ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿವಾದದ ಕಿಡಿ ಹೊತ್ತಿಸಿದ ಕೇರಳಂ ಸಿಎಂ ಗುರುವಾಯೂರು ದೇವಸ್ಥಾನ ಭೇಟಿ: ಹೈಕೋರ್ಟ್ ಆದೇಶ ಉಲ್ಲಂಘನೆ ಎಂದ ಬಿಜೆಪಿ; ಅಷ್ಟಕ್ಕೂ ಅಗಿದ್ದೇನು?

BJP alleges High Court order: ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ರಜಾದಿನಗಳಲ್ಲಿ ವಿಐಪಿ ದರ್ಶನವನ್ನು ನಿಯಂತ್ರಿಸುವ ಕೇರಳ ಹೈಕೋರ್ಟ್ ಆದೇಶವನ್ನು ಈ ಭೇಟಿ ಉಲ್ಲಂಘಿಸಿದೆ. ಸಾಮಾನ್ಯ ಭಕ್ತರಿಗೆ ಅನಾನುಕೂಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ಕೇರಳಂ ಮುಖ್ಯಮಂತ್ರಿ

ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ (ಸಂಗ್ರಹ ಚಿತ್ರ) -

Priyanka P
Priyanka P May 25, 2026 8:13 PM

ತಿರುವನಂತಪುರಂ, ಮೇ 25: ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ (VD Satheesan) ತ್ರಿಶೂರ್‌ ಜಿಲ್ಲೆಯ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ (Guruvayur Temple) ಭೇಟಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ರಜಾದಿನಗಳಲ್ಲಿ ವಿಐಪಿ ದರ್ಶನವನ್ನು ನಿಯಂತ್ರಿಸುವ ಕೇರಳಂ ಹೈಕೋರ್ಟ್ (Kerala Highcourt) ಆದೇಶವನ್ನು ಈ ಭೇಟಿಯು ಉಲ್ಲಂಘಿಸಿದೆ. ಸಾಮಾನ್ಯ ಭಕ್ತರಿಗೆ ಅನಾನುಕೂಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸತೀಶನ್ ಭಾನುವಾರ (ಮೇ 25) ಗುರುವಾಯೂರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯಿಕ ತುಲಾಭಾರ ಆಚರಣೆಯನ್ನು ನೆರವೇರಿಸಿದರು.

ಭಾನುವಾರ ಬೆಳಗ್ಗೆ ನಿಷೇಧಿತ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಅವರ ಜತೆಗಿದ್ದ ನಾಯಕರಿಗೆ ವಿಶೇಷ ವಿಐಪಿ ದರ್ಶನ ಸೌಲಭ್ಯ ಒದಗಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಿರಿಯ ನಾಯಕ ಬಿ. ಗೋಪಾಲಕೃಷ್ಣನ್ ಗುರುವಾಯೂರ್ ದೇವಸ್ವಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿದ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್:



ಫೇಸ್‌ಬುಕ್ ಪೋಸ್ಟ್‌ನಲ್ಲಿ, ಭಾನುವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ವಿಐಪಿ ದರ್ಶನಕ್ಕೆ ಹೈಕೋರ್ಟ್ ನಿರ್ಬಂಧ ಹೇರಿದೆ ಎಂದು ಹೇಳಿದರು. ಜತೆಗೆ ದೇವಸ್ಥಾನ ಆವರಣದ ಸುತ್ತಮುತ್ತ, ಮೆಲ್ಪತ್ತೂರು ಆಡಿಟೋರಿಯಂ ಸಮೀಪವೂ ಸೇರಿ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಗೂ ನಿಷೇಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಶಬರಿಮಲೆ ಆಯ್ತು ಇದೀಗ ಗುರುವಾಯೂರು ದೇವಾಲಯದಲ್ಲಿಯೂ ಚಿನ್ನ ನಾಪತ್ತೆ?

ವಿಶೇಷ ದರ್ಶನಕ್ಕಾಗಿ ರಜಾದಿನಗಳಲ್ಲಿ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಕಡ್ಡಾಯ 4,500 ರುಪಾಯಿ ಶ್ರೀಕೋವಿಲ್ ನೆಯ್ವಿಲಕ್ಕು ರಶೀದಿಯನ್ನು ತೆಗೆದುಕೊಳ್ಳದೆಯೇ ಸತೀಶನ್ ಮತ್ತು ಅವರ ಪರಿವಾರಕ್ಕೆ ಬೆಳಗ್ಗೆ 7.30ರಿಂದ 9.30 ರವರೆಗೆ ವಿಐಪಿ ದರ್ಶನ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ದೇವಾಲಯದ ನಿಯಮಗಳ ಪ್ರಕಾರ, ನೆಯ್ವಿಳಕ್ಕು ರಶೀದಿಯನ್ನು ಪಡೆದವರು ವಿಶೇಷ ದರ್ಶನ ಪಡೆಯಬಹುದು.

ದೇವಾಲಯದ ಆವರಣದ ಬಳಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ಸೇರಿ ಹಲವು ವಿಐಪಿಗಳು ವಿಡಿಯೊ ರೆಕಾರ್ಡ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ದೇವಾಲಯದ ಆವರಣದಲ್ಲಿರುವ ಇತರರ ಆಕ್ಷೇಪಣೆಯ ಹೊರತಾಗಿಯೂ ಈಡನ್ ವಿಡಿಯೊ ರೆಕಾರ್ಡ್ ಮಾಡಿದ್ದಾರೆ.

ಕಾನೂನನ್ನು ರಕ್ಷಿಸುವ ಕರ್ತವ್ಯದಲ್ಲಿರುವವರೇ ಅದನ್ನು ಉಲ್ಲಂಘಿಸಿದ್ದಾರೆ ಎಂದು ಗೋಪಾಲಕೃಷ್ಣನ್ ದೂರಿನಲ್ಲಿ ಆರೋಪಿಸಿದ್ದಾರೆ. ದೇವಸ್ವಂ ಕ್ರಮ ಕೈಗೊಳ್ಳಲು ವಿಫಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಆದರೆ, ದೇವಾಲಯವನ್ನು ನಿರ್ವಹಿಸುವ ಗುರುವಾಯೂರ್ ದೇವಸ್ವಂ ಈ ಆರೋಪಗಳನ್ನು ತಿರಸ್ಕರಿಸಿದ್ದು, ಮುಖ್ಯಮಂತ್ರಿಗೆ ದೇಚರ ದರ್ಶನವನ್ನು ನಿಯಮಗಳ ಪ್ರಕಾರನೀಡಲಾಗಿದೆ ಎಂದು ಹೇಳಿದೆ.

ಭಾನುವಾರ ರಜಾದಿನವಾಗಿದ್ದರಿಂದ ಸತೀಶನ್ 4,500 ರುಪಾಯಿ ಶ್ರೀಕೋವಿಲ್ ನೆಯ್ವಿಲಕ್ಕು ರಶೀದಿಯನ್ನು ಖರೀದಿಸಿದ ನಂತರ ದರ್ಶನ ಪಡೆದಿದ್ದರು ಎಂದು ದೇವಸ್ವಂ ಆಡಳಿತ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ದೇವಸ್ವಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವಾದದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.

ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಗುರುವಾಯೂರು ದೇವಸ್ವಂ ಅಧ್ಯಕ್ಷ ಎ.ವಿ. ಗೋಪಿನಾಥ್, ರಜಾದಿನಗಳಲ್ಲಿ ವಿಐಪಿ ದರ್ಶನಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ ಎಂದು ಹೇಳಿದರು. ಆದರೆ ಮುಖ್ಯಮಂತ್ರಿ ಹಾಗೂ ಅವರ ತಂಡದಿಂದ ಪ್ರಾಥಮಿಕವಾಗಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಸಿಎಂ ಭೇಟಿಯಿಂದಾಗಿ ಹಲವು ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ದೂರನ್ನು ಒಪ್ಪಿಕೊಂಡರು. ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ತಲುಪಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಆವರಣದಲ್ಲಿ ನಡೆದ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು ಎಂದು ಮೂಲಗಳು ತಿಳಿಸಿವೆ.