ಅತ್ಯಾಚಾರಕ್ಕೆ ಸುಂದರ ಹುಡುಗಿಯರೇ ಕಾರಣ; ವಿವಾದದ ಕಿಡಿ ಹಚ್ಚಿದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ
Phool Singh Baraiya: ''ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರ ಸೌಂದರ್ಯವೇ ಕಾರಣ'' ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ ಹೇಳುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಬರೈಯ ಈ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಅತ್ಯಾಚಾರಕ್ಕೆ ಜಾತಿ ಮತ್ತು ಧಾರ್ಮಿಕ ವ್ಯಾಖ್ಯಾನವನ್ನೂ ಅವರು ನೀಡಿದ್ದಾರೆ.
ಫೂಲ್ ಸಿಂಗ್ ಬರೈಯ (ಸಂಗ್ರಹ ಚಿತ್ರ) -
ಭೋಪಾಲ್, ಜ. 17: ''ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರ ಸೌಂದರ್ಯವೇ ಕಾರಣ'' ಎಂದು ನಾಲಗೆ ಹರಿಯಬಿಡುವ ಮೂಲಕ ಕಾಂಗ್ರೆಸ್ ಶಾಸಕ ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ. ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ (Phool Singh Baraiya) ಈ ರೀತಿಯ ಹೇಳಿಕೆ ನೀಡಿದ ʼಮಹಾನುಭಾವʼ. ಸದ್ಯ ಅವರ ಈ ಹೇಳಿಕೆ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ದೇಶಾದ್ಯಂತ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ (Viral Video). ಸಾರ್ವತ್ರಿಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.
ʼʼಒಬ್ಬ ಪುರುಷನು ರಸ್ತೆಯಲ್ಲಿ ಹೋಗುವಾಗ ಸುಂದರವಾದ ಹುಡುಗಿಯನ್ನು ನೋಡಿದರೆ ಅವನ ಮನಸ್ಸು ಚಂಚಲಗೊಂಡು ದಾರಿ ತಪ್ಪುತ್ತದೆ ಮತ್ತು ಇದು ಅತ್ಯಾಚಾರಕ್ಕೆ ಪ್ರೇರೇಪಣೆ ನೀಡುತ್ತದೆʼʼ ಎಂದು ಹೇಳಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಬರೈಯ ಈ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಅತ್ಯಾಚಾರಕ್ಕೆ ಜಾತಿ ಮತ್ತು ಧಾರ್ಮಿಕ ವ್ಯಾಖ್ಯಾನವನ್ನೂ ಅವರು ನೀಡಿದ್ದಾರೆ.
ಅತ್ಯಾಚಾರ ಕುರಿತಾದ ಫೂಲ್ ಸಿಂಗ್ ಬರೈಯ ಹೇಳಿಕೆ:
MP Congress MLA Phool Singh Baraiya’s SHOCKING “Rape Theory”
— The News Drill™ (@thenewsdrill) January 17, 2026
“Why do rapes happen? Beautiful girls can distract a man and rape can happen.
Women from SC, ST and OBC are not beautiful, yet they get raped because it is written in Hindu scriptures.”
He is INC MLA from Bhander (SC… pic.twitter.com/IQMlt8cUgp
ವ್ಯಕ್ತಿಗಳಿಗಿಂತ ಹೆಚ್ಚಾಗಿ ಗುಂಪುಗಳಿಂದಲೇ ಅತ್ಯಾಚಾರ ನಡೆಯುತ್ತದೆ ಎಂದು ಬರೈಯ ಹೇಳಿದ್ದಾರೆ. ಶಿಶುಗಳ ಮೇಲೂ ನಡೆಯುವ ಇಂತಹ ಅಪರಾಧವನ್ನು ಅವರು ಖಂಡಿಸಿದ್ದಾರೆ. "ಭಾರತದಲ್ಲಿ ಅತ್ಯಾಚಾರಕ್ಕೆ ಹೆಚ್ಚು ಬಲಿಯಾಗುವವರು ಯಾರು? ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರು. ಅತ್ಯಾಚಾರದ ಸಿದ್ಧಾಂತವೆಂದರೆ ಒಬ್ಬ ಪುರುಷ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುಂದರ ಹುಡುಗಿಯನ್ನು ನೋಡಿದರೆ ಅದು ಅವನ ಮನಸ್ಸನ್ನು ಬೇರೆಡೆಗೆ ತಿರುಗಬಹುದು ಮತ್ತು ಅತ್ಯಾಚಾರ ಎಸಗುವಂತೆ ಮಾಡಬಹುದು" ಎಂದು ಅವರು ಹೇಳಿದ್ದಾರೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಮಹಿಳೆಯರು ಸುಂದರವಾಗಿಲ್ಲದಿದ್ದರೂ ಪುರಾತನ ಧರ್ಮಗ್ರಂಥಗಳಲ್ಲಿ ಬರೆದಿರುವುದರಿಂದ ಅವರ ಮೇಲೆ ಅತ್ಯಾಚಾರವಾಗುತ್ತದೆ ಎಂದು ಬರೈಯ ತಿಳಿಸಿದ್ದಾರೆ.
ʼರುದ್ರಯಾಮಲ ತಂತ್ರʼ ಎಂಬ ಪುರಾತನ ಗ್ರಂಥವನ್ನು ಉಲ್ಲೇಖಿಸಿದ ಅವರು, ʼʼಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದುವುದು ಪುಣ್ಯಕ್ಷೇತ್ರ ಸಂದರ್ಶಿಸಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಕೆಲವರು ನಂಬಿರುವುದು ಅಪರಾಧಗಳ ಸಂಖ್ಯೆ ಹೆಚ್ಚಾಗಲು ಕಾರಣʼʼ ಎಂದಿದ್ದಾರೆ. "ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದಿದ್ದರೆ ಪರ್ಯಾಯವೇನು? ನಂಬಿಕೆಯ ಪ್ರಕಾರ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಹೊಂದುವುದು. ಇದಕ್ಕಾಗಿ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾರೆ. ಒಬ್ಬ ಪುರುಷನು ಮಹಿಳೆಯ ಒಪ್ಪಿಗೆಯಿಲ್ಲದೆ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾಲ್ಕು ತಿಂಗಳ ಮತ್ತು ಒಂದು ವರ್ಷದ ಹೆಣ್ಣುಮಕ್ಕಳ ಮೇಲೆಯೂ ಅತ್ಯಾಚಾರ ನಡೆಯುತ್ತದೆʼʼ ಎಂದೆಲ್ಲ ನಾಲಗೆ ಹರಿಯಬಿಟ್ಟಿದ್ದಾರೆ.
ಸ್ವಪಕ್ಷೀಯರಿಂದಲೇ ವಿರೋಧ
ಸದ್ಯ ಈ ಹೇಳಿಕೆಗೆ ಕಾಂಗ್ರೆಸ್‌ನಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. "ಅತ್ಯಾಚಾರವನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಅತ್ಯಾಚಾರ ಮಾಡುವ ಯಾರಾದರೂ ಅಪರಾಧಿ. ಅದನ್ನು ಜಾತಿ ಅಥವಾ ಧರ್ಮಕ್ಕೆ ಜೋಡಿಸಲು ಸಾಧ್ಯವಿಲ್ಲʼʼ ಎಂದು ಖಂಡಿಸಿದ್ದಾರೆ. ಜತೆಗೆ ಬಿಜೆಪಿ ನಾಯಕರು ಕೂಡ ಫೂಲ್ ಸಿಂಗ್ ಬರೈಯ ಹೇಳಿಕೆಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ.