ಇಂದು ತಾಜ್‍ಮಹಲ್ ಭೇಟಿ ನೀಡಲಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ!
Donald Trump Jr. Visit Taj Mahal: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಇಂದು ಆಗ್ರಾದ ತಾಜ್‌ಮಹಲ್‍ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಪ್ರವೇಶದ ಎಲ್ಲಾ ಮಾರ್ಗಗಳಲ್ಲಿ ಕಠಿಣ ಪರಿಶೀಲನೆ ನಡೆಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಪ್ರಮುಖ ಸ್ಥಳಗಳಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಾಜ್ಮಹಲ್ಗೆ ಭೇಟಿ ನೀಡಲಿದ್ದಾರೆ ಡೊನಾಲ್ಡ್ ಟ್ರಂಪ್ ಜೂನಿಯರ್ (ಸಂಗ್ರಹ ಚಿತ್ರ) -
ಆಗ್ರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ (Donald Trump Jr.) ಗುರುವಾರ ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್‍ಮಹಲ್‌ಗೆ (Taj Mahal) ಭೇಟಿ ನೀಡಲಿದ್ದಾರೆ. ಟ್ರಂಪ್ ಜೂನಿಯರ್ ಅವರು ಮಧ್ಯಾಹ್ನ 1.30ರ ಸುಮಾರಿಗೆ ಆಗ್ರಾದ ಖೇರಿಯಾ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನದಲ್ಲಿ ಇಳಿದಿದ್ದು, ನಂತರ ಐತಿಹಾಸಿಕ ಸ್ಮಾರಕಕ್ಕೆ ತೆರಳಲಿದ್ದಾರೆ.
ಈ ಭೇಟಿಯಲ್ಲಿ ಸುಮಾರು 40 ದೇಶಗಳ 126 ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಅವರೆಲ್ಲರೂ 17ನೇ ಶತಮಾನದ ಅದ್ಭುತವನ್ನು ವೀಕ್ಷಿಸಲಿದ್ದಾರೆ. ವಿಶ್ವದ ದೊಡ್ಡಣ್ಣನ ಪುತ್ರ ಹಾಗೂ ಗಣ್ಯ ಅತಿಥಿಗಳು ತಾಜ್‍ಮಹಲ್‌ಗೆ ಭೇಟಿ ನೀಡುತ್ತಿರುವುದರಿಂದ, ಸ್ಥಳೀಯ ಅಧಿಕಾರಿಗಳು ತೀವ್ರ ಭದ್ರತೆ ಏರ್ಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ನಗರದ ಪ್ರಮುಖ ಸ್ಥಳಗಳಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿಯಲ್ಲಿ ಎಸಿಪಿ ಮತ್ತು ಎಡಿಸಿ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ. ಪೊಲೀಸರು, ಜನಸಂದಣಿ ನಿರ್ವಹಣೆ ಮತ್ತು ಮಾರ್ಗದುದ್ದಕ್ಕೂ ಭದ್ರತೆಯನ್ನು ನೋಡಿಕೊಳ್ಳುತ್ತಾರೆ.
ಅಂದಹಾಗೆ, ಇದು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಎರಡನೇ ಭಾರತ ಭೇಟಿಯಾಗಿದೆ. ಈ ಹಿಂದೆ ಅವರು ಫೆಬ್ರವರಿ 2018 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ನವದೆಹಲಿ, ಮುಂಬೈ, ಪುಣೆ ಮತ್ತು ಕೋಲ್ಕತ್ತಾಗೆ ಪ್ರಯಾಣಿಸಿದ್ದರು.
Donald Trump: ಮೋದಿ ಒಬ್ಬ ಮಹಾನ್ ವ್ಯಕ್ತಿ, ಸ್ನೇಹಿತ! ಭಾರತ ಭೇಟಿ ಬಗ್ಗೆ ಸುಳಿವು ಕೊಟ್ರಾ ಡೊನಾಲ್ಡ್ ಟ್ರಂಪ್?
ಇನ್ನು ಟ್ರಂಪ್ ಕುಟುಂಬಕ್ಕೆ ತಾಜ್‍ಮಹಲ್ ಬಹಳ ನೆಚ್ಚಿನ ತಾಣವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತಮ್ಮ ಕುಟುಂಬದೊಂದಿಗೆ ಆಗ್ರಾಗೆ ಭೇಟಿ ನೀಡಿದ್ದರು. ಸ್ಮಾರಕದ ವಾಸ್ತುಶಿಲ್ಪದ ಸೌಂದರ್ಯಕ್ಕೆ ಮಾರುಹೋಗಿರುವ ಅವರು, ಸ್ಮಾರಕದ ಸಂದರ್ಶಕರ ಪುಸ್ತಕದಲ್ಲಿ ಇನ್‌ಕ್ರೆಡಿಬಲ್ ಎಂದು ಬರೆದಿದ್ದರು. ಈ ಬರಹ ವ್ಯಾಪಕ ಗಮನ ಸೆಳೆಯಿತು.
ವಿವಾಹ ಸಮಾರಂಭದಲ್ಲಿ ಭಾಗವಹಿಸಲಿರುವ ಟ್ರಂಪ್ ಜೂನಿಯರ್
ಟ್ರಂಪ್ ಜೂನಿಯರ್ ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿದ್ದು, ಈ ವಾರದ ಕೊನೆಯಲ್ಲಿ ಭಾರತೀಯ-ಅಮೆರಿಕನ್ ದಂಪತಿಗಳ ಡೆಸ್ಟಿನೇಷನ್ ಮದುವೆಗಾಗಿ ಉದಯಪುರಕ್ಕೆ ತೆರಳುವ ಸಾಧ್ಯತೆಯಿದೆ. ಅವರ ಭೇಟಿಗೆ ಮುಂಚಿತವಾಗಿ ವ್ಯವಸ್ಥೆಗಳನ್ನು ಪರಿಶೀಲಿಸಲು ಅಮೆರಿಕದ ಭದ್ರತಾ ತಂಡವು ಈಗಾಗಲೇ ನಗರದಲ್ಲಿ ಬೀಡು ಬಿಟ್ಟಿದೆ. ನವೆಂಬರ್ 21 ಮತ್ತು 22 ರಂದು ವಿವಾಹ ಆಚರಣೆಗಳು ನಡೆಯಲಿವೆ ಎಂದು ತಿಳಿದುಬಂದಿದೆ. ವಿವಾಹ ಸಮಾರಂಭವು ಪಿಚೋಲಾ ಸರೋವರದ ಐತಿಹಾಸಿಕ ಜಗಮಂದಿರ ಅರಮನೆಯಲ್ಲಿ ನಡೆಯಲಿದ್ದು, ಸಿಟಿ ಪ್ಯಾಲೇಸ್ ಸಂಕೀರ್ಣದೊಳಗಿನ ಮಾಣೆಕ್ ಚೌಕ್‌ನಲ್ಲಿ ಹೆಚ್ಚುವರಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
ಟ್ರಂಪ್ ಜೂನಿಯರ್ ತಮ್ಮ ಭೇಟಿಯ ಸಮಯದಲ್ಲಿ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ತಂಗಲಿದ್ದಾರೆ ಎಂದು ಹೇಳಲಾಗಿದೆ. ಪೂರ್ವಸಿದ್ಧತಾ ಕಾರ್ಯದ ಅಂಗವಾಗಿ, ರಾಜಸ್ಥಾನ ಆಡಳಿತವು ಉದಯಪುರದಾದ್ಯಂತ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದುದ್ದಕ್ಕೂ, ಬಿಗಿ ಭದ್ರತೆಯನ್ನು ಏರ್ಪಡಿಸಿದೆ. ಎರಡು ದಿನಗಳ ಉತ್ಸವಗಳಲ್ಲಿ ಹಲವಾರು ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ಇತರ ಪ್ರಮುಖ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.