ಕೇರಳ: ನೂರಾರು ಕನಸುಗಳನ್ನು ಹೊತ್ತುಕೊಂಡು ಆಕೆ ಮದುವೆ ಮಂಟಪಕ್ಕೆ (wedding) ಹೊರಟಿದ್ದಳು. ವಧುವಿನ ಶೃಂಗಾರದಲ್ಲಿ ಆಕೆ ಹೇಗೆ ಕಾಣಿಸಬಹುದು ಎನ್ನುವ ಕಲ್ಪನೆಯಲ್ಲಿ ಆತನೂ ಮದುವೆ ಮಂಟಪಕ್ಕೆ ಹೊರಟಿದ್ದ. ಆದರೆ ಒಂದೇ ಕ್ಷಣದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಅಪಘಾತವೊಂದು (road accident) ಬರಸಿಡಿಲಿನಂತೆ ಬಂದು ಆಕೆಯ ಕನಸುಗಳನ್ನು ಭಗ್ನಗೊಳಿಸಿತ್ತು. ಆದರೆ ವರ ಮಾಡಿದ ಒಂದು ನಿರ್ಧಾರ ಅವರಿಬ್ಬರ ಜೀವನದ ದಾರಿಯನ್ನು ಮತ್ತೆ ಒಂದುಗೂಡಿಸಿತ್ತು. ಇದು ಯಾವುದೇ ಸಿನಿಮಾ ಕಥೆಯಲ್ಲ. ಕೇರಳದಲ್ಲಿ (kerala) ನಡೆದ ಒಂದು ನೈಜ್ಯ ಘಟನೆ.
ಮದುವೆಗೆ ಕೆಲವೇ ಗಂಟೆಗಳು ಬಾಕಿ ಇತ್ತು. ಆದರೆ ರಸ್ತೆ ಅಪಘಾತದಲ್ಲಿ ವಧುವಿನ ಬೆನ್ನುಮೂಳೆಗೆ ಗಾಯವಾಯಿತು. ಪರಿಣಾಮ ಆಕೆ ಆಸ್ಪತ್ರೆ ಸೇರಿದಳು. ಇದರಿಂದ ಆಕೆಯ ಮದುವೆಯ ಕನಸು ನುಚ್ಚು ನೂರಾಗಬಹುದು ಎನ್ನುವ ಭಯ ಆಕೆಯ ಪೋಷಕರನ್ನು ಕಾಡತೊಡಗಿತ್ತು. ಆದರೆ ವರ ತೆಗೆದುಕೊಂಡ ನಿರ್ಧಾರ ಅವರಿಬ್ಬರ ಬದುಕನ್ನು ಬದಲಿಸಿತ್ತು.
ಇದನ್ನೂ ಓದಿ: Self Harming: ಧಾರವಾಡದಲ್ಲಿ ದಾರುಣ ಘಟನೆ, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ವಧು ಗಾಯಕ್ಕೆ ಒಳಗಾದ ಅನಂತರ ಅವರಿಬ್ಬರು ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ವಿವಾಹವಾಗಲು ನಿರ್ಧರಿಸಿದರು. ಸವಾಲಿನ ಪರಿಸ್ಥಿತಿಯ ನಡುವೆ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರ ಬೆಂಬಲದೊಂದಿಗೆ ಅವರ ವಿವಾಹವನ್ನು ಸರಳವಾಗಿ ನಡೆಸಲಾಯಿತು. ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಶುಕ್ರವಾರ ವಧು, ಅವಳ ಪಕ್ಕದಲ್ಲಿ ವರ ನಿಂತು ದಾದಿಯರ ಸಮ್ಮುಖದಲ್ಲಿ ವಿವಾಹವಾದರು.
ಅಲಪ್ಪುಳದ ಕುಮಾರಕೋಮ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಧುವಿನ ಮೇಕಪ್‌ಗಾಗಿ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಅವನಿಯ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆಯ ಬೆನ್ನುಮೂಳೆಗೆ ತೀವ್ರ ಗಾಯವಾಗಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ ಅವರ ಗಾಯದ ತೀವ್ರತೆಯಿಂದಾಗಿ ವಿಶೇಷ ಚಿಕಿತ್ಸೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲಪ್ಪುಳದಲ್ಲಿ ಶುಕ್ರವಾರ ಮಧ್ಯಾಹ್ನ ಮದುವೆ ನಡೆಯಬೇಕಿತ್ತು. ಆದರೆ ವರ ಶರೋನ್ ಮತ್ತು ಅವರ ಕುಟುಂಬ ಆಸ್ಪತ್ರೆಗೆ ತಲುಪಿ ಅವನಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದ ಅನಂತರ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಆಸ್ಪತ್ರೆಯಲ್ಲೇ ವಿವಾಹವಾದರು.
ಸಮಯಕ್ಕೆ ಸರಿಯಾಗಿ ಅಂದರೆ ಶುಕ್ರವಾರ ಮಧ್ಯಾಹ್ನವೇ ಅವರಿಬ್ಬರು ವೈದ್ಯರು, ದಾದಿಯರು ಮತ್ತು ನಿಕಟ ಸಂಬಂಧಿಗಳ ಸಮ್ಮುಖದಲ್ಲಿ ವಿವಾಹವಾದರು. ಅವನಿ ಸ್ಟ್ರೆಚರ್ ಮೇಲೆ ಮಲಗಿದ್ದಾಗ ಅಲಪ್ಪುಳದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಶರೋನ್ ಅವರನ್ನು ವರಿಸಿದರು. ವಿವಾಹ ಸ್ಥಳದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಊಟವನ್ನು ನೀಡಲಾಯಿತು.
ಇದನ್ನೂ ಓದಿ: IND vs SA: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಭಾರತ ಪರ ಎರಡು ಬದಲಾವಣೆ
ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುದೀಶ್ ಕರುಣಾಕರನ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಅವನಿಯ ಬೆನ್ನುಮೂಳೆಗೆ ಗಂಭೀರ ಗಾಯವಾಗಿದೆ. ಶೀಘ್ರದಲ್ಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.