ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಕೇಸ್; ಮಾಜಿ ಆಮ್ ಆದ್ಮಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ
Delhi Riots: 2020ರ ದೆಹಲಿ ಗಲಭೆಯ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಮಾಜಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಆರೋಪಿಗಳಿಗೆ ದೆಹಲಿಯ ಕರ್ಕರಡೂಮಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಕ್ರೌರ್ಯವನ್ನು ಉಲ್ಲೇಖಿಸಿದ ನ್ಯಾಯಾಲಯ, ಇದು ಅತ್ಯಂತ ಗಂಭೀರ ಅಪರಾಧ ಎಂದು ಹೇಳಿದೆ.
ಸಂಗ್ರಹ ಚಿತ್ರ -
ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ (Delhi Riots) ವೇಳೆ ಗುಪ್ತಚರ ದಳದ (Intelligence Bureau) ಅಧಿಕಾರಿ ಅಂಕಿತ್ ಶರ್ಮಾ (Ankit Sharma) ಹತ್ಯೆ ಪ್ರಕರಣದಲ್ಲಿ ಮಾಜಿ ಆಮ್ ಆದ್ಮಿ ಪಕ್ಷ (Aam Aadmi Party) ಕೌನ್ಸಿಲರ್ ತಾಹಿರ್ ಹುಸೇನ್ (Tahir Hussain) ಸೇರಿದಂತೆ ಆರೋಪಿಗಳಿಗೆ ದೆಹಲಿಯ ಕರ್ಕರಡೂಮಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತೀರ್ಪು ಪ್ರಕಟಿಸಿದ ನ್ಯಾಯಾಲಯ, "ಈ ಹತ್ಯೆ ಅತ್ಯಂತ ಕ್ರೂರ ರೀತಿಯಲ್ಲಿ ನಡೆದಿದೆ. ಕೊಲೆ ಮಾಡಿದ ನಂತರವೂ ಮೃತದೇಹವನ್ನು ಚರಂಡಿಗೆ ಎಸೆದಿರುವುದು ಅಮಾನವೀಯ ಕೃತ್ಯವಾಗಿದೆ. ಇದು 'ಅಪರೂಪದಲ್ಲೇ ಅಪರೂಪ' (Rarest of Rare) ಪ್ರಕರಣದ ವ್ಯಾಪ್ತಿಗೆ ಸೇರುವಷ್ಟು ಗಂಭೀರವಾಗಿದೆ" ಎಂದು ಹೇಳಿದೆ. ಆದರೆ, ಆರೋಪಿಗಳ ವೈಯಕ್ತಿಕ ಪಾತ್ರ, ಅವರ ಶಿಕ್ಷಣ ಹಾಗೂ ಪ್ರಕರಣದ ಸಂದರ್ಭಗಳನ್ನು ಪರಿಗಣಿಸಿ ಮರಣದಂಡನೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
2020ರ ಫೆಬ್ರವರಿ 25ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ವೇಳೆ 26 ವರ್ಷದ ಐಬಿ ಭದ್ರತಾ ಸಹಾಯಕ ಅಂಕಿತ್ ಶರ್ಮಾ ಅವರು ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಶಮನಗೊಳಿಸಲು ಪ್ರಯತ್ನಿಸುತ್ತಿದ್ದ ವೇಳೆ ಗುಂಪೊಂದು ಅವರನ್ನು ಸುತ್ತುವರಿದು ಹಲ್ಲೆ ನಡೆಸಿತ್ತು.
ಚಾಕು, ಕಬ್ಬಿಣದ ರಾಡ್, ಕಲ್ಲು ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ ಬಳಿಕ ಅವರ ಮೃತದೇಹವನ್ನು ಸಮೀಪದ ಚರಂಡಿಗೆ ಎಸೆಯಲಾಗಿತ್ತು. ಮರುದಿನ ಪತ್ತೆಯಾದ ಮೃತದೇಹದಲ್ಲಿ 51 ಚಾಕು ಇರಿತದ ಗಾಯಗಳು ಕಂಡುಬಂದಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ತಾಹಿರ್ ಹುಸೇನ್ ಪ್ರತಿಕ್ರಿಯೆ
ತಾಹಿರ್ ಹುಸೇನ್ ಪರ ವಕೀಲ ತಾರಾ ನರುಲಾ, "ನಮ್ಮ ಕಕ್ಷಿದಾರರು ನೇರವಾಗಿ ಹತ್ಯೆಯಲ್ಲಿ ಭಾಗಿಯಾಗಿರಲಿಲ್ಲ. ಅವರು ಗುಂಪಿನಲ್ಲಷ್ಟೇ ಇದ್ದರು. ಅವರು ನಿರ್ದೋಷಿ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು" ಎಂದು ಹೇಳಿದ್ದಾರೆ. ತಾಹಿರ್ ಹುಸೇನ್ ಕೂಡ, "ನ್ಯಾಯ ತಡವಾಗಬಹುದು, ಆದರೆ ನಿರಾಕರಿಸಲಾಗುವುದಿಲ್ಲ. ಹೈಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಸಚಿವರ ಪ್ರತಿಕ್ರಿಯೆ
ತೀರ್ಪಿನ ಬಳಿಕ ದೆಹಲಿ ಕಾನೂನು ಸಚಿವ ಕಪಿಲ್ ಮಿಶ್ರಾ, "ತಾಹಿರ್ ಹುಸೇನ್‌ಗೆ ಜೀವಾವಧಿ ಶಿಕ್ಷೆ ನ್ಯಾಯದ ಆರಂಭ ಮಾತ್ರ. ಅಂಕಿತ್ ಶರ್ಮಾ ಅವರ ಮೇಲೆ ನಡೆದ ಕ್ರೂರ ಕೃತ್ಯವನ್ನು ಗಮನಿಸಿದರೆ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ. ಹೈಕೋರ್ಟ್‌ನಲ್ಲಿ ಜೀವಾವಧಿ ಶಿಕ್ಷೆಯನ್ನು ಮರಣದಂಡನೆಗೆ ಪರಿವರ್ತಿಸಬೇಕೆಂದು ಆಶಿಸುತ್ತೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.