IND vs WI: ಭವನೇಶ್ವರ್ ಕುಮಾರ್ ಇನ್? ಐದನೇ ಟಿ20ಐಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!
India's Probable Playing XI: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಐದನೇ ಹಾಗೂ ಟಿ20ಐ ಸರಣಿಯ ನಿರ್ಣಾಯಕ ಪಂದ್ಯ ಅಕ್ಟೋಬರ್ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ -
ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಐದು ಪಂದ್ಯಗಳ ಟಿ20ಐ ಸರಣಿ (IND vs WI) ಅತ್ಯಂತ ಕುತೂಹಲ ಘಟ್ಟಕ್ಕೆ ತಲುಪಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ತಲಾ ಎರಡೆರಡು ಪಂದ್ಯಗಳನ್ನು ಗೆದ್ದಿರುವ ಉಭಯ ತಂಡಗಳು 2-2 ಸಮಬಲ ಕಾಯ್ದುಕೊಂಡಿವೆ. ಇದೀಗ ಅಕ್ಟೋಬರ್ 17 ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಪಂದ್ಯವನ್ನು ಗೆದ್ದ ತಂಡ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಹಾಗಾಗಿ ಎರಡೂ ತಂಡಗಳ ನಡುವೆ ಶನಿವಾರ ದೊಡ್ಡ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲಿ ಬೆಂಗಳೂರಿನ ಪಿಚ್ ಬ್ಯಾಟ್ಸ್ಮನ್ಗಳ ಸ್ನೇಹಿಯಾಗಿರುವ ಕಾರಣ ಹೈಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ ಇದೆ.
ಹೈದರಾಬಾದ್ನಲ್ಲಿ 14 ರಂದು ನಡೆದಿದ್ದ ನಾಲ್ಕನೇ ಪಂದ್ಯದಲ್ಲಿವೆಸ್ಟ್ ಇಂಡೀಸ್ ತಂಡ ಶೇಯ್ ಹೋಪ್ ಶತಕ ಹಾಗೂ ಕಿಮೋ ಪಾಲ್ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಗೆದ್ದು ಬೀಗಿತ್ತು. 248 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಬ್ಯಾಟಿಂಗ್ ಬಲದಿಂದ ಕಠಿಣ ಹೋರಾಟ ನಡೆಸಿ 223 ರನ್ಗಳಿಗೆ ಆಲ್ಔಟ್ ಆಗಿತ್ತು.
IND vs WI: ʻಬೆಂಗಳೂರಿನಲ್ಲಿ ಮಿಂಚಲಿದ್ದಾರೆʼ-ಸಂಜು ಸ್ಯಾಮ್ಸನ್ ಬಗ್ಗೆ ಅಭಿಷೇಕ್ ನಾಯರ್ ದೊಡ್ಡ ಭವಿಷ್ಯ!
ಅರ್ಷದೀಪ್ ಸಿಂಗ್ ಔಟ್, ಭುವನೇಶ್ವರ್ ಕುಮಾರ್ ಇನ್?
ಅರ್ಷದೀಪ್ ಸಿಂಗ್ ನಾಲ್ಕನೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು, ಐದನೇ ಪಂದ್ಯದಿಂದ ಹೊರ ನಡೆದಿದ್ದಾರೆ. ಹಾಗಾಗಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಪಂಜಾವ್ ವೇಗಿಯ ಸ್ಥಾನಕ್ಕೆ ಕರೆಸಿಕೊಳ್ಳಲಾಗಿದ್ದು, ಐದನೇ ಪಂದ್ಯದಲ್ಲಿ ಭವಿ ತಮ್ಮ ಆರ್ಸಿಬಿಯ ತವರು ಅಂಗಣದಲ್ಲಿ ಕಣಕ್ಕೆ ಇಳಿಯಬಹುದು. ವಿಶೇಷವಾಗಿ ವಿಂಡೀಸ್ ಬ್ಯಾಟರ್ಗಳನ್ನು ಕಟ್ಟಿ ಹಾಕಲು ಭುವಿ ಅವರ ಅನುಭವನ್ನು ಟೀಮ್ ಮ್ಯಾನೇಜ್ಮೆಂಟ್ ಬಳಸಿಕೊಳ್ಳಬಹುದು.
ಮೂರು ಬದಲಾವಣೆ ಸಾಧ್ಯತೆ
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆ ಸಾಧ್ಯತೆ ಇದೆ. ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡಿ ಬೆಂಚ್ ಕಾಯುತ್ತಿರುವ ವೈಭವ್ ಸೂರ್ಯವಂಶಿಗೆ ಸ್ಥಾನವನ್ನು ನೀಡಬಹುದು. ಗಾಯಾಳು ಅರಷದೀಪ್ ಸಿಂಗ್ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಔಟ್ ಆಫ್ ಫಾರ್ಮ್ ಅಕ್ಷರ್ ಪಟೇಲ್ ಅವರ ಸ್ಥಾನದಲ್ಲಿ ಕುಲ್ದೀಪ್ ಯಾದವ್ಗೆ ಮಣೆ ಹಾಕಬಹುದು. ಕುಲ್ದೀಪ್ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದರು.
IND vs WI: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿರುವ ಭುವನೇಶ್ವರ್ ಕುಮಾರ್!
ಐದನೇ ಟಿ20ಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಅಭಿಷೇಕ್ ಶರ್ಮಾ / ವೈಭವ್ ಸೂರ್ಯವಂಶಿ
- ಇಶಾನ್ ಕಿಶನ್
- ಶ್ರೇಯಸ್ ಅಯ್ಯರ್ (ನಾಯಕ)
- ತಿಲಕ್ ವರ್ಮಾ
- ನಾಮನ್ ಧೀರ್
- ನಿತೀಶ್ ಕುಮಾರ್ ರೆಡ್ಡಿ
- ಅಕ್ಷರ್ ಪಟೇಲ್ / ಕುಲ್ದೀಪ್ ಯಾದವ್
- ಭುವನೇಶ್ವರ್ ಕುಮಾರ್
- ಪ್ರಿನ್ಸ್ ಯಾದವ್
- ಮಯಾಂಕ್ ಯಾದವ್
ಪಂದ್ಯದ ವಿವರ
ಐದನೇ ಟಿ20ಐ ಪಂದ್ಯ
ಭಾರತ vs ವೆಸ್ಟ್ ಇಂಡೀಸ್
ದಿನಾಂಕ: ಅಕ್ಟೋಬರ್ 17, 2026
ಸಮಯ: ಸಂಜೆ 07:00
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊಹಾಟ್ಸ್ಟಾರ್