Sheikh Abdul Rashid: ಜೈಲಿನಲ್ಲಿರುವ ಸಂಸದ ಎಂಜಿನಿಯರ್ ರಶೀದ್ ಮೇಲೆ ತೃತೀಯ ಲಿಂಗಿಗಳಿಂದ ಅಟ್ಯಾಕ್!
ಕಾನೂನುಬಾಹಿರ ಚಟುವಟಿಕೆ ಆರೋಪದಲ್ಲಿ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಸಂಸದ ಶೇಖ್ ಅಬ್ದುಲ್ ರಶೀದ್ (MP Sheikh Abdul Rashid) ಮೇಲೆ ತಿಹಾರ್ ಜೈಲಿನಲ್ಲಿ ಟ್ರಾನ್ಸ್‌ಜೆಂಡರ್ ಕೈದಿಗಳುಹಲ್ಲೆ ನಡೆಸಿದ್ದಾರೆ. ಆದರೆ ಇದು ಕೊಲೆ ಪಿತೂರಿ ಅಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

-

ತಿಹಾರ್: ಎಂಜಿನಿಯರ್ ರಶೀದ್ (Engineer Rashid) ಎಂದೇ ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರದ ಸಂಸದ ಶೇಖ್ ಅಬ್ದುಲ್ ರಶೀದ್ ( MP Sheikh Abdul Rashid) ಮೇಲೆ ತಿಹಾರ್ ಜೈಲಿನಲ್ಲಿ ( Tihar Jail) ಟ್ರಾನ್ಸ್‌ಜೆಂಡರ್ ಕೈದಿಗಳು (Transgender prisoners) ಹಲ್ಲೆ ನಡೆಸಿದ್ದಾರೆ ಎಂದು ಅವಾಮಿ ಇತ್ತೆಹಾದ್ ಪಕ್ಷ (Awami Ittehad Party) ಹೇಳಿದೆ. ಬಾರಾಮುಲ್ಲಾ ಸಂಸದ (Baramulla MP) ಅಬ್ದುಲ್ ರಶೀದ್ ಪ್ರಸ್ತುತ ಮೂವರು ಟ್ರಾನ್ಸ್‌ಜೆಂಡರ್ ಕೈದಿಗಳೊಂದಿಗೆ ತಿಹಾರ್ ಜೈಲಿನ ಸಂಖ್ಯೆ 3ರ ಕೊಠಡಿಯಲ್ಲಿದ್ದಾರೆ. ಇಲ್ಲಿ ಟ್ರಾನ್ಸ್‌ಜೆಂಡರ್‌ಗಳ ಗುಂಪೊಂದು ಅವರ ಮೇಲೆ ಗೇಟ್ ಎಸೆದಿದೆ ಎಂದು ಪಕ್ಷ ತಿಳಿಸಿದೆ.
ಟ್ರಾನ್ಸ್‌ಜೆಂಡರ್ ಕೈದಿಗಳು ನಡೆಸಿದ ಹಲ್ಲೆಯಿಂದ ರಶೀದ್ ಅವರ ಪ್ರಾಣಕ್ಕೆ ಹಾನಿಯಾಗುತ್ತಿತ್ತು ಎಂದು ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ಪ್ರಚೋದಿತ ದಾಳಿ. ಗಲಭೆ ವಾತಾವರಣ ಉಂಟು ಮಾಡಲು ನಡೆಸಿರುವುದು. ರಶೀದ್ ಅವರಿಗೆ ಇದರಿಂದ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವಾಮಿ ಇತ್ತೆಹಾದ್ ಪಕ್ಷ ಹೇಳಿದೆ. ಇದು ಕೊಲೆ ಪಿತೂರಿ ಅಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೊಲೆ ಪಿತೂರಿಯ ವರದಿಗಳನ್ನು ಆಧಾರರಹಿತ ಎಂದು ಹೇಳಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಶೀದ್ ಅವರ ಮಗ ಅಬ್ರಾರ್ ರಶೀದ್, ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಅವಾಮಿ ಇತ್ತೆಹಾದ್ ಪಕ್ಷವು ಎಂಜಿನಿಯರ್ ರಶೀದ್ ಮೇಲಿನ ದಾಳಿಗೆ ಸಂಬಂಧಿಸಿ ಇಂದು ತಮ್ಮ ವಕೀಲರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಜೈಲಿನೊಳಗೆ ತಂದೆಯ ಮೇಲೆ ಭೀಕರ ದಾಳಿ ನಡೆಸಲಾಗಿದೆ ಎಂದು ಹೇಳಿರುವ ಅವರು, ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಮಾತ್ರವಲ್ಲದೆ ಪ್ರಸ್ತುತ ತಿಹಾರ್ ಜೈಲಿನಲ್ಲಿರುವವರಿಗೂ ತುಂಬಾ ಆಘಾತಕಾರಿಯಾಗಿದೆ ಎಂದು ಅಬ್ರಾರ್ ಹೇಳಿದ್ದಾರೆ.
ತಂದೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದ ಅವರು, ಈ ದಾಳಿಯನ್ನು ಖಂಡಿಸುತ್ತೇವೆ. ಜೈಲಿನಲ್ಲಿರುವ ಕಾಶ್ಮೀರಿ ಕೈದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ನಾವು ಪ್ರಧಾನಿ, ಗೃಹ ಸಚಿವರು ಮತ್ತು ಜೈಲು ಅಧಿಕಾರಿಗಳನ್ನು ವಿನಂತಿಸುತ್ತೇವೆ. ಅವರು ಕೇವಲ ರಾಜಕೀಯ ಕೈದಿಯಲ್ಲ, ಉತ್ತರ ಕಾಶ್ಮೀರದ ಸಂಸತ್ ಸದಸ್ಯರೂ ಆಗಿದ್ದಾರೆ. ಆದ್ದರಿಂದ ಅವರ ಸುರಕ್ಷತೆ ಅಗತ್ಯ ಎಂದು ಅಬ್ರಾರ್ ತಿಳಿಸಿದರು.
ಎಂಜಿನಿಯರ್ ರಶೀದ್ ಬಂಧನ ಏಕೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಎಂಜಿನಿಯರ್ ರಶೀದ್ ಅವರನ್ನು 2019ರಲ್ಲಿ ಬಂಧಿಸಲಾಗಿತ್ತು. ಅವರು ವಿಚಾರಣಾಧೀನ ಕೈದಿಯಾಗಿದ್ದರಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆದ್ದರು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಪಿತೂರಿ, ದೇಶದ್ರೋಹ ಮತ್ತು ಭಯೋತ್ಪಾದನೆ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Dasara 2025: ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ
ನ್ಯಾಯಾಲಯದ ಅನುಮತಿ ಮೇರೆಗೆ ಅವರು ಈ ವರ್ಷ ಸಂಸತ್ತಿನ ಮುಂಗಾರು ಮತ್ತು ಬಜೆಟ್ ಅಧಿವೇಶನಗಳಿಗೆ ಅವರು ಹಾಜರಾಗಿದ್ದರು.