'ಭಯೋತ್ಪಾದನೆ ನಿಂತರೆ ಮಾತ್ರ ಮಾತುಕತೆ ಆರಂಭ': ಚಿಕಾಗೋದಲ್ಲಿ ಪಾಕ್ ವಿದ್ಯಾರ್ಥಿಗೆ ರಾಹುಲ್ ಗಾಂಧಿ ಖಡಕ್ ಸಂದೇಶ
Rahul Gandhi at the Chicago University: ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಚಿಕಾಗೋ ವಿವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಪಾಕಿಸ್ತಾನದ ವಿದ್ಯಾರ್ಥಿಯೊಬ್ಬ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, (Rahul Gandhi) ಚಿಕಾಗೋ ವಿವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಪಾಕಿಸ್ತಾನದ ವಿದ್ಯಾರ್ಥಿಯೊಬ್ಬ ಭಾರತ ಹಾಗೂ ಪಾಕಿಸ್ತಾನದ (India - Pakistan) ನಡುವಿನ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಿದರೆ ಮಾತ್ರ ಉಭಯ ದೇಶಗಳ ನಡುವೆ ಮಾತುಕತೆ ಆರಂಭಿಸಲು ಸಾಧ್ಯ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನೆಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವುದೇ ಇಲ್ಲಿರುವ ದೊಡ್ಡ ಸಮಸ್ಯೆಯಾಗಿದೆ. ನಮ್ಮ ಅಮಾಯಕ ನಾಗರಿಕರ ಹತ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ನಮಗೆ ಖಂಡಿತವಾಗಿಯೂ ಅಸಾಧ್ಯ. ಯಾವ ಕ್ಷಣದಲ್ಲಿ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತದೆಯೋ, ಆಗ ಮತ್ತೆ ಮಾತುಕತೆಯ ಬಗ್ಗೆ ಚಿಂತಿಸಬಹುದಷ್ಟೇ ಎಂದು ಉತ್ತರಿಸಿದರು.
ಇದೇ ಸಂವಾದದ ವೇಳೆ ಭಾರತದ ಪ್ರಸ್ತುತ ವಿದೇಶಾಂಗ ನೀತಿ ಮತ್ತು ಜಾಗತಿಕ ರಾಜಕೀಯದಲ್ಲಿ ಭಾರತದ ಸ್ಥಾನಮಾನದ ಕುರಿತು ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಪಾಕಿಸ್ತಾನವು ಇರಾನ್ ಮತ್ತು ಅಮೆರಿಕದಂತಹ ರಾಷ್ಟ್ರಗಳೊಂದಿಗೆ ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರೆ, ಭಾರತ ಮಾತ್ರ ಏನೂ ಮಾಡದೆ ಕೇವಲ ನೋಡುತ್ತಾ ಕುಳಿತಿದೆ ಎಂಬುದನ್ನು ಕಂಡು ನನಗೆ ಆಶ್ಚರ್ಯವಾಗಿದೆ" ಎಂದು ಹೇಳಿದ್ದಾರೆ.
ಭಾರತದ ಐತಿಹಾಸಿಕ ವಿದೇಶಾಂಗ ನೀತಿಯನ್ನು ಸ್ಮರಿಸಿದ ಅವರು, "ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತವು ಅತ್ಯಂತ ಪ್ರಬುದ್ಧವಾದ ಭೌಗೋಳಿಕ-ರಾಜಕೀಯ ತಿಳುವಳಿಕೆಯನ್ನು ಹೊಂದಿತ್ತು. ನಮಗೆ ನಮ್ಮದೇ ಆದ ಸ್ವತಂತ್ರ ಆಲೋಚನೆ ಇತ್ತು ಮತ್ತು ಭಾರತಕ್ಕೆ ಯಾವುದು ಲಾಭದಾಯಕವೋ ಅದರ ಆಧಾರದ ಮೇಲೆ ನಮ್ಮ ವಿದೇಶಾಂಗ ನೀತಿ ರೂಪುಗೊಳ್ಳುತ್ತಿತ್ತು.
ನಮ್ಮ ದೇಶದ ಗಾತ್ರ, ಇತಿಹಾಸ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಅನುಗುಣವಾಗಿ ನಾವು ಜಾಗತಿಕ ಮಟ್ಟದ ಪ್ರಮುಖ ಮಾತುಕತೆಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ ದುರದೃಷ್ಟವಶಾತ್, ಭಾರತ ಇಂದು ಜಾಗತಿಕ ವೇದಿಕೆಯಿಂದ ಹಿಂದೆ ಸರಿದು ಕೇವಲ ಪೋಷಕ ಪಾತ್ರಕ್ಕೆ ಸೀಮಿತವಾಗಿದೆ. ನಮಗೆ ನಮ್ಮದೇ ಆದ ಧ್ವನಿ ಮತ್ತು ದೃಷ್ಟಿಕೋನವಿದ್ದರೂ, ಇಂದು ಅದು ಕಾಣೆಯಾಗಿದೆ" ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.