ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಧಾರವಾಡದಲ್ಲಿ ದಾರುಣ ಘಟನೆ, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Dharawada news: ಸಾಲದ ಬಾಧೆಯಿಂದ ನೊಂದಿದ್ದ ನಾರಾಯಣ ಶಿಂಧೆ ಕುಟುಂಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಕೆಲಸಕ್ಕೆ ತೆರಳಿದ ತಾಯಿ ಬದುಕಿಕೊಂಡಿದ್ದಾಳೆ. ಶಾಲೆಗೆ ಹೊರಟು ಸಮವಸ್ತ್ರದಲ್ಲಿದ್ದ ಇಬ್ಬರು ಮಕ್ಕಳನ್ನು ತಂದೆಯೇ ಮೊದಲು ಬಾವಿಗೆ ತಳ್ಳಿ ಕೊಂದು ಬಳಿಕ ತಾನೂ ಹಾರಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಧಾರವಾಡ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಧಾರವಾಡದಲ್ಲಿ ದಾರುಣ ಘಟನೆ, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಧಾರವಾಡದಲ್ಲಿ ನಾಲ್ವರು ಆತ್ಮಹತ್ಯೆ -

ಹರೀಶ್‌ ಕೇರ
ಹರೀಶ್‌ ಕೇರ Nov 22, 2025 9:42 AM

ಧಾರವಾಡ: ಧಾರವಾಡ (Dharawada news) ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆಗೆ (self harming) ಶರಣಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ವಿಠ್ಠಲ ಶಿಂಧೆ (75), ಅವರ ಪುತ್ರ ನಾರಾಯಣ ಶಿಂಧೆ (38), ಮೊಮ್ಮಕ್ಕಳಾದ ಶಿವರಾಜ (12) ಹಾಗೂ ಶ್ರೀನಿಧಿ (10) ಎಂದು ಗುರುತಿಸಲಾಗಿದೆ.

ಈ ನಾಲ್ವರು ನಿನ್ನೆ ಬೆಳಗ್ಗೆ ಚಿಕ್ಕಮಲ್ಲಿಗವಾಡ ಗ್ರಾಮದ ಹೊರಗೆ ಇರುವ ಹಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಯ ಬಳಿ ಅವರ ಚಪ್ಪಲಿಗಳು ಪತ್ತೆಯಾಗಿವೆ. ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೌಟುಂಬಿಕ ಸಮಸ್ಯೆ ಅಥವಾ ಸಾಲಬಾಧೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ನಾರಾಯಣ ಶಿಂಧೆ ಹಾಗೂ ಶಿಲ್ಪಾ ಶಿಂಧೆ ದಂಪತಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು. ನಾರಾಯಣನ ತಂದೆಯೂ ಇವರೊಂದಿಗೇ ಇರುತ್ತಿದ್ದರು. ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ನಾರಾಯಣ ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶಿಲ್ಪಾ ಒಬ್ಬರ ಮನೆಯಲ್ಲಿ ವೃದ್ಧೆಯೊಬ್ಬರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಹಿರಿಯ ಮಗು ಶಿವರಾಜ (12) ಹಾಗೂ ಮಗಳು ಶ್ರೀನಿಧಿ (10) ಶಾಲೆಗೆ ಹೋಗುತ್ತಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಘನಘೋರ ಘಟನೆ! ಕಾರು ಡಿಕ್ಕಿ ಹೊಡೆದು ಭಾರತೀಯ ಮೂಲದ ಗರ್ಭಿಣಿ ಸಾವು

ನಿತ್ಯವೂ ಶಾಲೆಗೆ ಮಕ್ಕಳನ್ನು ಬಿಟ್ಟು ಬರುತ್ತಿದ್ದ ತಂದೆ ನಾರಾಯಣ ಅವರು ನಿನ್ನೆ ಸಹ ಇಬ್ಬರೂ ಮಕ್ಕಳನ್ನು ತಯಾರು ಮಾಡಿ, ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಹೋಗುವಾಗ ತಂದೆ 75 ವರ್ಷದ ತಂದೆ ವಿಠ್ಠಲ ಅವರನ್ನೂ ಕರೆದೊಯ್ದಿದ್ದಾರೆ. ಎಂದಿನಂತೆ ಶಿಲ್ಪಾ ಧಾರವಾಡಕ್ಕೆ ಕೆಲಸಕ್ಕೆಂದು ಹೋಗಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರಭಾಗದಲ್ಲಿರೋ ಸಣ್ಣ ಬಾವಿಯೊಂದರಲ್ಲಿ ಓರ್ವ ವ್ಯಕ್ತಿಯ ಶವ ತೇಲುತ್ತಿರೋ ಬಗ್ಗೆ ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಶವವನ್ನು ಹೊರ ತೆಗೆಯುತ್ತಿದ್ದಂತೆಯೇ ಮತ್ತೊಂದು ಶವ ಪತ್ತೆಯಾಗಿದೆ. ಅದನ್ನೂ ತೆಗೆಯುತ್ತಲೇ ಶಾಲಾ ಸಮವಸ್ತ್ರದಲ್ಲಿರೋ ಎರಡು ಮಕ್ಕಳ ಶವಗಳು ಕೂಡ ತೇಲಿ ಬಂದಿವೆ. ಬಾವಿಯ ದಡದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಆಧಾರದ ಮೇಲೆ ಇದು ನಾರಾಯಣ ಶಿಂಧೆ ಕುಟುಂಬದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ನಾರಾಯಣ ಅವರು ಹಲವು ಕಡೆಗಳಲ್ಲಿ ಸುಮಾರು 15 ಲಕ್ಷದಷ್ಟು ಸಾಲ ಮಾಡಿದ್ದರಂತೆ. ಆ ಸಾಲವನ್ನು ತೀರಿಸುವುದರ ಬಗ್ಗೆ ಸಾಕಷ್ಟು ಆತಂಕವನ್ನೂ ಹೊರಹಾಕುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಮತ್ತೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌; ಮುಖ್ಯೋಪಾಧ್ಯಾಯ ಸೇರಿ ಮೂವರು ಶಿಕ್ಷಕರು ಅಮಾನತು