದಳಕ್ಕೆ (Central Bureau of Investigation) ನಿರ್ದೇಶನ ನೀಡಿದೆ.
'ಸೇವ್ ಮೊನ್ ರೀಜನ್ ಫೆಡರೇಶನ್' ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, 2015ರ ನವೆಂಬರ್‌ನಿಂದ 2025ರ ನಡುವೆ ನಡೆದ ಸಾರ್ವಜನಿಕ ಕಾಮಗಾರಿ ಗುತ್ತಿಗೆಗಳ ಹಂಚಿಕೆ ಮತ್ತು ಅವುಗಳ ಅನುಷ್ಠಾನವನ್ನು ಪರಿಶೀಲಿಸುವಂತೆ ಸಿಬಿಐಗೆ ತಿಳಿಸಿದೆ. ಮುಖ್ಯಮಂತ್ರಿಯ ಪತ್ನಿ, ತಾಯಿ ಮತ್ತು ಸೋದರಸಬಂಧಿ ಸೇರಿದಂತೆ ಅವರ ನಿಕಟ ಸಂಬಂಧಿಗಳಿಗೆ ಸೇರಿದ ಸಂಸ್ಥೆಗಳಿಗೆ ನಿಯಮಬಾಹಿರವಾಗಿ ಟೆಂಡರ್‌ಗಳನ್ನು ನೀಡಲಾಗಿದೆ ಎಂಬುದು ಅರ್ಜಿದಾರರ ಪ್ರಮುಖ ಆರೋಪ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕುಟುಂಬದ ವಿರುದ್ಧ ತನಿಖೆಗೆ ಆದೇಶ:
BREAKING SC orders CBI probe into Arunachal CM Pema Khandu & family’s contracts worth thousands of crores
— @Moini (@moini_565) April 6, 2026
The govt must submit all documents; CBI to report in 16 weeks.
Transparency or corruption? The clock is ticking#47YearsOfNationFirst #RCBvsCSK Delhi High Court President of… pic.twitter.com/zwTmvq3sex
ನ್ಯಾಯಾಲಯದ ನಿರ್ದೇಶನ
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, "ಸಿಬಿಐ ಈ ಟೆಂಡರ್‌ಗಳ ಹಂಚಿಕೆ, ಯೋಜನೆಗಳ ಅನುಷ್ಠಾನ ಮತ್ತು ಪಾವತಿಗಳ ಹರಿವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು" ಎಂದು ಹೇಳಿದೆ. ತನಿಖಾ ಸಂಸ್ಥೆಯು ಕೇವಲ ನಿಗದಿತ ಅವಧಿಗೆ ಸೀಮಿತವಾಗದೆ, ಅಗತ್ಯವಿದ್ದರೆ ಆ ಅವಧಿಯ ಹೊರಗಿನ ವಹಿವಾಟುಗಳನ್ನು ಸಹ ತನಿಖೆ ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು 16 ವಾರಗಳಲ್ಲಿ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಲಾಗಿದೆ.
"ನಿಮ್ಮ ಬ್ಲೌಸ್ ಹರಿದುಕೊಳ್ಳಿ"; ಚುನಾವಣಾ ಪ್ರತಿಸ್ಪರ್ಧಿಗಳನ್ನು ಮಣಿಸಲು ಮಹಿಳೆಯರನ್ನು ಬಳಸಿ ಎಂದ ಕಾಂಗ್ರೆಸ್ ನಾಯಕ!
ಭ್ರಷ್ಟಾಚಾರದ ಗಂಭೀರ ಆರೋಪ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸುಮಾರು 1,270 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಗಳನ್ನು ಯಾವುದೇ ನಿಯಮ ಪಾಲಿಸದೆ, ಹೆಚ್ಚಿನ ದರದಲ್ಲಿ ಸಿಎಂ ಕುಟುಂಬದವರಿಗೆ ನೀಡಲಾಗಿದೆ ಎಂದರು. ಪೆಮಾ ಖಂಡು ಅವರ ಪತ್ನಿಯ ಒಡೆತನದ 'ಮೆಸರ್ಸ್ ಬ್ರ್ಯಾಂಡ್ ಈಗಲ್ಸ್' ಮತ್ತು ತವಾಂಗ್ ಶಾಸಕ ಹಾಗೂ ಸಿಎಂ ಸೋದರಸಬಂಧಿ ತ್ಸೆರಿಂಗ್ ತಾಶಿ ಅವರ ಒಡೆತನದ 'ಮೆಸರ್ಸ್ ಅಲಯನ್ಸ್ ಟ್ರೇಡಿಂಗ್ ಕೋ' ಸಂಸ್ಥೆಗಳು ಈ ಅಕ್ರಮದ ಪ್ರಮುಖ ಫಲಾನುಭವಿಗಳು ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ.
ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಅಂತಿಮ ತೀರ್ಪು ನೀಡಿಲ್ಲವಾದರೂ, ಆಳವಾದ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಈ ತನಿಖೆಯು ಅರುಣಾಚಲ ಪ್ರದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಕುಟುಂಬದ ವಿರುದ್ಧದ ಈ ತನಿಖೆಯ ವರದಿಯು ಮುಂದಿನ ದಿನಗಳಲ್ಲಿ ಸರ್ಕಾರದ ನೈತಿಕತೆಗೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.