Mann Ki Baat : ಮನ್ ಕಿ ಬಾತ್; ಇಸ್ರೋ ಯಶಸ್ಸನ್ನು ಉಲ್ಲೇಖಿಸಿದ ಮೋದಿ, ವಿಜ್ಞಾನಿಯಾಗಿ ಒಂದು ದಿನ ಕಳೆಯಿರಿ ಎಂದು ಸಲಹೆ
ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ "ಮನ್ ಕಿ ಬಾತ್" ನ 119 ನೇ ಸಂಚಿಕೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಇಸ್ರೋದ ಯಶಸ್ಸನ್ನು ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕಳೆದ ತಿಂಗಳು ದೇಶವು ಇಸ್ರೋದ 100 ನೇ ಉಪಗ್ರಹ ಉಡಾವಣೆಗೆ ಸಾಕ್ಷಿಯಾಯಿತು ಎಂದು ಅವರು ಹೇಳಿದ್ದಾರೆ.

ಮನ್ ಕಿ ಬಾತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ "ಮನ್ ಕಿ ಬಾತ್" (Mann Ki Baat) ನ 119 ನೇ ಸಂಚಿಕೆಯಲ್ಲಿ ಮಾತನಾಡಿದರು. ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ಬಿಜೆಪಿ ಸಂಸದ ಬಾನ್ಸುರಿ ಸ್ವರಾಜ್ ಮತ್ತು ಇತರರು ಪ್ರಧಾನಿಯವರ ಮಾಸಿಕ ರೇಡಿಯೊ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಪ್ರಧಾನಿ ಮೋದಿ ಇಸ್ರೋದ ಯಶಸ್ಸನ್ನು ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕಳೆದ ತಿಂಗಳು ದೇಶವು ಇಸ್ರೋದ 100 ನೇ ಉಪಗ್ರಹ ಉಡಾವಣೆಗೆ ಸಾಕ್ಷಿಯಾಯಿತು ಎಂದು ಅವರು ಹೇಳಿದ್ದಾರೆ. ಭಾರತ ಕ್ರಿಕೆಟ್ ಜ್ವರದಿಂದ ತುಂಬಿದೆ, ಆದರೆ ನಾವು ಬಾಹ್ಯಾಕಾಶದಲ್ಲಿ ಶತಕ ಗಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, 100 ನೇ ಉಪಗ್ರಹ ಉಡಾವಣೆ ಬಗ್ಗೆ ಇದು ಕೇವಲ ಒಂದು ಸಂಖ್ಯೆಯಲ್ಲ, ಪ್ರತಿದಿನ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಎತ್ತರವನ್ನು ಮುಟ್ಟುವ ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಇಸ್ರೋ ಯಶಸ್ಸಿನ ವ್ಯಾಪ್ತಿ ಸಾಕಷ್ಟು ದೊಡ್ಡದಾಗಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಸುಮಾರು 460 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಮತ್ತು ಇದರಲ್ಲಿ ಇತರ ದೇಶಗಳ ಅನೇಕ ಉಪಗ್ರಹಗಳು ಸೇರಿವೆ. ಇತ್ತೀಚಿನ ವರ್ಷಗಳಲ್ಲಿ, ಬಾಹ್ಯಾಕಾಶ ವಿಜ್ಞಾನದಲ್ಲಿ ನಮ್ಮ ತಂಡದಲ್ಲಿ ಮಹಿಳಾ ಶಕ್ತಿಯ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ "ಮುಂಬರುವ ಕೆಲವು ದಿನಗಳಲ್ಲಿ ನಾವು 'ರಾಷ್ಟ್ರೀಯ ವಿಜ್ಞಾನ ದಿನ'ವನ್ನು ಆಚರಿಸಲಿದ್ದೇವೆ. ನಮ್ಮ ಮಕ್ಕಳು ಮತ್ತು ಯುವಕರು ವಿಜ್ಞಾನದಲ್ಲಿ ಆಸಕ್ತಿ ಮತ್ತು ಉತ್ಸಾಹವನ್ನು ಹೊಂದಿರುವುದು ಬಹಳ ಮುಖ್ಯ. ಇದಕ್ಕಾಗಿ ಕನಿಷ್ಠ ಒಂದು ದಿನವಾದರೂ ವಿಜ್ಞಾನಿಗಳಾಗಿ ಕಾಲ ಕಳೆಯಿರಿ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.
AI ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಮೆಚ್ಚುಗೆ
ಕೃತಕ ಬುದ್ಧಿ ಮತ್ತೆಯ ಬಗ್ಗೆ ಮಾತನಾಡಿದ ಮೋದಿ, ನಾನು AI ಕುರಿತ ದೊಡ್ಡ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ಹೋಗಿದ್ದೆ. ಈ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಜಗತ್ತು ಬಹಳವಾಗಿ ಮೆಚ್ಚಿಕೊಂಡಿತು. ನಮ್ಮ ದೇಶದ ಜನರು ಇಂದು AI ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಉದಾಹರಣೆಗಳು ಜಗತ್ತಿನ ಕಣ್ಮುಂದಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Modi-Trump Meet: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರದಲ್ಲಿ ಮುಂದುವರಿಯಲು ಮೋದಿ-ಟ್ರಂಪ್ ಸಮ್ಮತಿ
ಮಹಿಳಾ ದಿನದಂದು ವಿಶೇಷ ಉಪಕ್ರಮ
ದೇಶದ ಹೆಣ್ಣುಮಕ್ಕಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಭಾರತೀಯ ಸಂಸ್ಕೃತಿಯಲ್ಲಿ ಅವರ ಮೇಲಿನ ಗೌರವ ಯಾವಾಗಲೂ ಆಳವಾಗಿ ಬೇರೂರಿದೆ ಎಂದು ಹೇಳಿದರು. ಈ ಬಾರಿ ಮಹಿಳಾ ದಿನದಂದು, ನಮ್ಮ ಮಹಿಳಾ ಶಕ್ತಿಗೆ ಸಮರ್ಪಿತವಾದ ಉಪಕ್ರಮ ತೆಗೆದುಕೊಳ್ಳಲಿದ್ದೇನೆ, ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಒಂದು ದಿನದ ಮಟ್ಟಿಗೆ ಅವರಿಗೆ ಹಸ್ತಾಂತರಿಸಲಿದ್ದೇನೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿರುವ ಮಹಿಳೆಯರು ಮಾರ್ಚ್ 8 ರಂದು ತಮ್ಮ ಕೆಲಸ ಮತ್ತು ಅನುಭವಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.