ನವದೆಹಲಿ, ಜ. 18: ನವೆಂಬರ್ 10ರಂದು ದೆಹಲಿ ಕೆಂಪು ಕೋಟೆ ಸಮೀಪದ ಸ್ಫೋಟ ನಡೆದ ನಂತರ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ (Al Falah University) ಸುಮಾರು 140 ಕೋಟಿ ರೂ. ಮೌಲ್ಯದ ಭೂಮಿ ಮತ್ತು ಕಟ್ಟಡವನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಹಾಗೆಯೇ ಅಲ್ ಫಲಾಹ್ ಗ್ರೂಪ್ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ (Jawad Ahmed Siddiqui) ಮತ್ತು ಅವರ ದತ್ತಿ ಟ್ರಸ್ಟ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ವೇಳೆವಿವಿ ಬಗ್ಗೆ ಅನೇಕಬೆಚ್ಚಿ ಬೀಳಿಸುವ ವಿವರ ಹೊರ ಬಿದ್ದಿದೆ.
ತನಿಖಾ ಸಂಸ್ಥೆಯು ನವೆಂಬರ್‌ನಲ್ಲಿ ಸಿದ್ದಿಕಿಯನ್ನು ಅವರ ಟ್ರಸ್ಟ್ (ಅಲ್ ಫಲಾಹ್ ಚಾರಿಟೇಬಲ್) ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಿತು. ಅಲ್ ಫಾಲಾ ಟ್ರಸ್ಟ್ ಹಾಗೂ ವಿಶ್ವವಿದ್ಯಾಲಯದ ಅಧ್ಯಕ್ಷರ ವಿರುದ್ಧ ನಕಲಿ ರೋಗಿಗಳನ್ನು ನೇಮಿಸುವುದು, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಹಾಗೂ ಯುಜಿಸಿ (UGC) ಮಾನ್ಯತೆಗಳ ವಿಷಯದಲ್ಲಿ ತಪ್ಪುಮಾಹಿತಿ ನೀಡಿರುವುದು ಸೇರಿದಂತೆ ಹಲವು ಆರೋಪಗಳಿವೆ.
ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣ; ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?
ಹಣಕಾಸು ಅಪರಾಧಗಳ ತನಿಖೆ ನಡೆಸುವ ಸಂಸ್ಥೆಯು ತನ್ನ ಆರೋಪಪಟ್ಟಿಯಲ್ಲಿ, ಕೆಂಪು ಕೋಟೆ ಸ್ಫೋಟ ಪ್ರಕರಣದ ಮುಖ್ಯ ಆರೋಪಿಯಾಗಿರುವ ಉಮರ್ ಉನ್ ನಬಿ ಹಾಗೂ ಇತರ ಆರೋಪಿತ ವೈದ್ಯರನ್ನು ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಮೀಲ್ ಖಾನ್ ಶಿಫಾರಸು ಮಾಡಿದ್ದು, ಅಂತಿಮವಾಗಿ ಅದನ್ನು ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದೀಖಿ ಅನುಮೋದಿಸಿದ್ದಾರೆ ಎಂದು ತಿಳಿಸಿದೆ.
ಆರೋಪಿ ವೈದ್ಯರ ವಿರುದ್ಧದ ದೂರುಗಳು ಅಲ್ ಫಲಾಹ್ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಾಂಶುಪಾಲರನ್ನು ಒಳಗೊಂಡಂತೆ ಹಲವು ಪ್ರಮುಖ ನಿರ್ವಹಣಾ ಸಿಬ್ಬಂದಿಯ ಹೇಳಿಕೆಗಳು ಮತ್ತು ದಾಳಿಗಳ ವೇಳೆ ವಶಪಡಿಸಿಕೊಳ್ಳಲಾದ ದಾಖಲೆ ಸಾಕ್ಷ್ಯಗಳನ್ನು ಆಧರಿಸಿವೆ.
ಏಜೆನ್ಸಿಯ ತನಿಖೆ ವಿಶ್ವವಿದ್ಯಾಲಯದ ಮೂಲಕ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಹಾಗೂ ಆ ಹಣವನ್ನು ಹಣ ವರ್ಗಾವಣೆ ತಡೆ ಕಾಯ್ದೆ, 2002ರ ಅಡಿಯಲ್ಲಿ ಹೇಗೆ ಬಳಸಲಾಗಿದೆ ಎಂಬ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ದೆಹಲಿ ಸ್ಫೋಟ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಸಿಕ್ಯೂಷನ್ ದೂರಿನಲ್ಲಿ ಅಲ್ ಫಲಾಹ್‌ನ ಐಟಿ ವಿಭಾಗದ ಅಧಿಕಾರಿ ಫರ್ದೀನ್ ಬೇಗ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಅವರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನಕಲಿ ರೋಗಿಗಳನ್ನು ದಾಖಲಿಸುತ್ತಿದೆ ಎಂದು ತಿಳಿದಿತ್ತು ಎಂಬುದಾಗಿ ಒಪ್ಪಿಕೊಂಡಿದ್ದಾರೆ.
ತಪಾಸಣೆಯ ಸಮಯದಲ್ಲಿ ರೋಗಿಗಳು ಇದ್ದಾರೆ ಎಂಬುದನ್ನು ತೋರಿಸಲು ಈ ನಕಲಿ ರೋಗಿಗಳನ್ನು ಆಶಾ ಕಾರ್ಯಕರ್ತರೊಂದಿಗೆ ಸಂಯೋಜನೆ ಮಾಡಿಕೊಂಡು ಉದ್ದೇಶಪೂರ್ವಕವಾಗಿ ನೇಮಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ನಕಲಿ ರೋಗಿಗಳ ವಿವರವಾದ ದಾಖಲೆಗಳು ಮತ್ತು ಪಾವತಿ ವಿವರಗಳನ್ನು ಅಲ್ ಫಲಾಹ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಮ್ರಾನ್ ಆಲಂ ನಿರ್ವಹಿಸುತ್ತಿದ್ದರು ಮತ್ತು ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅನುಮೋದಿಸಿದ್ದರು ಎಂದು ಅಧಿಕಾರಿಗಳು ಮಾಇತಿ ನೀಡಿದ್ದಾರೆ.
ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ವೈದ್ಯರನ್ನು ಅವರ ಅಧಿಕಾರಾವಧಿಯಲ್ಲಿ ನೇಮಕ ಮಾಡಲಾಗಿತ್ತು ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಪ್ರಾಂಶುಪಾಲರು ಇಡಿಗೆ ತಿಳಿಸಿದ್ದಾರೆ.
2021ರ ಅಕ್ಟೋಬರ್‌ನಿಂದ ಜನರಲ್ ಮೆಡಿಸಿನ್ ವಿಭಾಗದಲ್ಲಿ ಜೂನಿಯರ್ ರೆಸಿಡೆಂಟ್ ಆಗಿರುವ ಡಾ. ಗನೈ, ಔಷಧಶಾಸ್ತ್ರದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಸಯೀದ್ ಮತ್ತು 2024ರ ಮೇಯಿಂದ ಜನರಲ್ ಮೆಡಿಸಿನ್‌ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಡಾ. ನಬಿ ಉಗ್ರ ಚಟುವಟಿಕೆ ನಡೆಸುತ್ತಿದ್ದರು.
ದೆಹಲಿ ಸ್ಪೋಟಕ್ಕೆ ವೈದ್ಯರಿಂದಲೇ ಫಂಡಿಂಗ್; 26 ಲಕ್ಷ ರೂ. ದೇಣಿಗೆ ನೀಡಿದ 5 ಡಾಕ್ಟರ್ಸ್
ಈ ನೇಮಕಾತಿಗಳನ್ನು ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಮುಖ್ಯಸ್ಥರು ಶಿಫಾರಸು ಮಾಡಿದ್ದಾರೆ ಮತ್ತು ಫರಿದಾಬಾದ್ ಮೂಲದ ಅಲ್-ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅನುಮೋದಿಸಿದ್ದಾರೆ ಎಂದು ಅವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದರು. ನೇಮಕಾತಿಯ ಸಮಯದಲ್ಲಿ ಯಾವುದೇ ಪೊಲೀಸ್ ಪರಿಶೀಲನೆ ನಡೆಸಲಾಗಿಲ್ಲ ಎಂದು ವಿಸಿ ಇಡಿಗೆ ತಿಳಿಸಿದರು.
ಅಪರಾಧದ ಮೂಲಕ ಗಳಿಸಿದ ಒಟ್ಟು ಆದಾಯ 493.24 ಕೋಟಿ ರುಪಾಯಿ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ವಿದ್ಯಾರ್ಥಿಗಳನ್ನು ಮೋಸಗೊಳಿಸಿ, ನ್ಯಾಕ್ ಮಾನ್ಯತೆ ಹಾಗೂ ಮಾನ್ಯ ಯುಜಿಸಿ ಗುರುತಿನ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿ, ವಾರ್ಷಿಕ ಟ್ಯೂಷನ್ ಮತ್ತು ಪರೀಕ್ಷಾ ಶುಲ್ಕಗಳ ಹೆಸರಿನಲ್ಲಿ ಈ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ತನಿಖೆಯ ಭಾಗವಾಗಿ ಇಡಿ, ಅಲ್ ಫಲಾಹ್ ವಿಶ್ವವಿದ್ಯಾಲಯದ ಹಲವು ಹಿರಿಯ ಕಾರ್ಯನಿರ್ವಾಹಕರು ಮತ್ತು ಅಧ್ಯಾಪಕರ ಹೇಳಿಕೆಗಳನ್ನು ದಾಖಲಿಸಿದೆ. 2025ರ ಮಾರ್ಚ್ ಆಚೆಗಿನ ವಿಶ್ವವಿದ್ಯಾಲಯದ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಪರಾಧದ ಆದಾಯ ಹೆಚ್ಚಾಗಬಹುದಾದ್ದರಿಂದ ಪೂರಕ ಆರೋಪಪಟ್ಟಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.