ಪಾಕ್ ಮೂಲದ 23 ಮಂದಿಯನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಸರ್ಕಾರ
ಭಾರತದ ಭದ್ರತೆಗೆ ಧಕ್ಕೆ ತರುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶನಿವಾರ ಮತ್ತೊಂದು ಸುತ್ತಿನ ಪ್ರಹಾರ ನಡೆಸಿದೆ. ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲಿನ ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕಾರ್ಯಕರ್ತರು ಸೇರಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತದ ಭದ್ರತೆಗೆ ಧಕ್ಕೆ ತರುತ್ತಿರುವ ಭಯೋತ್ಪಾದಕ (Terrorist) ಸಂಘಟನೆಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶನಿವಾರ ಮತ್ತೊಂದು ಸುತ್ತಿನ ಪ್ರಹಾರ ನಡೆಸಿದೆ. ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT), ಜಮಾತ್-ಉದ್-ದಾವಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬರೋಬ್ಬರಿ 23 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೆಕ್ಷನ್ 35ರ ಅಡಿಯಲ್ಲಿ ಘೋಷಿತ ಭಯೋತ್ಪಾದಕರು ಎಂದು ಘೋಷಿಸಿದೆ.
ಇತ್ತೀಚಿನ ಸೇರ್ಪಡೆಯೊಂದಿಗೆ, ಗೊತ್ತುಪಡಿಸಿದ ಒಟ್ಟು ವೈಯಕ್ತಿಕ ಭಯೋತ್ಪಾದಕರ ಸಂಖ್ಯೆ 80 ಕ್ಕೆ ಏರಿದೆ ಉಗ್ರರು ಕೇವಲ ದಾಳಿಯಷ್ಟೇ ಅಲ್ಲದೆ, ಭಾರತದೊಳಗೆ ನುಸುಳುವಿಕೆ, ಭಯೋತ್ಪಾದನೆಗೆ ಯುವಕರ ನೇಮಕಾತಿ, ತರಬೇತಿ, ಉಗ್ರರಿಗೆ ಆರ್ಥಿಕ ನೆರವು, ಶಸ್ತ್ರಾಸ್ತ್ರ ಪೂರೈಕೆ ಮತ್ತು ಇತ್ತೀಚಿನ ದಿನಗಳಲ್ಲಿ ಡ್ರೋನ್‌ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು.
ಪ್ರಮುಖವಾಗಿ 2022ರ ಏಪ್ರಿಲ್ 22ರಂದು ಜಮ್ಮುವಿನ ಸುಂಜ್ವಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿ ಹಾಗೂ 2016ರ ನವೆಂಬರ್ 29ರಂದು ಜಮ್ಮುವಿನ ನಗ್ರೋಟಾ ಸೇನಾ ಶಿಬಿರದ ಮೇಲೆ ನಡೆದ ಭೀಕರ ಉಗ್ರರ ದಾಳಿಗಳಲ್ಲಿ ಈ ವ್ಯಕ್ತಿಗಳು ಪ್ರಮುಖ ಸಂಚು ರೂಪಿಸಿದ್ದರು ಎಂದು ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಮಣಿಪುರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ: ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಜಪ್ತಿ
ಈ ಪಟ್ಟಿಯಲ್ಲಿರುವ 23 ಉಗ್ರರ ಪೈಕಿ 17 ಜನ ಪಾಕಿಸ್ತಾನಿ ಪ್ರಜೆಗಳಾಗಿದ್ದರೆ, ಉಳಿದ 6 ಜನ ಭಾರತೀಯ ಮೂಲದವರಾಗಿದ್ದಾರೆ. ಆದರೆ, ಸದ್ಯ ಇವರೆಲ್ಲರೂ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಆಶ್ರಯ ಪಡೆದುಕೊಂಡಿದ್ದು, ಅಲ್ಲಿಂದಲೇ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದಾರೆ. ಲಷ್ಕರ್ ಸಂಘಟನೆಯ ಫಿರ್ದೌಸ್ ಅಹ್ಮದ್ ಭಟ್, ಬಿಲಾಲ್ ಅಹ್ಮದ್ ಮಿರ್ ಮತ್ತು ಅಲ್ ಖೈದಾ-ಐಸಿಸ್ ಜೊತೆ ನಂಟಿರುವ ಮೊಹಮ್ಮದ್ ಶಾಹಿದ್ ಫೈಸಲ್ ಸೇರಿ ಹಲವರಿದ್ದಾರೆ.