ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana Custody: ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಕಸ್ಟಡಿ ಅವಧಿ ವಿಸ್ತರಣೆ

Tahawwur Rana: ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಯಲ್ಲಿರುವ 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ ಬಂಧನದ ಅವಧಿಯನ್ನು ಕೋರ್ಟ್‌ ವಿಸ್ತರಿಸಿದೆ. ದಿಲ್ಲಿ ನ್ಯಾಯಾಲಯ ತಹವ್ವೂರ್ ರಾಣಾನ ಎನ್ಐಎ ಕಸ್ಟಡಿಯನ್ನು ಇನ್ನೂ 12 ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಕಸ್ಟಡಿ ಅವಧಿ ವಿಸ್ತರಣೆ

ತಹವ್ವೂರ್ ರಾಣಾ.

Profile Ramesh B Apr 28, 2025 5:47 PM

ಹೊಸದಿಲ್ಲಿ: ಅಮೆರಿಕದಿಂದ ಹಸ್ತಾಂತರಿಸಲಾದ 26/11 ಮುಂಬೈ ಭಯೋತ್ಪಾದಕ ದಾಳಿ (26/11 Mumbai terror attacks)ಯ ಆರೋಪಿ ತಹವ್ವೂರ್ ರಾಣಾ (Tahawwur Rana)ನನ್ನು ಏ. 10ರಂದು ಭಾರತಕ್ಕೆ ಕರೆತರಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಆತನನ್ನು ವಶಕ್ಕೆ ಪಡೆದುಕೊಂಡಿದೆ (Tahawwur Rana Custody). ಇದೀಗ ದಿಲ್ಲಿ ನ್ಯಾಯಾಲಯ ತಹವ್ವೂರ್ ರಾಣಾನ ಎನ್ಐಎ ಕಸ್ಟಡಿಯನ್ನು ಇನ್ನೂ 12 ದಿನಗಳವರೆಗೆ ವಿಸ್ತರಿಸಿದೆ. ರಾಣಾನ 18 ದಿನಗಳ ಎನ್ಐಎ ಕಸ್ಟಡಿ ಅವಧಿ ಮುಗಿದ ನಂತರ ಬಿಗಿ ಭದ್ರತೆಯ ನಡುವೆ ವಿಶೇಷ ಎನ್ಐಎ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರು ಕಸ್ಟಡಿ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದರು.

ಪ್ರತಿ 24 ಗಂಟೆಗಳಿಗೊಮ್ಮೆ ರಾಣಾನ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ ಮತ್ತು ಪ್ರತಿದಿನ ವಕೀಲರನ್ನು ಭೇಟಿಯಾಗಲು ಅವಕಾಶ ನೀಡುವಂತೆ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಎನ್ಐಎಗೆ ನಿರ್ದೇಶನ ನೀಡಿದರು. ಈ ವೇಳೆ ನ್ಯಾಯಾಧೀಶರು ರಾಣಾಗೆ ಸಾಫ್ಟ್ ಟಿಪ್ ಪೆನ್ (Soft-tip pen) ಮಾತ್ರ ಬಳಸಲು ಮತ್ತು ಎನ್ಐಎ ಅಧಿಕಾರಿಗಳ ಸಮ್ಮುಖದಲ್ಲಿ ವಕೀಲರನ್ನು ಭೇಟಿಯಾಗಲು ಅನುಮತಿ ನೀಡಿದರು ಎಂದು ವರದಿಯೊಂದು ತಿಳಿಸಿದೆ.

ತಹವ್ವೂರ್ ರಾಣಾ ಕಸ್ಟಡಿ ವಿಸ್ತರಣೆಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Tahawwur Rana: ಇವನೇ ನೋಡಿ ತಹವ್ವೂರ್ ರಾಣಾ; ಮುಂಬೈ ದಾಳಿ ಆರೋಪಿಯ ಮೊದಲ ಫೋಟೊ ರಿಲೀಸ್‌

ಏ. 10ರಂದು ನ್ಯಾಯಾಲಯವು ರಾಣಾನನ್ನು 18 ದಿನಗಳ ಕಸ್ಟಡಿಗೆ ಒಪ್ಪಿಸಿತ್ತು. ಕ್ರಿಮಿನಲ್ ಪಿತೂರಿಯ ಭಾಗವಾಗಿ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ಇಡೀ ಕಾರ್ಯಾಚರಣೆಯ ಬಗ್ಗೆ ರಾಣಾ ಜತೆಗೆ ಚರ್ಚಿಸಿದ್ದ ಎಂದು ಎನ್ಐಎ ಆರೋಪಿಸಿದೆ.

26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವೂರ್ ಹುಸೇನ್‌ ರಾಣಾ (64)ನನ್ನು ಈ ತಿಂಗಳ ಆರಂಭದಲ್ಲಿ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಅಮೆರಿಕದಿಂದ ಭಾರತಕ್ಕೆ ಕರೆತರಲಾಯಿತು. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನೆಂದು ಗುರುತಿಸಲ್ಪಡುವ ಆತನ ವಿರುದ್ಧ ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು, ಕೊಲೆ ಮತ್ತು ಫೋರ್ಜರಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪ ಹೊರಿಸಲಾಗಿದೆ.

26/11ರ ಮುಂಬೈ ದಾಳಿ ಬಗ್ಗೆ ರಾಣಾನನ್ನು ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಈ ಭಯೋತ್ಪಾದಕ ದಾಳಿಯ ಇನ್ನೊಬ್ಬ ಸಂಚುಕೋರ ಡೇವಿಡ್ ಹೆಡ್ಲಿಯೊಂದಿಗಿನ ಫೋನ್‌ ಸಂಭಾಷಣೆಯಲ್ಲಿ ರಾಣಾ ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್ ಭಯೋತ್ಪಾದಕರಿಗೆ ಪಾಕಿಸ್ತಾನವು ಬಹುಮಾನ ನೀಡಬೇಕು ಎಂದು ಹೇಳಿದ್ದ ಎಂಬುದಾಗಿ ಮೂಲಗಳು ತಿಳಿಸಿವೆ.

2008ರ ನ. 26ರಂದು 10 ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರೇಬಿಯನ್ ಸಮುದ್ರದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈ ನುಸುಳಿ ರೈಲ್ವೆ ನಿಲ್ದಾಣ, ಹೋಟೆಲ್‌ ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತು. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.