ಹಠ ಬಿಡದಿದ್ದರೆ ಶಾಂತಿ ಹೇಗೆ ಸಾಧ್ಯ?
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಯುದ್ಧ ಬೇಡ ಎನ್ನುವ ರಾಷ್ಟ್ರಗಳ ಸಮಕ್ಷಮದಲ್ಲಿ ಇರಾನ್-ಅಮೆರಿಕ ದೇಶಗಳ ಷರತ್ತುಗಳನ್ನು ಮಾತುಕತೆಗೆ ಬರುವ ಅನ್ಯರಾಷ್ಟ್ರಗಳ ಪ್ರತಿನಿಧಿಗಳ ಸಮಿತಿಯಿಂದ ಪರಿಷ್ಕರಿಸಿ, ಅಮೆರಿಕ - ಇರಾನ್ ಎರಡೂ ದೇಶಗಳಿಗೆ ಸಮ್ಮತವಾಗುವಂಥ ಷರತ್ತುಗಳನ್ನು ರೂಪಿಸಿ, ಇಬ್ಬರನ್ನೂ ಓಲೈಸಿ ಒಪ್ಪಿಸುವುದೇ ಸೂಕ್ತವಾದ ಮಾರ್ಗ.
-
ಇಡೀ ಜಗತ್ತೇ ಭಾರೀ ಕುತೂಹಲದಿಂದ ನೋಡುತ್ತಿದ್ದ ಅಮೆರಿಕ, ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾಗಿವೆ. ಪಾಕಿಸ್ತಾನದ ಪಾರುಪತ್ಯದಡಿ ಮಾತುಕತೆಗೆ ಕುಳಿತಿದ್ದ ಈ ಎರಡೂ ದೇಶಗಳು ತಮ್ಮ ಷರತ್ತುಗಳಿಗೆ ಅಂಟಿಕೊಂಡಿದ್ದರಿಂದ ಮಾತುಕತೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಅದರ ಪರಿಣಾಮ, ಪೂರ್ವನಿಗದಿಯಂತೆ 21 ಗಂಟೆಗಳ ಮಾತುಕತೆ ವಿಫಲವಾಗಿದೆ.
ಇಲ್ಲಿ ಮೂಲ ತಕರಾರಿರುವುದು ಅಮೆರಿಕದ ಬಳಿಯೇ. ಇರಾನಿನ ಅಣುಕಾರ್ಯಕ್ರಮವನ್ನು ಶತಾಯಗತಾಯ ನಿಲ್ಲಿಸಬೇಕು ಎಂಬ ಪ್ರತಿಜ್ಞೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಇರಾನ್ ತನ್ನ ಅಣ್ವಸ್ತ್ರ ಯೋಜನೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಒತ್ತಾಯಿಸು ತ್ತಿದ್ದರೆ, ಇರಾನ್ ಅದನ್ನು ಒಪ್ಪಲು ಸಿದ್ಧವಾಗಿಲ್ಲ.
ಎರಡನೆಯದಾಗಿ, ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. ಇರಾನ್ ಮೇಲಿನ ನಿರ್ಬಂಧಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಕೇಳುತ್ತಿದ್ದರೆ, ಅಮೆರಿಕ ಹಂತಹಂತವಾಗಿ ಸಡಿಲಿಕೆ ಮಾಡಲು ಮಾತ್ರ ಸಿದ್ಧವಾಗಿದೆ.
ಇದನ್ನೂ ಓದಿ; Vishwavani Editorial: ನ್ಯಾ.ವರ್ಮಾ ಪ್ರಕರಣ ಇತ್ಯರ್ಥವಾಗಲಿ
ಮೂರನೆಯದಾಗಿ, ಪರಸ್ಪರ ನಂಬಿಕೆಯ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಸಂಘರ್ಷಗಳು, ಯುದ್ಧ ಮತ್ತು ದಾಳಿಗಳ ಪರಿಣಾಮವಾಗಿ ಎರಡೂ ದೇಶಗಳ ನಡುವಿನ ವಿಶ್ವಾಸ ಕುಂದಿದೆ. ನಾಲ್ಕನೆಯದಾಗಿ, ಪ್ರಾದೇಶಿಕ ರಾಜಕೀಯ ಪ್ರಭಾವ ಮತ್ತು ಹೊರ್ಮುಜ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಮುಂದುವರಿಸಲು ಇರಾನ್ ಹಠ ಹಿಡಿದಿರುವುದು ಕೂಡ ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ, ಮೂಲಭೂತ ವಿಚಾರಗಳಲ್ಲಿ ಒಪ್ಪಂದವಾಗದಿರುವುದರಿಂದ ಮಾತುಕತೆಗಳು ಈ ಮೊದಲ ಸುತ್ತಿನ ಸಂಧಾನದಲ್ಲಿ ವಿಫಲವಾಗಿವೆ. ಕದನ ವಿರಾಮ ಇನ್ನೂ ಜಾರಿಯಲ್ಲಿರುವುದರಿಂದ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಗೆ ಎರಡೂ ದೇಶಗಳು ಮುಂದಾಗಬಹುದು ಆದರೆ, ಹಠಗಳನ್ನು ಬಿಡದಿದ್ದರೆ ಇಂಥ ನೂರು ಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನ ವಾಗುವುದಿಲ್ಲ.
ಬಹುಶಃ ಇದಕ್ಕೆ ವಿಶ್ವಸಂಸ್ಥೆಯೇ ಮದ್ದು ಅರೆದರೆ ಸೂಕ್ತವೇನೋ! ವಿಶ್ವಸಂಸ್ಥೆಯ ವೇದಿಕೆಯಲ್ಲಿ ಯುದ್ಧ ಬೇಡ ಎನ್ನುವ ರಾಷ್ಟ್ರಗಳ ಸಮಕ್ಷಮದಲ್ಲಿ ಇರಾನ್-ಅಮೆರಿಕ ದೇಶಗಳ ಷರತ್ತುಗಳನ್ನು ಮಾತುಕತೆಗೆ ಬರುವ ಅನ್ಯರಾಷ್ಟ್ರಗಳ ಪ್ರತಿನಿಧಿಗಳ ಸಮಿತಿಯಿಂದ ಪರಿಷ್ಕರಿಸಿ, ಅಮೆರಿಕ - ಇರಾನ್ ಎರಡೂ ದೇಶಗಳಿಗೆ ಸಮ್ಮತವಾಗುವಂಥ ಷರತ್ತುಗಳನ್ನು ರೂಪಿಸಿ, ಇಬ್ಬರನ್ನೂ ಓಲೈಸಿ ಒಪ್ಪಿಸುವುದೇ ಸೂಕ್ತವಾದ ಮಾರ್ಗ.